ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 52 ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಂಸದ ಬಂಡಿ ಸಂಜಯ್ ಕುಮಾರ್ ಸೇರಿದಂತೆ ಮೂವರು (ಧರ್ಮಪುರಿ ಅರವಿಂದ್ ಮತ್ತು ಸೋಯಮ್ ಬಾಪು ರಾವ್) ಸಂಸದರು ಕಣಕ್ಕಿಳಿದಿದ್ದಾರೆ. ಕ್ರಮವಾಗಿ ಕರೀಂನಗರ, ಕೊರಟ್ಲಾ ಮತ್ತು ಬೋತ್ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮೂವರು ಸ್ಪರ್ಧಿಸಲಿದ್ದಾರೆ.
ಪ್ರವಾದಿ ವಿರುದ್ಧದ ಹೇಳಿಕೆ ನೀಡಿ ಕಳೆದ ವರ್ಷ ಅಮಾನತುಗೊಂಡಿದ್ದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರ ಅಮಾನತನ್ನು ಬಿಜೆಪಿ ಹಿಂಪಡೆದಿದೆ. ಅವರಿಗೆ ಗೋಶಾಮಹಲ್ ಕ್ಷೇತ್ರದ ಟಿಕೆಟ್ ನೀಡಿದೆ.
ಬಿಜೆಪಿಯ ರಾಜ್ಯ ಚುನಾವಣಾ ಸಮಿತಿ ಮುಖ್ಯಸ್ಥ, ಶಾಸಕ ಈಟೆಲ ರಾಜೇಂದರ್ ಅವರು ತಮ್ಮ ಹಾಲಿ ಕ್ಷೇತ್ರ ಹುಜೂರಾಬಾದ್ ಮತ್ತು ಗಜ್ವೇಲ್‌ನಿಂದ ಕಣಕ್ಕಿಳಿದಿದ್ದಾರೆ. ರಾಜೇಂದರ್ ಅವರು ಗಜ್ವೇಲ್‌ನಲ್ಲಿ ಮುಖ್ಯಮಂತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರನ್ನು ಎದುರಿಸಲಿದ್ದಾರೆ. ಕೆಸಿಆರ್ ಕೂಡ ಮತ್ತೊಂದು ಕ್ಷೇತ್ರ ಕಾಮರೆಡ್ಡಿಯಿಂದ ಸ್ಪರ್ಧಿಸುತ್ತಿದ್ದಾರೆ.
ಬಂಡಿ ಸಂಜಯ್ ಕುಮಾರ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಕರೀಂನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಬಳಿಕ, 019ರ ಲೋಕಸಭಾ ಚುನಾವಣೆಯಲ್ಲಿ ಕರೀಂನಗರ ಲೋಕಸಭಾ ಕ್ಷೇತ್ರದಿಂದ ಗೆದ್ದು, ಲೋಕಸಭೆ ಪ್ರವೇಶಿಸಿದ್ದರು..
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹನ್ನೆರಡು ಮಹಿಳಾ ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ಬೆಳ್ಳಂಪಳ್ಳಿಯಿಂದ ಅಮರಜುಲ ಶ್ರೀದೇವಿ (ಎಸ್‌ಸಿ), ಜುಕ್ಕಲ್‌ನಿಂದ ಟಿ ಅರುಣಾ ತಾರಾ (ಎಸ್‌ಸಿ), ಬಾಳಕೊಂಡದಿಂದ ಅನ್ನಪೂರ್ಣಮ್ಮ ಆಲೇಟಿ, ಜಗ್ತಿಯಾಲ್‌ನಿಂದ ಬೋಗ ಶ್ರಾವಣಿ, ರಾಮಗುಂಡೆಂನಿಂದ ಕಂದುಲ ಸಂಧ್ಯಾ ರಾಣಿ, ಚೊಪ್ಪದಂಡಿಯಿಂದ ಬೋಡಿಗ ಶೋಭಾ (ಎಸ್‌ಸಿ), ಸಿರ್ಸಿಲ್ಲಾ, ಮೇಘಾದಿಂದ ರಾಣಿ ರುದ್ರಮ ರೆಡ್ಡಿ ಸೇರಿದ್ದಾರೆ. ಚಾರಿಮಿನಾರ್‌ನಿಂದ ರಾಣಿ, ನಾಗಾರ್ಜುನ ಸಾಗರದಿಂದ ಕಂಕನಾಳ ನಿವೇದಿತಾ ರೆಡ್ಡಿ, ಡೋರ್ನಕಲ್ (ಎಸ್‌ಟಿ) ನಿಂದ ಭೂಕ್ಯ ಸಂಗೀತಾ (ಎಸ್‌ಟಿ), ವಾರಂಗಲ್ ಪಶ್ಚಿಮದಿಂದ ರಾವ್ ಪದ್ಮ, ಮತ್ತು ಭೂಪಾಲಪಲ್ಲೆಯಿಂದ ಚಂದುಪಟ್ಲ ಕೀರ್ತಿ ರೆಡ್ಡಿ ಕಣಕ್ಕಿಳಿದಿದ್ದಾರೆ.
ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಪ್ರಾಮುಖ್ಯತೆ ನೀಡಿದೆ. ಈ 52 ಅಭ್ಯರ್ಥಿಗಳಲ್ಲಿ ಇಪ್ಪತ್ತು ಮಂದಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
“ಎಲ್ಲಾ ಮಹಿಳಾ ಅಭ್ಯರ್ಥಿಗಳು ಪಕ್ಷದ ದೀರ್ಘಕಾಲದ ಕಾರ್ಯಕರ್ತರು,” ಪಕ್ಷ ಹೇಳಿಕೊಂಡಿದೆ.
201 ರ ವಿಧಾನಸಭಾ ಚುನಾವಣೆಯಲ್ಲಿ, ತೆಲಂಗಾಣದ ಒಟ್ಟು 119 ಸ್ಥಾನಗಳಲ್ಲಿ ಬಿಜೆಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿತ್ತು.