2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಪಕ್ಕಾ ಆಗಿದೆ. ಬಿಆರ್‌ಎಸ್ ಪಕ್ಷ ಸತತವಾಗಿ ಎರಡು ಬಾರಿ ಆಡಳಿತ ನಡೆಸಿದ್ದರೂ, ಈ ಬಾರಿ ಕಾಂಗ್ರೆಸ್ ಮುಂದೆ ತಲೆಬಾಗಿದೆ. ಈ ನಡುವೆ, ಡಿಗ್ರಿ ಓದಿದ್ದರೂ ನಿರುದ್ಯೋಗದ ಕಾರಣ ಎಮ್ಮೆ ಕಾಯುತ್ತಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದ ಶಿರೀಷಾ, ಬರ್ರೆಲಕ್ಕ ಎಂಬ ಹೊಸ ಹೆಸರಿನೊಂದಿಗೆ ರಾತ್ರೋರಾತ್ರಿ ಸ್ಟಾರ್ ಆಗಿದ್ದರು. ಬಳಿಕ, ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯ ಕಣಕ್ಕಿಳಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರಿಗಿರುವ ಫಾಲೋವರ್ಸ್ ಕಂಡು ಇವರು ಈ ಬಾರಿ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿತ್ತು.
ಆದರೆ, ಬರ್ರೆಲಕ್ಕನ ಕ್ರೇಜ್ ವೋಟ್ ಬ್ಯಾಂಕ್ ಆಗಿ ಬದಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಬರ್ರೆಲಕ್ಕ ಅವರಿಗೆ 4 ಸಾವಿರ ಮತಗಳು ಬಿದ್ದಿವೆ ಎಂದು ವರದಿಯಾಗಿದೆ.
ಚುನಾವಣೆಯಲ್ಲಿ ಬರ್ರೆಲಕ್ಕ ಅವರು ಗೆಲ್ಲದಿದ್ದರೂ ಕನಿಷ್ಠ 15 ರಿಂದ 20 ಸಾವಿರ ಮತಗಳು ಅವರಿಗೆ ಬರುತ್ತವೆ ಎಂಬ ನಂಬಿಕೆ ಇತ್ತು. ಅದೂ ಕೂಡ ಸುಳ್ಳಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಟ್ರೆಂಡ್ ಆಗಿರುವ ಬರ್ರೆಲಕ್ಕಗೆ ದೇಶದೆಲ್ಲೆಡೆಯಿಂದ ಬೆಂಬಲ ವ್ಯಕ್ತವಾಗಿದ್ದರೂ, ಕೊಲ್ಲಾಪುರದ ಸ್ಥಳೀಯರು ಬರ್ರೆಲಕ್ಕನನ್ನು ಬೆಂಬಲಿಸಿಲ್ಲ ಎಂಬುದು ಮತ ಎಣಿಕೆಯಿಂದ ಸ್ಪಷ್ಟವಾಗಿದೆ.
ನಿರುದ್ಯೋಗಿ ಅಭ್ಯರ್ಥಿಗಳ ಪ್ರತಿನಿಧಿಯಾಗಿ ತೆಲಂಗಾಣ ವಿಧಾನಸಭೆ ಪ್ರವೇಶಿಸಿರುವ ಬರ್ರೆಲಕ್ಕ ಅಂಚೆ ಮತಪತ್ರದಲ್ಲಿ ಮುನ್ನಡೆಯಲ್ಲಿದ್ದರೂ ಫಲಿತಾಂಶದಲ್ಲಿ ಹಿಂದುಳಿದಿದ್ದಾರೆ. ಸದ್ಯ, ಸ್ವತಂತ್ರ ಅಭ್ಯರ್ಥಿ ಬರ್ರೆಲಕ್ಕ ಸೋಲು ಕಂಡಿದ್ದಾರೆ. ಕೊಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೂಪಲ್ಲಿ ಕೃಷ್ಣರಾವ್ ಗೆಲುವು ಸಾಧಿಸಿದ್ದಾರೆ. ಬಿಆರ್‌ಎಸ್ ಅಭ್ಯರ್ಥಿ ಬೀರಂ ಹರ್ಷವರ್ಧನ್ ರೆಡ್ಡಿ ವಿರುದ್ಧ ಜೂಪಳ್ಳಿ ಗೆಲುವು ಸಾಧಿಸಿದ್ದಾರೆ.
ಮೊದಲ ಅಂಚೆ ಮತಪತ್ರದಲ್ಲಿ ಬರ್ರೆಲಕ್ಕ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ಗಿಂತ ಹೆಚ್ಚು ಮತಗಳನ್ನು ಪಡೆದರು. ಇದರಿಂದ ಕ್ಷೇತ್ರದ ನೌಕರರು ಬರ್ರೆಲಕ್ಕ ಬೆನ್ನಿಗೆ ನಿಂತಿದ್ದರು. ಶೀಟಿ ಚಿಹ್ನೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಬರ್ರೆಲಕ್ಕ ಮೊದಲ ಸುತ್ತಿನಲ್ಲಿ 473 ಮತಗಳನ್ನು ಪಡೆದು ಎರಡನೇ ಸುತ್ತಿನಲ್ಲಿ 262 ಮತಗಳನ್ನು ಕಳೆದುಕೊಂಡಿದ್ದಾರೆ. ಅವರು ಒಟ್ಟು 4 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರ್ರೆಲಕ್ಕನಿಗೆ ಇರುವ ಸಪೋರ್ಟ್ ಕಂಡು ಹಲವರು ಚುನಾವಣೆ ಕಣದಿಂದ ಇಳಿಯದಂತೆ ಬೆದರಿಕೆ ಹಾಕಿದ್ದರು. ಜತೆಗೆ, ಬರ್ರೆಲಕ್ಕನ ಚಿಕ್ಕಣ್ಣನ ಮೇಲೂ ಹಲ್ಲೆ ಮಾಡಿದ್ದಾರೆ. ಅವರು ಗೆಲ್ಲಬಹುದು ಎಂಬ ಭಯದಿಂದ ಹಲವರು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಫಲಿತಾಂಶ ನೋಡಿದರೆ ಉಲ್ಟಾ ಆಗಿದೆ.
ಯಾರು ಈ ಬರ್ರೆಲಕ್ಕ?
ನಾಗರ್ ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮರಿಕಲ್ ಗ್ರಾಮದ ನಿವಾಸಿ ಈ ಬರ್ರೆಲಕ್ಕ (ಎಮ್ಮೆಗಳಕ್ಕ). ಈಕೆಯ ಹೆಸರು ಕರ್ನೆ ಶಿರೀಷಾ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದ ಬಳಿಕ ಈಕೆ ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಚುನಾವಣಾ ಕಣಕ್ಕೆ ಇಳಿದಿದ್ದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಕಾಂಗ್ರೆಸ್ ಸರ್ಕಾರ ರಚಿಸುವ ಮೂಲಕ ಸೋನಿಯಾ ಗಾಂಧಿ ಅವರಿಗೆ ‘ಬರ್ತ್ ಡೇ ಗಿಫ್ಟ್’: ಕೋಮಟಿ ರೆಡ್ಡಿ
ಕುಗ್ರಾಮದ ಕಡುಬಡ ಕುಟುಂಬದ ದಲಿತ ಯುವತಿ ಶಿರೀಷಾ ಅಲಿಯಾಸ್ ಎಮ್ಮೆಗಳಕ್ಕ. ಎಷ್ಟೇ ಡಿಗ್ರಿ ಓದಿದರೂ ಸರ್ಕಾರಿ ನೌಕರಿ ಸಿಗುತ್ತಿಲ್ಲ ಎಂದು ಕೊರಗುವ ವಿಡಿಯೋ ಮೂಲಕ ಶಿರೀಷಾ ಸುದ್ದಿಯಾದವರು. ಜತೆಗೆ ಲಘುಧಾಟಿಯಲ್ಲಿ ವ್ಯವಸ್ಥೆಯನ್ನು ಛೇಡಿಸುವ ವಿಡಿಯೋ ಮಾಡಿ ಫೇಮಸ್ ಆಗಿದ್ದರು. ಕೆಲವು ಸಂದರ್ಶನಗಳ ಮೂಲಕವೂ ಸುದ್ದಿಯಾಗಿದ್ದರು. ಒಂದು ಹಂತದಲ್ಲಿ ವಿಪರೀತ ಟ್ರೋಲ್‌ಗೂ ಒಳಗಾಗಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಬರ್ರೆಲಕ್ಕ ಸ್ಟಾರ್
ಕರ್‍ನೆಶಿರೀಶ@ ಬರ್ರೆಲಕ್ಕ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ 5.73 ಲಕ್ಷ, ಫೇಸ್‌ಬುಕ್‌ನಲ್ಲಿ 1.07 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 1.61 ಲಕ್ಷ ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ಪ್ರಕರಣ (IPC 505 (2) ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.