ಹಾಲು ಉತ್ಪಾದಕರ ಬ್ಯಾಂಕ್ ಮಾಡಲು ರಾಜ್ಯ ಸರ್ಕಾರದ ಜೊತೆ ಚರ್ಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲಾ ಹೈನುಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರ ಬ್ಯಾಂಕ್ ಮಾಡುವ ಕನಸು ಇತ್ತು. ಆದರೆ, ಮಾಡಲು ಆಗಲಿಲ್ಲ. ಹಾಲು ಉತ್ಪಾದನೆಯಿಂದ 20 ಸಾವಿರ ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ಆಗುತ್ತದೆ. ಹೆಚ್ಚು ಉತ್ಪಾದನೆ ಆಗಲೂ ಸಾಧ್ಯವಿದೆ. ಬ್ಯಾಂಕ್ ಮಾಡುವ ಕನಸು ನನಸು ಮಾಡುವ ಮೂಲಕ ಸರ್ಕಾರದ ಜೊತೆಗೆ ಚರ್ಚಿಸುತ್ತೇನೆ ಎಂದರು.
ಹಾಲಿನಲ್ಲಿ ದೊಡ್ಡ ಶಕ್ತಿ ಇದೆ. ಮನಸ್ಸು ಮುದಗೊಳಿಸುವ ಶಕ್ತಿ ಇದರಲ್ಲಿದೆ. ಅಲ್ಕೊ ಹಾಲಿಗೆ ಕೊಡುವ ಒತ್ತನ್ನು ಹಾಲಿಗೆ ಕೊಡಬೇಕು. ಜಿಲ್ಲೆಯ ಅಭಿವೃದ್ಧಿಯಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕು. ಜನರ ಜೀವನ ಮಟ್ಟ ಸುಧಾರಣೆ ಆಗಬೇಕು ಎಂದು ಹೇಳಿದರು.
ಸಿಎಂ ಸ್ಥಾನ ಸಿಗಲು ಹಾವೇರಿ ಜಿಲ್ಲೆಯ, ಶಿಗ್ಗಾವಿ ಸವಣೂರು ಕ್ಷೇತ್ರದ ಆಶೀರ್ವಾದ ನನ್ನ ಮೇಲೆ ಇದೆ. 2013-18ರ ಅವಧಿಯಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಕು ಎಂದು ಹೋರಾಟ ಮಾಡಿದ್ದೇವೆ. ಅಂದಿನ ಸರ್ಕಾರ ಮಂಜೂರು ಮಾಡಲಿಲ್ಲ. ನಮ್ಮ ಸರ್ಕಾರದಲ್ಲಿ ಹಾಲು ಒಕ್ಕೂಟ, ಮೆಗಾ ಡೇರಿ, ಟೆಕ್ಸ್ಟೈಲ್ ಪಾರ್ಕ್ ಸೇರಿದಂತೆ ಜಿಲ್ಲೆಗೆ ಅಗತ್ಯವಿರುವ ಯೋಜನೆಗಳನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು.
ದೇಶಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಆಹಾರದಲ್ಲಿ ಭಾರತ ಸ್ವಾವಲಂಬನೆ ಇರುವ ದೇಶವಾಗಿದೆ. ದೇಶಕ್ಕೆ ಆಹಾರ ಪೂರೈಸುವ ಕೆಲಸ ರೈತರು ಮಾಡುತ್ತಾರೆ. ಕೃಷಿ ಬೆಳೆದರೆ ದೇಶ ಬೆಳೆದಂತೆ. ರೈತರ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ರೈತರನ್ನು ಉತ್ತೇಜಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.
ಶ್ರದ್ಧೆ ಭಕ್ತಿಯಿಂದ ಒಕ್ಕಲುತನ ಮಾಡುತ್ತೇವೆ. ನಮ್ಮ ದೇಶದಲ್ಲಿ ಆಹಾರಕ್ಕೆ ಕೊರತೆ ಇಲ್ಲ. ಕಾಯಕವೇ ಕೈಲಾಸ ಎನ್ನುವುದು ಸಾರ್ವಕಾಲಿಕ ಸತ್ಯ. ರೈತ ಬಾಂಧವರಿಗೆ ಕಾಯಕ ನಿಷ್ಠೆ ಇರಬೇಕು. ನಮ್ಮ ದೇಶದ ರೈತರಲ್ಲಿ ಇದೆ. ದುಡ್ಡೇ ದೊಡ್ಡಪ್ಪ ಅಲ್ಲಾ ದುಡಿಮೆಯೇ ದುಡ್ಡಿನ ದೊಡ್ಡಪ್ಪ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಡಿಕೆ ಬೆಳೆ | ಎಲೆಚುಕ್ಕೆ ರೋಗಕ್ಕಿಲ್ಲ ಮದ್ದು
ರೈತರ ಹಾಲು ಉತ್ಪಾದನೆ ಹೆಚ್ಚಳ, ರೈತರ ಆರ್ಥಿಕತೆ ಸುಧಾರಣೆ, ಆರ್ಥಿಕ ಸಂಪನ್ಮೂಲ ಹಂಚಿಕೆ ಆಗಬೇಕಾದರೆ ರೈತರನ್ನು ಹಾಗೂ ಹಾಲು ಉತ್ಪಾದಕರನ್ನೂ ಪ್ರೋತ್ಸಾಹಿಸಬೇಕು. ಮೆಗಾ ಡೇರಿ, ಹಾಲು ಒಕ್ಕೂಟ ಹೀಗೆ 200ಕೋಟಿ ಹಣ ಒದಗಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ಲಾಭಾಂಶವನ್ನು ಪಡೆದು ರೈತರಿಗೆ ಒದಗಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ 5 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಇಟ್ಟುಕೊಳ್ಳಬೇಕು. ಸಬ್ಸಿಡಿ ವ್ಯವಸ್ಥೆ, ದನಕರುಗಳ ಚಿಕಿತ್ಸೆ, ಹಸುಗಳ ಹೆಚ್ಚಳ ಹೀಗೆ ಪ್ರೋತ್ಸಾಹಿಸುವ ಮೂಲಕ ಹೆಚ್ಚಿಸಬೇಕು. ಒಕ್ಕೂಟಕ್ಕೆ ಬೇಕಾದ ಸಲಹೆ, ಸಹಕಾರ ಕೊಡುತ್ತೇವೆ. ಜಲ ಸಂಪನ್ಮೂಲಗಳ ಸದ್ಬಳಕೆ ಮಾಡಿದರೆ ರೈತರ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಶ್ರೀಗಳು, ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಯು ಬಿ ಬಣಕಾರ, ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ಹಾಗೂ ಇತರರು ಇದ್ದರು.