ಕಾವೇರಿ ಜಲಾನಯನ ಪ್ರದೇಶದ ಕುರುವೈ(ಅಲ್ಪಾವಧಿ) ಬೆಳೆಗಳನ್ನು ಉಳಿಸಲು ನೀರು ಬಿಡುಗಡೆಗೆ ಕರ್ನಾಟಕ ಸರ್ಕಾರವನ್ನು ಮನವೊಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪತ್ರ ಬರೆದಿದ್ದಾರೆ.
ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿರುವ ಎಂ ಕೆ ಸ್ಟಾಲಿನ್, “ಕರ್ನಾಟಕದಿಂದ ಕಾವೇರಿ ನೀರು ಬಿಡುಗಡೆಯಲ್ಲಿ “ದೊಡ್ಡ ಕೊರತೆ” ಕಂಡುಬಂದಿದೆ. ಇದು ಜೂನ್ 1 ರಿಂದ ಜುಲೈ 17ರ ನಡುವೆ ಅಂತರರಾಜ್ಯ ಗಡಿ ಬಿಳಿಗುಂಡ್ಲುವಿನಲ್ಲಿ ಕೇವಲ 3.78 ಟಿಎಂಸಿ ಅಡಿ ಬಿಡುಗಡೆ ಮಾಡಲಾಗಿದ್ದು, ನಿಗದಿತವಾಗಿ ಈ ಅವಧಿಯಲ್ಲಿ 26.32 ಟಿಎಂಸಿ ಅಡಿ ಬಿಡುಗಡೆ ಮಾಡಬೇಕಿತ್ತು. ಇದು 22.54 ಟಿಎಂಸಿ ಅಡಿ ಕೊರತೆ ಕಂಡುಬಂದಿದೆ” ಎಂದು ತಿಳಿಸಿದ್ದಾರೆ.
“ಕರ್ನಾಟಕದಿಂದ ನೀರು ಬಿಡದ ಕಾರಣ, ಮೆಟ್ಟೂರು ಜಲಾಶಯದಲ್ಲಿ ಸಂಗ್ರಹಣೆಯ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪ್ರಸ್ತುತ ಜಲಾಶಯದಲ್ಲಿರುವ ಸಂಗ್ರಹಣೆಯು ಸುಮಾರು 20 ದಿನಗಳವರೆಗೆ ನೀರಾವರಿಯನ್ನು ಉಳಿಸಿಕೊಳ್ಳಬಹುದು. ತಮಿಳುನಾಡಿನಲ್ಲಿ ನೈಋತ್ಯ ಮುಂಗಾರು ಮಳೆ ಕಡಿಮೆ ಬಿದ್ದಿರುವುದರಿಂದ ಕುರುವೈ ಬೆಳೆಯು ಕರ್ನಾಟಕ ಬಿಡುಗಡೆ ಮಾಡುವ ಮೆಟ್ಟೂರು ಜಲಾಶಯದ ಕಾವೇರಿ ನೀರಿನ ಹರಿವಿನ ಮೇಲೆ ಮಾತ್ರ ಅವಲಂಬಿತವಾಗಿದೆ” ಎಂದು ಹೇಳಿದ್ದಾರೆ.
“ಕುರುವೈ ಬೆಳೆಗೆ ನಿತ್ಯ ಅಗತ್ಯವಿರುವಂತೆ ಮೆಟ್ಟೂರಿನಿಂದ ಆರಂಭದಲ್ಲಿ 12,000 ಕ್ಯೂಸೆಕ್ ನೀರು ಬಿಡಲಾಗಿದ್ದರೂ , ನೀರು ಕಡಿಮೆಯಿರುವ ಕಾರಣ ಈಗ 10,000 ಕ್ಯೂಸೆಕ್‌ಗೆ ಇಳಿಸಲಾಗಿದೆ. ಹೀಗಾಗಿ, ನಾವು ವಿವೇಚನಾಯುಕ್ತ ನೀರಿನ ನಿರ್ವಹಣೆಯೊಂದಿಗೆ ಉಂಟಾಗಿರುವ ಬಿಕ್ಕಟ್ಟನ್ನು ನಿರ್ವಹಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ಕರ್ನಾಟಕದಿಂದ ನೀರನ್ನು ಬಿಡುಗಡೆ ಮಾಡುವ ಮೂಲಕ ಮಾತ್ರ ಪರಿಹರಿಸಬಹುದು” ಎಂದು ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 79 ದಿನಗಳ ನಂತರ ಮಣಿಪುರದ ಬಗ್ಗೆ ಮಾತು: ಸದನದೊಳಗೆ ಮಾತನಾಡಲು ಪ್ರಧಾನಿಗೆ ಖರ್ಗೆ ಒತ್ತಾಯ
“ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಿಲ್ಲಿಗುಂಡುಲುನಲ್ಲಿ ನೀರು ಹರಿಸುವುದನ್ನು ಖಚಿತಪಡಿಸಿಕೊಳ್ಳಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ ಎಂದು ಉಲ್ಲೇಖಿಸಿರುವ ಸ್ಟಾಲಿನ್, ಕರ್ನಾಟಕವು ನೀರು ಬಿಡುಗಡೆಯ ಮಾಸಿಕ ವೇಳಾಪಟ್ಟಿಯನ್ನು ಅನುಸರಿಸಲು ಯಾವುದೇ ಪ್ರಯತ್ನ ಮಾಡಿಲ್ಲ.ಕಾವೇರಿ ನೀರು ಬಿಡುಗಡೆಯಾದರೆ ಮಾತ್ರ ತೊಂದರೆಯಲ್ಲಿರುವ ಕುರುವೈ ಬೆಳೆಯನ್ನು ಉಳಿಸಬಹುದು” ಎಂದು ಹೇಳಿದರು.
“ಆದ್ದರಿಂದ, ನಾನು ಈ ವಿಷಯದ ಬಗ್ಗೆ ನಿಮ್ಮ ವೈಯಕ್ತಿಕ ಮತ್ತು ತಕ್ಷಣದ ಮಧ್ಯಸ್ಥಿಕೆ ನಹಿಸುವಂತೆ ಒತ್ತಾಯಿಸುತ್ತೇನೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ಸೂಚಿಸಿದ ಮಾಸಿಕ ವೇಳಾಪಟ್ಟಿಯನ್ನು ಅನುಸರಿಸಲು ಮತ್ತು ಕೊರತೆಯನ್ನು ಸರಿಪಡಿಸಲು ಕರ್ನಾಟಕಕ್ಕೆ ನಿರ್ದೇಶನಗಳನ್ನು ನೀಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸುವಂತೆ ನಿರ್ದೇಶಿಸಲು ನಿಮಗೆ ಮನವಿ ಮಾಡುತ್ತೇನೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದ ಸುಮಾರು 4 ಲಕ್ಷ ಎಕರೆ ಪ್ರದೇಶದಲ್ಲಿ ಕುರುವೈ ಬೆಳೆಗೆ ನೀರು ಅಗತ್ಯವಾಗಿದೆ. ಈ ಭಾಗದ ರೈತರ ಜೀವನಾಡಿಯಾಗಿರುವ ಮೆಟ್ಟೂರಿನ ಸ್ಟಾನ್ಲಿ ಜಲಾಶಯದಿಂದ ಬಿಡುವ ನೀರಿನಿಂದ ಕೃಷಿ ಮಾಡಲಾಗುತ್ತಿದೆ.
ತಮಿಳುನಾಡಿಗೆ ಜುಲೈನಲ್ಲಿ 31.24 ಟಿಎಂಸಿ ಅಡಿ, ಆಗಸ್ಟ್‌ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್‌ನಲ್ಲಿ 36.76 ಟಿಎಂಸಿ ಅಡಿ ಕಾವೇರಿ ನೀರನ್ನು ಕರ್ನಾಟಕ ಬಿಡುಗಡೆ ಮಾಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.