ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೂರು ಗಂಟೆಯ ಭಾಷಣದಲ್ಲಿ ಈ ಬಾರಿ ದಾಖಲೆಯ 3.27 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ.
ಹಿಂದಿನ ಸರ್ಕಾರದ 2.65 ಲಕ್ಷ ಕೋಟಿ ರೂ ಬಜೆಟ್ ಗಾತ್ರಕ್ಕಿಂತ ಈ ಬಾರಿ ಶೇ. 20ಕ್ಕಿಂತ ಹೆಚ್ಚಿದೆ. ಮುಖ್ಯಮಂತ್ರಿಯವರ ಆಯವ್ಯಯದಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ಅತೀ ಹೆಚ್ಚು 52,000 ಕೋಟಿ ರೂ. ಅನುದಾನ ನೀಡಿದ್ದಾರೆ.
ಈ ಬಜೆಟ್‌ನಲ್ಲಿ ಸಾಲ ಪಾವತಿಗಳಿಗೆ 22,441 ಕೋಟಿ ರೂ ಖರ್ಚಾಗುತ್ತದೆ. ಬಂಡವಾಳ ಹೂಡಿಕೆ ವೆಚ್ಚ 54,374 ಕೋಟಿ ರೂ ಇದೆ. ಬಜೆಟ್ಗೆ ಇಷ್ಟೊಂದು ಹಣವನ್ನು ಸರ್ಕಾರ ಹೊಂದಿಸಲು ಅಬಕಾರಿ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಿದೆ. ವಾಣಿಜ್ಯ ತೆರಿಗೆ ಇಲಾಖೆಗೆ ಅತೀ ಹೆಚ್ಚು ತೆರಿಗೆ ಗುರಿ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? 3 ಲಕ್ಷ ಮನೆಗಳು: ಸ್ವಿಗ್ಗಿ, ಜೊಮಾಟೋ ಕಾರ್ಮಿಕರಿಗೆ 4 ಲಕ್ಷ ರೂ. ವಿಮೆ
ಈ ಬಾರಿಯ ಬಜೆಟ್ ವರದಿಯಲ್ಲಿ ವಾಣಿಜ್ಯ ಇಲಾಖೆಗೆ ತೆರಿಗೆ ಗುರಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ನೀಡಲಾಗಿದೆ. ಸರ್ಕಾರದ ಪ್ರಮುಖ ಆದಾಯ ವಾಣಿಜ್ಯ ತೆರಿಗೆಯಿಂದ ಬರುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ವಾಣಿಜ್ಯ ಇಲಾಖೆಗೆ ಶೇ. 20ಕ್ಕಿಂತ ಹೆಚ್ಚು ತೆರಿಗೆ ಗುರಿ ಕೊಡಲಾಗಿದೆ. ಇನ್ನುಳಿದಂತೆ ನೊಂದಣಿ ಮುದ್ರಾಂಕ ಮತ್ತು ಸಾರಿಗೆ ಇಲಾಖೆಗೂ ಹೆಚ್ಚಿನ ತೆರಿಗೆ ಗುರಿ ನೀಡಲಾಗಿದೆ.
ಸರ್ಕಾರದಿಂದ 2023-24ಕ್ಕೆ ತೆರಿಗೆ ಗುರಿ
- ಒಟ್ಟು ರಾಜಸ್ವ ನಿರೀಕ್ಷೆ: 1,62,000 ಕೋಟಿ ರೂ
- ವಾಣಿಜ್ಯ ತೆರಿಗೆ ಇಲಾಖೆ: 1,01,000 ಕೋಟಿ ರೂ
- ಅಬಕಾರಿ ಇಲಾಖೆ: 36,000 ಕೋಟಿ ರೂ
- ನೊಂದಣಿ ಮತ್ತು ಮುದ್ರಾಂಕ ಇಲಾಖೆ: 25,000 ಕೋಟಿ ರೂ
- ಸಾರಿಗೆ ಇಲಾಖೆ: 11,500 ಕೋಟಿ ರೂ
- ಇತರೆ ಮೂಲಗಳಿಂದ: 2,153 ಕೋಟಿ ರೂ
ಅಬಕಾರಿ ತೆರಿಗೆ ದಾಖಲೆ ಏರಿಕೆ
ಸಿದ್ದರಾಮಯ್ಯನವರ ಬಜೆಟ್ ಭಾಷಣದಲ್ಲಿ ಬಿಯರ್ ಮೇಲಿನ ಅಬಕಾರಿ ತೆರಿಗೆಯನ್ನು ಶೇ. 10ರಷ್ಟು ಏರಿಸಲಾಗಿದೆ. ಈಗಾಗಲೇ ಬಿಯರ್ ಮೇಲೆ ಶೇ. 175ರಷ್ಟು ತೆರಿಗೆ ಹೇರಲಾಗಿತ್ತು. ಈಗ ಪುನಃ ಈ ತೆರಿಗೆ ಪ್ರಮಾಣ ಬರೋಬ್ಬರಿ ಶೇ. 185ಕ್ಕೆ ಏರಿಕೆಯಾಗಿದೆ. ವಿಸ್ಕಿ, ರಮ್, ಬ್ರಾಂದಿ ಸೇರಿದಂತೆ ಮುಂತಾದ ಮದ್ಯಗಳ ಮೇಲೆ ಶೇ. 20ರಷ್ಟು ಅಬಕಾರಿ ತೆರಿಗೆ ಏರಿಕೆಯಾಗಿದೆ. ವಿಸ್ಕಿಯ ತಯಾರಿಕೆಯ ದರ 100 ರೂ.ಇದ್ದರೆ, ಇದರ ಮೇಲಿನ ತೆರಿಗೆಯೇ 40 ರೂ. ಇರುತ್ತೆ. ಇನ್ನು ಮದ್ಯದ ಸಾಗಾಟ ವೆಚ್ಚ, ಮಾರಾಟಗಾರರ ಲಾಭಾಂಶ ಎಲ್ಲವನ್ನೂ ಸೇರಿಸಿ ಎಂಆರ್‌ಪಿ ನಗದಿ ಮಾಡಲಾಗುತ್ತದೆ. ಎಲ್ಲವೂ ಸೇರಿ ಮದ್ಯ ಪ್ರಿಯರ ಕೈಗೆಟಕುವಾಗ 170 ರೂಪಾಯಿ ತಲುಪಿರುತ್ತದೆ.
ತೆರಿಗೆಯ ಆದಾಯ ಪಾಲು
1 ರೂಪಾಯಿಯ ಆದಾಯದಲ್ಲಿ ರಾಜ್ಯದ ಬೊಕ್ಕಸಕ್ಕೆ ತೆರಿಗೆ ಆದಾಯದಿಂದಲೇ 54 ಪೈಸೆ ಬರಲಿದೆ. ಸಾಲದಿಂದ 26 ಪೈಸೆ ಬರಲಿದೆ. ಕೇಂದ್ರ ತೆರಿಗೆ ಪಾಲಿನಿಂದ 12 ಪೈಸೆ, ಕೇಂದ್ರ ಸರಕಾರದ ಸಹಾಯ ಧನದಿಂದ 4 ಪೈಸೆ ಹಾಗೂ ರಾಜ್ಯ ತೆರಿಗೆಯೇತರ ರಾಜಸ್ವದಿಂದ 4 ಪೈಸೆ ಬರಲಿದೆ.
ವೆಚ್ಚದ ಪಾಲು
ಇನ್ನು ವೆಚ್ಚದ ಲೆಕ್ಕಕ್ಕೆ ಬಂದಾಗ ಸಾಲ ತೀರಿಸಲು 18 ಪೈಸೆ ಖರ್ಚಾಗಲಿದೆ. ಇತರ ಸಾಮಾನ್ಯ ಸೇವೆಗಳು ಹಾಗೂ ಇತರ ಆರ್ಥಿಕ ಸೇವೆಗಳಿಗೆ ತಲಾ 17 ಪೈಸೆ ವೆಚ್ಚವಾಗಲಿದೆ. ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿಗೆ 15 ಪೈಸೆ, ಸಮಾಜ ಕಲ್ಯಾಣಕ್ಕೆ 13 ಪೈಸೆ, ಶಿಕ್ಷಣಕ್ಕೆ 10 ಪೈಸೆ, ಆರೋಗ್ಯಕ್ಕೆ 4 ಪೈಸೆ, ಇತರ ಸಾಮಾಜಿಕ ಸೇವೆಗಳಿಗೆ 4 ಪೈಸೆ ಹಾಗೂ ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ 2 ಪೈಸೆ ಹಣ ವೆಚ್ಚವಾಗಲಿದೆ.