ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಸ್ಪರ್ಧಿಸದಿರಲು ತೆಲುಗು ದೇಶಂ ಪಕ್ಷ (ಟಿಡಿಪಿ) ನಿರ್ಧರಿಸಿದೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ ಭಾಗವಾಗಿರುವ ಟಿಡಿಪಿ, ತೆಲಂಗಾಣದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ನಾಯಕರು ಇನ್ನೂ ಮಾಹಿತಿ ನೀಡಿಲ್ಲ ಎಂದೂ ವರದಿಯಾಗಿದೆ.
ಆದಾಗ್ಯೂ, ತೆಲಂಗಾಣದಲ್ಲಿ ಈ ವರ್ಷ ಜೂನ್ ಅಥವಾ ಜುಲೈನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸುತ್ತದೆ ಎಂದು ಟಿಡಿಪಿ ವಕ್ತಾರ ಜ್ಯೋತ್ಸ್ನಾ ತಿರುನಗರಿ ಹೇಳಿದ್ದಾರೆ.
“ನಾವು ಎನ್‌ಡಿಎ ಭಾಗವಾಗಿದ್ದರೂ ತೆಲಂಗಾಣದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ತೆಲಂಗಾಣದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ಪಕ್ಷದ ಹಿರಿಯ ನಾಯಕತ್ವ ನಿರ್ಧರಿಸುತ್ತದೆ. ಸದ್ಯಕ್ಕೆ ಇನ್ನೂ ಯಾವುದೇ ಸೂಚನೆ ಬಂದಿಲ್ಲ” ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಲಸಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದರು. ಅವರ ಬಂಧನದ ಬಳಿಕ ಪಕ್ಷದ ಪರಿಸ್ಥಿತಿ ಹೀನಾಯ ಸ್ಥಿತಿಯಲ್ಲಿದೆ. ತೆಲಂಗಾಣದಲ್ಲಿ ಟಿಡಿಪಿ ಪ್ರಾಬಲ್ಯವೇ ಇಲ್ಲದಂತಾಗಿದೆ.
ಚಂದ್ರಬಾಬು ನಾಯ್ಡು ಬಂಧನದ ನಂತರ, ಕಳೆದ ವರ್ಷ ನವೆಂಬರ್ 30ರಂದು ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷವು ಸ್ಪರ್ಧಿಸಿರಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಕ್ಸನೈ ಜ್ಞಾನೇಶ್ವರ್ ಅವರು ಟಿಡಿಪಿ ತೊರೆದು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸೇರಿದ್ದರು.
ಅಂದಿನಿಂದ, ತೆಲಂಗಾಣದಲ್ಲಿ ಪಕ್ಷವು ನೆಲೆ ಕಳೆದುಕೊಂಡಿದೆ. ಹಲವಾರು ನಾಯಕರು ಮತ್ತು ಕಾರ್ಯಕರ್ತರು ಪಕ್ಷವನ್ನು ತೊರೆಯುತ್ತಿದ್ದಾರೆ. 2018ರಲ್ಲಿ ನಡೆದಿದ್ದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 2 ಸ್ಥಾನಗಳ ಜೊತೆಗೆ, 3.51% ಮತಗಳನ್ನು ಪಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಜೊತೆ ಚುನಾವಣಾ ಪೂರ್ವ ಮೈತ್ರಿಯನ್ನೂ ಟಿಡಿಪಿ ಮಾಡಿಕೊಂಡಿತ್ತು.
“ಪಕ್ಷದ ತೆಲಂಗಾಣ ಘಟಕಕ್ಕೆ ಅಧ್ಯಕ್ಷರ ನೇಮಕವನ್ನು ಮಹಾನಾಡು (ಟಿಡಿಪಿಯ ವಾರ್ಷಿಕ ಸಮಾವೇಶ)ದಲ್ಲಿ ನಿರ್ಧರಿಸಲಾಗುತ್ತದೆ” ಎಂದು ಟಿಡಿಪಿ ನಾಯಕರು ಹೇಳಿದ್ದಾರೆ.