- ಚುನಾವಣೆ ಸಿದ್ಧತೆ ದೃಷ್ಟಿಯಿಂದ ಎಐಸಿಸಿಯಿಂದ ಮೊದಲ ಹಂತದ ಸಭೆ
- ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಭಾಗಿ
2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಸಿದ್ಧತೆ ದೃಷ್ಟಿಯಿಂದ ಮೊದಲ ಹಂತದ ಸಭೆಯನ್ನು ಎಐಸಿಸಿ ಬುಧವಾರ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಡೆಸಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಮುಖ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕಾಗಿ ಸೂತ್ರವೊಂದನ್ನು ಎಐಸಿಸಿ ವರಿಷ್ಠರು ರಾಜ್ಯ ನಾಯಕರ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರ ಈಗಾಗಲೇ ಜಾರಿಗೊಳಿಸಲು ಹೊರಟಿರುವ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು, ಯೋಜನೆಯ ಫಲಾನುಭವಿಗಳ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಸಂಪರ್ಕ ಮಾಡಬೇಕು ಎಂದು ಸೂಚಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಸುದ್ದಿ ಓದಿದ್ದೀರಾ? ಧರ್ಮದ ಹೆಸರಲ್ಲಿ ಜನರು ಬಡಿದಾಡಿಕೊಳ್ಳುವಂತೆ ಮಾಡುವುದು ಸಂವಿಧಾನದ ಅಣಕ : ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ವರಿಷ್ಠರ ಸೂಚನೆಗಳೇನು?
- ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಹೋರಾಡಬೇಕು.
- ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ತಡವಾಗದೇ, ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಿ ಆದಷ್ಟು ಬೇಗ ಅಖಾಡಕ್ಕೆ ಬಿಡಬೇಕು.
- ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಕಾರ್ಯಕ್ರಮ ರೂಪಿಸಿ, ಬಿಜೆಪಿಯ ಹಿಂದೂ ಮುಸ್ಲಿಂ ವಿಭಜನೆ ತಂತ್ರಕ್ಕೆ ಪ್ರತಿತಂತ್ರ ಹೆಣೆಯಬೇಕು.
- ಪಕ್ಷದ ಕಾರ್ಯಕರ್ತರ ಜತೆ ಎಲ್ಲ ಸಚಿವರು ಸಂಪರ್ಕದಲ್ಲಿದ್ದು, ಯಾವ ಸಚಿವರ ವಿರುದ್ಧವೂ ದೂರು ಬರದಂತೆ ನೋಡಿಕೊಳ್ಳಬೇಕು.
- ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಕಚೇರಿ ಇರಬೇಕು, ಕಾಂಗ್ರೆಸ್ ಗ್ಯಾರಂಟಿಗಳನ್ನು ಕೊಟ್ಟಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು.
- ಜನರ ಪರವಾಗಿದ್ದರೆ ಯೋಚಿಸಿದರೆ ಜನರು ಕೈ ಹಿಡಿಯುತ್ತಾರೆ ಎಂಬುದಕ್ಕೆ ಕರ್ನಾಟಕ ಚುನಾವಣೆ ಫಲಿತಾಂಶ ಸಾಕ್ಷಿ, ಹೀಗಾಗಿ ಜನಪರ ಪಕ್ಷ ಕಾಂಗ್ರೆಸ್ ಎಂಬುದು ಮತ್ತೆ ಮತ್ತೆ ಪ್ರಚಾರಮಾಡಬೇಕು.