ಮೌಲ್ವಿಗಳಿಗೆ ಅನುದಾನ ಕೊಡಲು ಜನರ ಮೇಲೆ ಟ್ಯಾಕ್ಸ್ ಹೊರೆ ಹಾಕುವ ಅಧಿವೇಶನ ಇದು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ಸುವರ್ಣಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, “ಉತ್ತರ ಕರ್ನಾಟಕ ಭಾಗದ ಹಿತ ಕಡೆಗಣಿಸಿ ಜನರ ಮೇಲೆ ಟ್ಯಾಕ್ಸ್ ಹಾಕುವ ಸರ್ಕಾರ ಇದು. ಎಲ್ಲದಕ್ಕೂ ತೆರಿಗೆ ಹೇರುವ ಸರ್ಕಾರ ಇದಾಗಿದೆ. ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿ ಜನರಿಗೆ ಟ್ಯಾಕ್ಸ್ ಹೊರೆ ಹಾಕಿದೆ” ಎಂದು ಹರಿಹಾಯ್ದರು.
“ರೈತರ ಸಮಸ್ಯೆ ಕಡೆ ಇವರಿಗೆ ಗಮನ ಇಲ್ಲ. 25 ಸಾವಿರ ರೂ. ರೈತರಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದ್ದೇವೆ. ಬೆಳಗಾವಿ ಅಧಿವೇಶನವನ್ನು ಇನ್ನೂ ನಾಲ್ಕು ದಿನ ಮುಂದುವರೆಸಲು ಕೇಳಿದ್ದೇವೆ. ಸರ್ಕಾರ ಅದಕ್ಕೆ ಸ್ಪಂದನೆ ತೋರುತ್ತಿಲ್ಲ. ಸರ್ಕಾರದ ತೆರಿಗೆ ಹೆಚ್ಚಳ, ಬರ ನಿರ್ಲಕ್ಷ್ಯ, ಉತ್ತರ ಕರ್ನಾಟಕದ ನಿರ್ಲಕ್ಷ್ಯ ವಿರುದ್ಧ ಬುಧವಾರ ಬಿಜೆಪಿ ಹೋರಾಟ ನಡೆಸಲಿದೆ” ಎಂದರು.
“ಕಂದಾಯ ತೆರಿಗೆ ಹೆಚ್ಚಿಸಿರೋದು ಮೌಲ್ವಿಗಳಿಗೆ ಹಣ ಕೊಡಲು. ಇದು ಬೇಜವಾಬ್ದಾರಿ ಸರ್ಕಾರ. ರಾಜ್ಯಕ್ಕಿಂತಲೂ ತೆಲಂಗಾಣದ ಮೇಲೆ ಈ ಸರ್ಕಾರಕ್ಕೆ ಆಸಕ್ತಿ ಜಾಸ್ತಿ. ಇದು ದಿವಾಳಿಯಾದ ಸರ್ಕಾರ” ಎಂದು ವಾಗ್ದಾಳಿ ನಡೆಸಿದರು.