2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗೆ ನಡೆದ ಘರ್ಷಣೆಯ ಬಗ್ಗೆ ಹೇಳಿಕೆ ನೀಡಿದ್ದ, ದೇಶದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಅವರ ಹೇಳಿಕೆಗಳ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸೋಮವಾರ ತಡೆಯನ್ನೂ ನೀಡಿದೆ.
ಮಧ್ಯಂತರ ಪರಿಹಾರ ನೀಡಲಾಗಿದ್ದರೂ, ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಗಾಂಧಿಯವರ ಹೇಳಿಕೆಗಳಿಗೆ ಅಸಮ್ಮತಿ ವ್ಯಕ್ತಪಡಿಸಿದೆ. “ನೀವು ನಿಜವಾದ ಭಾರತೀಯರಾಗಿದ್ದರೆ ನೀವು ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ | ಪೂರ್ಣೇಶ್ ಮೋದಿಗೆ ಸುಪ್ರೀಂ ಕೋರ್ಟ್ ನೋಟಿಸ್
ಆದರೆ ರಾಹುಲ್ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, ಓರ್ವ ವಿರೋಧ ಪಕ್ಷದ ನಾಯಕರಿಗೆ ಸಮಸ್ಯೆಗಳ ಮಾತನಾಡಲು, ಧ್ವನಿ ಎತ್ತಲು ಸಾಧ್ಯವಿಲ್ಲ ಎಂದಾದರೆ ಅದು ದುರದೃಷ್ಟಕರ ಪರಿಸ್ಥಿತಿ ಎಂದು ವಾದಿಸಿದರು.
“ಪತ್ರಿಕೆಗಳಲ್ಲಿ ಪ್ರಕಟವಾಗುವ ಈ ವಿಷಯಗಳನ್ನು ಹೇಳಲು ಸಾಧ್ಯವಾಗದಿದ್ದರೆ ಅವರು ವಿರೋಧ ಪಕ್ಷದ ನಾಯಕನಾಗಲು ಸಾಧ್ಯವಿಲ್ಲ” ಎಂದೂ ಸಿಂಘ್ವಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ನೀವು ಏನು ಹೇಳುವುದಿದ್ದರೂ ಸಂಸತ್ತಿನಲ್ಲಿ ನೀವು ಏಕೆ ಹೇಳಬಾರದು? ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ನೀವು ಯಾಕೆ ಹೇಳಬೇಕು” ಎಂದು ನ್ಯಾಯಮೂರ್ತಿ ದತ್ತ ಪ್ರಶ್ನಿಸಿದರು.
“2000 ಚದರ ಕಿಲೋಮೀಟರ್ ಭಾರತೀಯ ಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆಂದು ನಿಮಗೆ ಹೇಗೆ ತಿಳಿಯಿತು? ನೀವು ಅಲ್ಲಿದ್ದೀರಾ? ನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿದೆಯೇ? ನೀವು ಯಾವುದೇ ಸಾಕ್ಷಿಯಿಲ್ಲದೆ ಈ ಹೇಳಿಕೆಗಳನ್ನು ಏಕೆ ನೀಡುತ್ತೀರಿ… ನೀವು ನಿಜವಾದ ಭಾರತೀಯರಾಗಿದ್ದರೆ ಈ ರೀತಿ ಹೇಳಿಕೆಗಳನ್ನು ನೀಡುತ್ತಿರಲಿಲ್ಲ” ಎಂದಿದ್ದಾರೆ.
“ನಮ್ಮ 20 ಭಾರತೀಯ ಯೋಧರನ್ನು ಥಳಿಸಿ ಕೊಲ್ಲಲಾಗಿದೆ ಮತ್ತು ಅದು ಕಳವಳಕಾರಿ ವಿಷಯ ಎಂದು ನಿಜವಾದ ಭಾರತೀಯನೊಬ್ಬ ಹೇಳುವ ಸಾಧ್ಯತೆಯಿದೆ” ಎಂದೂ ಸಿಂಘ್ವಿ ಹೇಳಿದರು. ಈ ವೇಳೆ, “ಸಂಘರ್ಷ ನಡೆದಾಗ ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸುವುದು ಅಸಾಮಾನ್ಯವೇ” ಎಂದು ನ್ಯಾಯಮೂರ್ತಿ ದತ್ತ ಪ್ರಶ್ನಿಸಿದರು.
ರಾಹುಲ್ ಗಾಂಧಿ ಮಾತ್ರವಲ್ಲ ಲಡಾಖ್‌ನ ಹೋರಾಟಗಾರರು ಕೂಡಾ ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಹಲವು ಬಾರಿ ಆರೋಪಿಸಿದ್ದಾರೆ. 2020ರಿಂದ ಚೀನಾದ ಎಷ್ಟು ಭೂಮಿಯನ್ನು ವಶಪಡಿಸಿಕೊಂಡಿದೆ ಎಂಬುದನ್ನು ತೋರಿಸಲು ಹೋರಾಟಗಾರ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಚುಂಗಾತುಂಗ್ ಗಡಿ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಮೆರವಣಿಗೆಗೆ ಕರೆ ನೀಡಿದ್ದರು.
