ಅ.10ರಂದು ಕೇಂದ್ರ ಸರ್ಕಾರವು ತೆರಿಗೆ ಆದಾಯದಲ್ಲಿ ಸಂಗ್ರಹವಾದ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಇದರಲ್ಲಿ, ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ.ಗಳನ್ನು ಮಾತ್ರವೇ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ, ಕರ್ನಾಟಕದ ಜನರಿಗೆ ಕೇಂದ್ರವು ಅನ್ಯಾಯ ಮಾಡಿದೆ ಎಂಬ ಆರೋಪ, ಆಕ್ರೋಶಗಳು ವ್ಯಕ್ತವಾಗುತ್ತಿವೆ. ರಾಜ್ಯಕ್ಕೆ ಕೇಂದ್ರ ಮಾಡಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, “ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕು” ಎಂದು ಕರೆ ಕೊಟ್ಟಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ 6,498 ಕೋಟಿ ರೂ,ಗಳನ್ನಷ್ಟೇ ಕರ್ನಾಟಕಕ್ಕೆ ನೀಡಿದ್ದು, ರಾಜ್ಯದ ಅನ್ಯಾಯ ಮಾಡಿದೆ. ಈ ಅನ್ಯಾಯದ ವಿರುದ್ದ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ಕನ್ನಡಿಗರು ದನಿ ಎತ್ತಬೇಕು. ಇದಕ್ಕೆ, ಅನ್ಯಾಯದ ವಿರುದ್ಧ ನ್ಯಾಯದ ಗೆಲುವಿನ ಸಂಕೇತವಾದ ವಿಜಯದಶಮಿಯ ಶುಭ ದಿನ ಸಾಕ್ಷಿಯಾಗಲಿ” ಎಂದಿದ್ದಾರೆ.
“ಬಿಮಾರು ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ರೂ.31,962 ಕೋಟಿ, ಬಿಹಾರಕ್ಕೆ ರೂ.17,921 ಕೋಟಿ, ಮಧ್ಯಪ್ರದೇಶಕ್ಕೆ ರೂ.13,987 ಕೋಟಿ ಹಾಗೂ ರಾಜಸ್ತಾನಕ್ಕೆ ರೂ.10,737 ಕೋಟಿ ತೆರಿಗೆ ಪಾಲನ್ನು ನೀಡಲಾಗಿದೆ. ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಅಭಿವೃದ್ದಿ ಪಥದಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಈ ರಾಜ್ಯಗಳಿಗಾಗಿ ಕನ್ನಡಿಗನ ಬೆವರ ಗಳಿಕೆ ಯಾಕೆ ಪೋಲಾಗಬೇಕು” ಎಂದು ಪ್ರಶ್ನಿಸಿದ್ದಾರೆ.
“ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ 10.05, ರಾಜಸ್ತಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಲಗಿದೆ. ಕರ್ನಾಟಕಕ್ಕೆ ಕೇವಲ ಶೇ.3.64 ಮಾತ್ರ ಪಾಲು ದೊರೆತಿದೆ. ಅಭಿವೃದ್ಧಿಶೀಲ ರಾಜ್ಯವನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸಲಾಗಿದೆ. ಇದು ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ” ಎಂದು ಆರೋಪಿಸಿದ್ದಾರೆ.
“ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು 4.713% ಎಂದು ನಿಗದಿಪಡಿಸಿತ್ತು. ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ 3.647%ಗೆ ಇಳಿಸಿತು. ಇದರಿಂದ, ಕಳೆದ ಐದು ವರ್ಷಗಳಲ್ಲಿ ಕರ್ನಾಟಕವು ₹62,275 ಕೋಟಿಯನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಸರಿದೂಗಿಸಲು ರೂ.5,495 ಕೋಟಿ ವಿಶೇಷ ಅನುದಾನ ನೀಡುವಂತೆ ಆಯೋಗವು ಶಿಫಾರಸು ಮಾಡಿತ್ತು.ಆದರೆ, ಆ ಅನುದಾನವನ್ನೂ ಕೂಡಾ ಕೇಂದ್ರ ಸರ್ಕಾರ ನೀಡದೆ ಅನ್ಯಾಯ ಎಸಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು ರೂ.79,770 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5ರಷ್ಟಿದ್ದರೂ ದೇಶದ ಜಿಡಿಪಿಗೆ ಕರ್ನಾಟಕವು ಶೇ.8.4ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಸತತವಾಗಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ಆದರೆ, ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗುತ್ತಿರುವ ಜಿಎಸ್‌ಟಿ ಹಣದಲ್ಲಿ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು 52% ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಹಂಚಿಕೆಯಿಂದ 2017-18ರಿಂದ 2023-24ರ ವರೆಗೆ ಸುಮಾರು ರೂ. 59,274 ಕೋಟಿ ಹಣವನ್ನು ಕರ್ನಾಟಕ ಕಳೆದುಕೊಂಡಿದೆ” ಎಂದು ತಿಳಿಸಿದ್ದಾರೆ.
“ಇದಲ್ಲದೆ, ಹದಿನೈದನೇ ಹಣಕಾಸು ಆಯೋಗವು ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆಗೆ ರೂ.3,000 ಕೋಟಿ ಮತ್ತು ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ ರೂ. 3000 ನೀಡಲು ಶಿಫಾರಸ್ಸು ಮಾಡಿತ್ತು. ಆದರೆ, ಈ ಶಿಫಾರಸ್ಸುಗಳನ್ನು ತಿರಸ್ಕರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಸುಮಾರು ರೂ.11,495 ಕೋಟಿ ದ್ರೋಹ ಮಾಡಿದ್ದಾರೆ” ಎಂದು ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ಬಿಚ್ಚಿಟ್ಟಿದಾರೆ.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ದ್ರೋಹ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ನಿರಂತರವಾಗಿ ಈ ಅನ್ಯಾಯ ಮುಂದುವರೆದಿದೆ. ಪರಿಣಾಮ, ರಾಜ್ಯದಲ್ಲಿನ ಅಭಿವೃದ್ದಿ ಕೆಲಸಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿಯೇ, ರಾಜ್ಯದ ಪಾಲನ್ನು ನ್ಯಾಯಯುತವಾಗಿ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು 3.64% ಇಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು 16ನೇ ಹಣಕಾಸು ಆಯೋಗಕ್ಕೂ ಮನವಿ ಮಾಡಿದ್ದಾರೆ. ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲು ಕೈಜೋಡಿಸುವಂತೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಈ ಹಿಂದೆಯೇ ಪತ್ರವನ್ನೂ ಬರೆದಿದ್ದಾರೆ.
ಈ ವರದಿ ಓದಿದ್ದೀರಾ?: ಕೇಂದ್ರದ ಹುನ್ನಾರಕ್ಕೆ ಬಲಿಯಾದ ಮಹದಾಯಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!
ಆದಾಗ್ಯೂ, ಕೇಂದ್ರವು ತನ್ನ ತಾರತಮ್ಯ ಧೋರಣೆಯನ್ನು ಬಿಟ್ಟಿಲ್ಲ. ಮತ್ತೆ-ಮತ್ತೆ ‘ಒಂದು ಕಣ್ಣಿಗೆ ಬೆಣ್ಣೆ – ಮತ್ತೊಂದು ಕಣ್ಣಿಗೆ ಸುಣ್ಣ’ ಎಂಬ ಧೋರಣೆಯನ್ನೇ ಮುಂದುವರೆಸಿದೆ. ಉತ್ತರ ಪ್ರದೇಶಕ್ಕೆ ಬರೋಬ್ಬರಿ 36 ಸಾವಿರ ಕೋಟಿ ರೂ. ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ 6 ಸಾವಿರ ಕೋಟಿ ರೂ. ನೀಡಿದೆ. ಉತ್ತರ ಪ್ರದೇಶಕ್ಕೂ ಕರ್ನಾಟಕಕ್ಕೂ ಹಂಚಿಕೆಯಾದ ಪಾಲಿನಲ್ಲಿ 30,000 ಕೋಟಿ ರೂ. ವ್ಯತ್ಯಾಸವಿದೆ. ಅಂದರೆ, ಉತ್ತರ ಪ್ರದೇಶಕ್ಕೆ ಒಂದು ವರ್ಷದಲ್ಲಿ ದೊರೆಯುವ ಪಾಲನ್ನು ಕರ್ನಾಟಕ ಪಡೆಯಲು ಕನಿಷ್ಠ 6 ವರ್ಷಗಳು ಬೇಕಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.