ಪ್ರವಾಸೋದ್ಯಮದಲ್ಲಿನ ಭವಿಷ್ಯದ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಪ್ರವಾಸೋದ್ಯಮ ಪಾಲಿಸಿ 2024-2029 ಜಾರಿಗೆ ತರಲಾಗುತ್ತಿದೆ. ಯೋಜನೆಯು ರಾಜ್ಯದಲ್ಲಿ 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಾವಿರ ಕೋಟಿಗಿಂತ ಹೆಚ್ಚಿನ ಅನುದಾನ ಒದಗಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಮ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಡೆದ ‘ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-2025′” ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಕರ್ನಾಟಕ ಗುರುತಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ವಿವಿಧತೆಯಲ್ಲಿ ಏಕತೆ ಎಂಬಂತೆ ರಾಜ್ಯವು ಎಲ್ಲ ರೀತಿಯ ಪ್ರವಾಸಿ ತಾಣಗಳನ್ನು ಹೊಂದಿದೆ. ಹಲವು ಜಗತ್ತು ಒಂದು ರಾಜ್ಯ ನಮ್ಮದು ಎನ್ನಲು ಹೆಮ್ಮೆ ಎನಿಸುತ್ತದೆ” ಎಂದರು.
“ಕರ್ನಾಟಕ ರಾಜ್ಯಕ್ಕೆ ಜಾಗತಿಕವಾಗಿ ಪ್ರವಾಸಿಗಳನ್ನು ಸೆಳೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯವು 4 UNESCO ವಿಶ್ವ ಪರಂಪರೆಯ ತಾಣಗಳು, 35ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು, ಪ್ರಾಚೀನ ಗಿರಿಧಾಮಗಳು, ಆಧ್ಯಾತ್ಮಿಕ ಕೇಂದ್ರಗಳು, ಸಾಹಸ ತಾಣಗಳನ್ನು ಹೊಂದಿದೆ. ಪ್ರಾಚೀನ ದೇವಾಲಯಗಳು, ಜೈನ ಬಸದಿಗಳು ಮತ್ತು ನಮ್ಮ ವೈವಿಧ್ಯಮಯ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಸೂಫಿ ದೇವಾಲಯಗಳಿಂದ ಆಶೀರ್ವದಿಸಲ್ಪಟ್ಟಿದೆ. ಪಶ್ಚಿಮ ಘಟ್ಟಗಳು ರೋಮಾಂಚನಕಾರಿ ತಪ್ಪಿಸಿಕೊಳ್ಳುವಿಕೆಯನ್ನು ಒದಗಿಸುತ್ತವೆ. ರೋಮಾಂಚಕ ಕರಾವಳಿಗಳು ಪ್ರಶಾಂತತೆ ಮತ್ತು ಜಲ ಕ್ರೀಡೆಗಳನ್ನು ಬಯಸುವವರನ್ನು ಸ್ವಾಗತಿಸುತ್ತವೆ” ಎಂದು ಹೇಳಿದರು.
“ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಖಾಸಗಿಯವರಿಗೆ ಬಂಡವಾಳ ಹೂಡಿಕೆ ಮಾಡಲು ಅಗತ್ಯವಾದ ಸಹಾಯವನ್ನು ನೀಡಲು ಸರ್ಕಾರ ಹರ್ಷಿಸುತ್ತದೆ. ಬಂಡವಾಳ ಹಾಗೂ ಮಾರುಕಟ್ಟೆ ವಿಸ್ತರಣೆ ಮೂಲಕ ರಾಜ್ಯವನ್ನು ದೇಶದ ಹಾಗೂ ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡಲಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್, ಕೆ.ಹೆಚ್ ಮುನಿಯಪ್ಪ, ಎನ್ ಎಸ್ ಬೋಸರಾಜು, ಡಾ ಎಂ ಸಿ ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ ಕೆ.ಗೋವಿಂದರಾಜು, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ ವಿ ಪ್ರಭಾಕರ್, ವಿಧಾನಪರಿಷತ್ ಸದಸ್ಯರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.