ಮಾಧ್ಯಮಗಳ ಪಕ್ಷಪಾತಿ ಧೋರಣೆ ಮತ್ತೆ ಅನಾವರಣ; ಸಿ.ಟಿ.ರವಿಗೆ ಇಷ್ಟೊಂದು ಪ್ರಚಾರ ನೀಡಬೇಕಿತ್ತೆ?

Date:

Advertisements

ಒಬ್ಬ ಹೆಣ್ಣು ತನ್ನ ಮೇಲೆ ಇಂತಹ ತುಚ್ಛವಾದ ಪದದಿಂದ ನಿಂದನೆಯಾಯಿತು ಎಂದಾಗ ಸಮಚಿತ್ತದಿಂದ ನೋಡಬೇಕಾದದ್ದು, ಅದು ಸಮರ್ಪಕ ತನಿಖೆಯಾಗಿ ಸತ್ಯ ಹೊರಬೀಳುವಂತೆ ಆಗ್ರಹಿಸಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ

ಸುದ್ದಿ ಮಾಡಬೇಕಾದ ಮಾಧ್ಯಮಗಳು ಮತ್ತೆ ಸುದ್ದಿಯಲ್ಲಿವೆ. ಬಿಜೆಪಿಯ ಯೋಜಿತ ಪ್ರಚಾರಗಳಿಗೆ ತಕ್ಕಂತೆ ಮುಖ್ಯವಾಹಿನಿ ಮಾಧ್ಯಮಗಳು ಕುಣಿಯುತ್ತವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಆದರೆ ಯಾವ ವಿಚಾರದ ಪರ ನಿಲ್ಲಬೇಕೋ ಆ ವಿಚಾರಗಳ ಪರ ಅವುಗಳು ನಿಲ್ಲುವುದಿಲ್ಲ ಎಂಬುದು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿಯವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ‘ಪ್ರಾಸ್ಟಿಟ್ಯೂಟ್’ (ವೇಶ್ಯೆ) ಎಂದಿದ್ದಾರೆ ಎಂಬುದು ಭಾರೀ ವಿವಾದವನ್ನು ಹುಟ್ಟುಹಾಕಿದೆ. ಸಿ.ಟಿ.ರವಿ ವಿರುದ್ಧ ಈಗ ಕೇಸ್ ದಾಖಲಾಗಿ, ಕೋರ್ಟ್ ಮೆಟ್ಟಿಲೇರಿದೆ. ರವಿಯ ಬಂಧನದಿಂದ ಹಿಡಿದು, ಬಿಜೆಪಿ ಕಟ್ಟುತ್ತಿರುವ ಪಿತೂರಿ ಕಥನಗಳನ್ನು ಸಮಚಿತ್ತದಿಂದ ವರದಿ ಮಾಡಬೇಕಾದ ಮಾಧ್ಯಮಗಳು, ಭಾರೀ ಪ್ರಚಾರವನ್ನು ಬಿಜೆಪಿಯ ಯೋಜಿತ ಪ್ರಚಾರಕ್ಕೆ ನೀಡುತ್ತಾ ಬಂದಿರುವುದು ಕಾಣುತ್ತಿದೆ.

Advertisements

‘ಪ್ರಾಸ್ಟಿಟ್ಯೂಟ್’ ಎಂಬ ಪದ ಬಳಸಿಲ್ಲ, ಅದಕ್ಕೆ ಆಧಾರವಿಲ್ಲ ಎಂಬ ವಾದವನ್ನು ಸಿ.ಟಿ.ರವಿ ಮಾಡಿದ್ದಾರೆ. ಅದಕ್ಕೆ ಮಾಧ್ಯಮಗಳು ಕೊಟ್ಟಿರುವ ಪ್ರಚಾರ ಹೇಳತೀರದು. ಮತ್ತೊಂದೆಡೆ, ಬಿಜೆಪಿ ಬೆಂಬಲಿಗರು ಅಶ್ಲೀಲವಾಗಿ ಕಮೆಂಟ್ ಮಾಡುವಂತೆ ವರದಿಗಾರಿಕೆ ನಡೆಯುತ್ತಿದೆ. ಸಿ.ಟಿ.ರವಿಯವರನ್ನು ‘ಮಹಾತ್ಮ’ ಎಂಬಂತೆ ತೋರಿಸಲಾಗುತ್ತಿದೆ. ‘ಸಿ.ಟಿ.ರವಿಯನ್ನು ರಾತ್ರಿಯೆಲ್ಲ ಅಲೆದಾಡಿಸಿದ ಪೊಲೀಸರು, ಸಿ.ಟಿ.ರವಿಗೆ ಪೊಲೀಸರಿಂದ ಕಿರುಕುಳ, ಚಿಕ್ಕಮಗಳೂರು ಬಂದ್‌ ಬಂದ್, ಕೋರ್ಟ್ ಮುಂದೆ ಗುಡುಗಿದ ರವಿ, ಅಶೋಕ್ ಪ್ರತಿಕ್ರಿಯೆ, ವಿಜಯೇಂದ್ರ ಪ್ರತಿಕ್ರಿಯೆ, ಅಶ್ವತ್ಥ ನಾರಾಯಣ್ ಪ್ರತಿಕ್ರಿಯೆ’—ಹೀಗೆ ಬಿಜೆಪಿ ನಾಯಕರಿಗೆ ಮೈಕ್ ಹಿಡಿದು ಹೇಳಿಕೆಗಳನ್ನು ಮಾಧ್ಯಮಗಳು ಕೊಡಿಸುತ್ತಾ ಬಂದಿವೆ. ನಡುನಡುವೆ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಪ್ರಕಟಿಸುತ್ತಿರುವುದು ಸುಳ್ಳಲ್ಲ. ಪ್ರತಿಕ್ಷಣವೂ ಸಿಟಿ ರವಿಯ ಸುತ್ತ ಮಾಧ್ಯಮಗಳು ವರದಿ ಮಾಡುತ್ತಾ ಹೋದವು. 24* 7 ಮಾಧ್ಯಮಗಳು ಯಾವುದನ್ನು ಹೆಚ್ಚು ತೋರಿಸುತ್ತವೆ, ಅವುಗಳ ಉದ್ದೇಶ ಏನು ಎಂಬುದು ಮುಖ್ಯವಾಗುತ್ತದೆ. ಸಿ.ಟಿ.ರವಿ ವಿಚಾರ ಟಿಆರ್‌ಪಿಯ ವಸ್ತು ನಿಜ. ಹಾಗೆಂದು ರವಿಯವರನ್ನು ‘ಸಂತ್ರಸ್ತ’ ಎಂಬಂತೆ ಬಿಂಬಿಸುವ ಹಿಂದಿರುವ ಹುನ್ನಾರಗಳನ್ನು ಪ್ರಶ್ನಿಸಬೇಕಾಗಿದೆ.

ಇದನ್ನೂ ಓದಿರಿ: ಪರಿಷತ್‌ ಸ್ಥಾನದಿಂದ ಸಿ ಟಿ ರವಿ ವಜಾ ಮಾಡುವಂತೆ ಲಕ್ಷ್ಮಿ ಹೆಬ್ಬಾಳ್ಕರ್‌ ಬೆಂಬಲಿಗರ ಆಗ್ರಹ

ಸಿ.ಟಿ.ರವಿಯ ಕೊಳಕು ನಾಲಗೆ ಇದೇ ಮೊದಲೇನೂ ಅಸಾಂವಿಧಾನಿಕ ಮಾತುಗಳನ್ನು ಆಡಿಲ್ಲ. ಕೋಮುದ್ವೇಷದ ಭಾಷಣಗಳನ್ನು ಮೊದಲಿನಿಂದಲೂ ಮಾಡುತ್ತ ಬಂದಿದ್ದ ಇವರು, ತನ್ನ ಹೀನ ಸಂಸ್ಕಾರವನ್ನು ಈ ಹಿಂದೆಯೂ ಸದನದಲ್ಲಿ ಒಳಗೆ ತೋರಿಸಿಕೊಂಡಿದ್ದುಂಟು. ಇದೇ ವರ್ಷದ ಜುಲೈ 15ರಂದು ‘ನಿತ್ಯ ಸುಮಂಗಲಿಯರು’ ಎಂದು, ವಿಧಾನ ಪರಿಷತ್ತಿನಲ್ಲೇ ಹೇಳಿಕೆ ನೀಡಿದ್ದ ವ್ಯಕ್ತಿ ಸಿ.ಟಿ.ರವಿ. ಪಕ್ಷಾಂತರ ಮಾಡಿದ ಬಿಜೆಪಿ ಶಾಸಕ ಪುಟ್ಟಣ್ಣ ವಿಚಾರಕ್ಕೆ ರವಿ ಆ ಮಾತು ಆಡಿದ್ದನ್ನು ಕಾಣಬಹುದು. ನಿತ್ಯ ಸುಮಂಗಲಿ ಎಂಬುದಕ್ಕೆ ವೇಶ್ಯೆ ಎಂಬ ಅರ್ಥವೂ ಇದೆ. ಇದನ್ನು ಕಾಂಗ್ರೆಸ್‌ನ ಉಮಾಶ್ರೀ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಶ್ನಿಸಿದಾಗ, ‘ಅಕ್ಕೋ ಇದು ಹಿಂದಿನಿಂದಲೂ ಬಳಸುತ್ತಿರುವ ಪದ’ ಎಂಬ ಸಮರ್ಥನೆಯನ್ನು ನೀಡಿದ್ದರು ರವಿ.

ಸ್ತ್ರೀ ತುಚ್ಛೀಕರಣದ ಪದಗಳನ್ನು ರಾಜಕಾರಣಿಗಳು ಮೊದಲಿನಿಂದಲೂ ಬಳಸುತ್ತಾ ಬಂದಿದ್ದಾರೆ. ರಾಜಕೀಯ ಪಕ್ಷಗಳ ಬೆಂಬಲಿಗರೂ ಹಾಗೆಯೇ ವರ್ತಿಸುತ್ತಾರೆ. “ನಾನೇನೂ ಬಳೆ ತೊಟ್ಟಿಕೊಂಡಿಲ್ಲ” ಎಂದು ರಾಜಕೀಯ ನಾಯಕರು ನೀಡುವುದು ಸರ್ವೇಸಾಮಾನ್ಯವಾಗಿದೆ. ಬಿಜೆಪಿಯ ಅಶ್ವತ್ಥ ನಾರಾಯಣ, “ನಾವೇನೂ ಬಳೆ ತೊಟ್ಟು ಕೂತಿಲ್ಲ” ಎಂದು ಹೇಳಿಕೆ ನೀಡುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿಗೆ, ‘ಸೀರೆ, ಬಳೆ ಉಡುಗೊರೆ ಕೊಡುತ್ತೇವೆ’ ಎನ್ನುತ್ತಾರೆ.

ಒಬ್ಬ ಹೆಣ್ಣು ತನ್ನ ಮೇಲೆ ಇಂತಹ ತುಚ್ಛವಾದ ಪದದಿಂದ ನಿಂದನೆಯಾಯಿತು ಎಂದಾಗ ಸಮಚಿತ್ತದಿಂದ ನೋಡಬೇಕಾದದ್ದು, ಅದು ಸಮರ್ಪಕ ತನಿಖೆಯಾಗಿ ಸತ್ಯ ಹೊರಬೀಳುವಂತೆ ಆಗ್ರಹಿಸಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುಳ್ಳು ಹೇಳಿದ್ದಾರೆಂದು ಹೇಳುವ ಮಾತುಗಳಿಗೆ ಸ್ಪೇಸ್ ನೀಡುತ್ತಾ ಹೋದರೆ ಅದು ಬೇಜವಾಬ್ದಾರಿಯ ವರ್ತನೆಯಾಗುತ್ತದೆ. ಇದರ ನಡುವೆ ಮತ್ತೊಂದು ಆರೋಪ ಬಂದಿದೆ. ಸಿ.ಟಿ.ರವಿಯವರು, ಹೆಬ್ಬಾಳ್ಕರ್ ಅವರಿಗೆ ಪ್ರಾಸ್ಟಿಟ್ಯೂಟ್ ಎಂದು ಬಳಸಿರುವ ಪದವನ್ನು ಕೆಲ ಮಾಧ್ಯಮಗಳು ಆರಂಭದಲ್ಲಿ ಪ್ರಕಟಿಸಿ, ನಂತರದಲ್ಲಿ ಸೋಷಿಯಲ್ ಮೀಡಿಯಾದಿಂದ ಅಳಿಸಿ ಹಾಕಿವೆ ಎನ್ನಲಾಗುತ್ತಿದೆ. ಅದರ ಕುರಿತು ತನಿಖೆಯಾಗಬೇಕಿದೆ. ಆದರೆ ಪ್ರಾಸ್ಟಿಟ್ಯೂಟ್ ಎಂದು ಬಳಸಿರುವುದು ಸ್ಪಷ್ಟವಾಗಿ ಕೇಳಿಸುತ್ತಿರುವ ವಿಡಿಯೊ ತುಣುಕುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಿಜೆಪಿ ಪರವಾದ ಧೋರಣೆಯಲ್ಲಿ ಮಾಧ್ಯಮಗಳು ವರದಿ ಮಾಡುವುದು ಇದೇ ಮೊದಲೇನೂ ಅಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕೋಮು ಅಜೆಂಡಾಗಳನ್ನು ದಿನಬೆಳಗಾದರೆ ಮಾಧ್ಯಮಗಳು ನಿರಂತರ ತೋರಿಸಿದರೂ ಬಿಜೆಪಿ ಹೀನಾಯ ಸೋಲು ಕಂಡಿತು. ತೇಜಸ್ವಿ ಸೂರ್ಯ ಯಾವುದೋ ಒಂದು ವಿಡಿಯೊ ತುಣುಕನ್ನೋ, ಸುಳ್ಳು ವರದಿಯನ್ನೋ ಟ್ವೀಟ್ ಮಾಡಿದ ತಕ್ಷಣ ರಾಜ್ಯದಿಂದ ಹಿಡಿದು ರಾಷ್ಟ್ರ ಮಟ್ಟದ ಮಾಧ್ಯಮಗಳವರೆಗೆ ವರದಿ ಮಾಡುತ್ತವೆ. ಅವುಗಳ ಅಧಿಕೃತತೆಯ ಬಗ್ಗೆ ಯೋಚಿಸುವುದೇ ಇಲ್ಲ. ‘ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಲಾಗಿದೆ ಎಂದು ಬಿಜೆಪಿ ವಿವಾದ ಎಬ್ಬಿಸಿದ ತಕ್ಷಣ ಅದನ್ನೇ ಮಾಧ್ಯಮಗಳು ನಿಜವೆಂಬಂತೆ ತೋರಿಸುತ್ತವೆ. ‘ಹಿಂದೂಗಳ ಆಸ್ತಿಗಳನ್ನು ವಕ್ಪ್ ಕಬಳಿಸುತ್ತಿದೆ, ಅದು ವಕ್ಫ್, ಇದು ವಕ್ಫ್, ಎಲ್ಲೆಲ್ಲೂ ವಕ್ಫ್ ವಕ್ಫ್’- ಎಂದು ಬಿಜೆಪಿ ಪ್ರಚಾರ ಮಾಡಿದರೆ ಅದರ ಸತ್ಯಾಸತ್ಯತೆ ಪರಿಶೀಲಿಸದೆ ಬಿಜೆಪಿ ತಾಳಕ್ಕೆ ತಕ್ಕಂತೆ ಮುಖ್ಯವಾಹಿನಿ ಮಾಧ್ಯಮಗಳು ಕುಣಿಯುತ್ತವೆ. ಸಿ.ಟಿ.ರವಿ ಪ್ರಕರಣದಲ್ಲಿ ಆಗುತ್ತಿರುವುದು ಇದೇ.

ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಹೇಳುವುದು ವ್ಯಸನ ಆಗಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರಿಂದಾಗಿ ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿರೋಧ ಉಂಟಾಯಿತು. ಅಂಬೇಡ್ಕರ್ ಅವರ ಭಾವಚಿತ್ರಗಳು ಸದನದ ತುಂಬೆಲ್ಲ ರಾರಾಜಿಸಿದವು. ಅಂಬೇಡ್ಕರರ ವಿಚಾರ ಚರ್ಚೆಯಾಗುತ್ತಿದ್ದಾಗ, ಅದರ ದಿಕ್ಕು ಬದಲಿಸಲೆಂದೇ ಬಿಜೆಪಿಯವರು ಬೇರೆಯ ವಿವಾದ ಸೃಷ್ಟಿಸಿದ್ದಾರೆ ಎಂಬ ವಾದಗಳನ್ನು ಅನೇಕರು ಮಾಡುತ್ತಿದ್ದಾರೆ. ಅದು ಸತ್ಯವೂ ಇರಬಹುದೇನೋ. ಬಿಜೆಪಿಯ ಪ್ರತಾಪ್ ಸಾರಂಗಿಯವರನ್ನು ರಾಹುಲ್ ಗಾಂಧಿ ತಳ್ಳಿದ್ದರಿಂದ ಪೆಟ್ಟಾಯಿತು ಎಂದು ವಿವಾದ ಎಬ್ಬಿಸಲಾಗಿದೆ. ಕ್ಷಣಾರ್ಧದಲ್ಲಿ ರಾಹುಲ್ ಅವರ ವಿಡಿಯೊ ತಿರುಚಿ ಟ್ವೀಟ್ ಮಾಡಿದ್ದಾರೆ- ಬಿಜೆಪಿ ನಾಯಕರು. ಈಗ ರಾಜ್ಯದಲ್ಲಿ ಇಂತಹದ್ದೇ ವಿದ್ಯಮಾನ. ಸಿ.ಟಿ.ರವಿಯನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಅತಿರೇಕದ ಹೇಳಿಕೆಯನ್ನು ಬಿಜೆಪಿ ನಾಯಕರು ಕೊಡುತ್ತಿದ್ದಾರೆ. ಇದೆಲ್ಲವೂ ಅಂಬೇಡ್ಕರ್ ವಿಚಾರದ ಕುರಿತು ಎದ್ದಿರುವ ಚರ್ಚೆಯನ್ನು ತಿರುಚಲು ಹೀಗೆ ವರ್ತಿಸುತ್ತಲೂ ಇರಬಹುದು. ಆದರೆ ಸಿ.ಟಿ.ರವಿಯವರ ಸಂಸ್ಕಾರ ಮಾತ್ರ ಈ ಪ್ರಕರಣದಿಂದ ಚರ್ಚೆಗೆ ಬಂದಿರುವುದಂತೂ ಅಕ್ಷರಶಃ ಸತ್ಯ. ಮಾಧ್ಯಮಗಳು ತೋರಿಸುವುದು ನಿಜವೋ, ಸತ್ಯ ಬೇರೊಂದು ಇರುತ್ತದೆಯೋ ಎಂಬುದನ್ನು ಈ ನಾಡಿನ ಜನ ವಿವೇಚನೆಯಿಂದ ಸ್ವೀಕಾರಿಸುತ್ತಾರೆಂಬುದು ಸತ್ಯ.

ಮಾಧ್ಯಮಗಳಲ್ಲಿ ಬರುವುದೆಲ್ಲ ನಿಜವಲ್ಲ, ಅದನ್ನು ಜನ ನಂಬುವುದಿಲ್ಲ ಎಂಬುದಕ್ಕೆ ಎರಡು ಉದಾಹರಣೆಯನ್ನು ಹೇಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು. ಅವು ನಿಜಕ್ಕೂ ಜನಪರ ಕಾರ್ಯಕ್ರಮಗಳೆಂಬುದು ನಿರ್ವಿವಾದ. ಆದರೆ ಬಿಜೆಪಿಯವರು ಗ್ಯಾರಂಟಿಗಳನ್ನು ಬಿಟ್ಟಿಭಾಗ್ಯ ಎಂದೂ, ಅವುಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದೂ, ಇಂತಹ ಯೋಜನೆಗಳನ್ನು ತಕ್ಷಣವೇ ಕೈಬಿಡಬೇಕು ಎಂದೂ ಪ್ರಚಾರ ಶುರುಮಾಡಿದರು. ಮಾಧ್ಯಮಗಳನ್ನು ನೋಡಿದವರಿಗೆ, ‘ಅರೆ ಗ್ಯಾರಂಟಿಗಳ ವಿರುದ್ಧ ಜನ ಭುಗಿಲೆದ್ದಿದ್ದಾರೆ’ ಎಂಬಂತೆ ಭಾಸವಾಗುತ್ತಿತ್ತು. ಇದರ ಸತ್ಯಾಸತ್ಯತೆ ತಿಳಿಯಲು ‘ಈದಿನ.ಕಾಂ’ 2023ರ ಜುಲೈನಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಸಮೀಕ್ಷೆ ನಡೆಸಿತ್ತು. ಸಮೀಕ್ಷೆಗೆ ಒಟ್ಟು ಪ್ರತಿಕ್ರಿಯಿಸಿದವರಲ್ಲಿ ಸುಮಾರು 69%ರಷ್ಟು ಮಂದಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆವರೆಗಿನ ಸಾಧನೆಗೆ ತಮ್ಮ ಅನುಮೋದನೆಯ ಮುದ್ರೆಯನ್ನು ಒತ್ತಿದ್ದರು. ಸುಮಾರು 70% ರಷ್ಟು ಮಹಿಳೆಯರು ಈ ಸರ್ಕಾರದ ಕಾರ್ಯಕ್ಷಮತೆಯಿಂದ ಸಂತೋಷಪಟ್ಟಿದ್ದರು. ಪ್ರತಿಕ್ರಿಯಿಸಿದವರಲ್ಲಿ ಸುಮಾರು 61% ರಷ್ಟು ಜನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯನ್ನು ಸರ್ಕಾರವು ಈಡೇರಿಸುತ್ತದೆ ಎಂದಿದ್ದರು.

ಇದನ್ನೂ ಓದಿರಿ: ಲೇಖಕಿ ಬಾನು ಮುಷ್ತಾಕ್ ಅವರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಹಿರಂಗ ಪತ್ರ

ಇನ್ನೊಂದು ಉದಾಹರಣೆ: ಹಾಸನದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಜನಕಲ್ಯಾಣ ಸಮಾವೇಶ’ದ ವರದಿಗಾಗಿ ನಮ್ಮ ತಂಡವೂ ಹೋಗಿತ್ತು. ಜನರ ಅಭಿಪ್ರಾಯಗಳನ್ನು ವಿಡಿಯೊ ಮಾಡಿಕೊಂಡು ಪ್ಯಾಕ್ ಮಾಡುವ ಹೊತ್ತಿಗೆ ನಮ್ಮ ಚಾನೆಲ್ ನೋಡಿ ಒಬ್ಬ ಮುದುಕಪ್ಪ ಬಂದ. ನಾನು ಮಾತಾಡ್ತೀನಿ, ರೆಕಾರ್ಡ್ ಮಾಡಿಕೊಳ್ಳಿ ಎಂದ. “ಇಲ್ಲ ಗೌಡ್ರೇ, ಎಲ್ಲ ರೆಕಾರ್ಡ್ ಮಾಡಿಕೊಂಡಿದ್ದೇವೆ.‌ ಸಾಕು ಅನಿಸುತ್ತದೆ. ಹೊರಡುತ್ತಿದ್ದೇವೆ” ಎಂದೆವು. ಆ ಅಜ್ಜನಿಗೆ ನಮ್ಮಂಥ ಚಿಕ್ಕ ಡಿಜಿಟಲ್ ಮಾಧ್ಯಮಗಳ ಪರಿಚಯ ಇರಲಿಕ್ಕಿಲ್ಲ. ನಾವು ವಿಡಿಯೊ ಮಾಡಿಕೊಳ್ಳಲ್ಲ ಅಂದಿದ್ದಕ್ಕೆ ಆತನಿಗೆ ಸಿಟ್ಟು ಬಂತು. “ಏನ್ ನೀವು ಬಿಜೆಪಿಯವರಾ? ಯಾಕಿಲ್ಲಿಗೆ ಬಂದಿದ್ದೀರಿ. ನನ್ನ ಮಾತು ತಗೋ. ನೀವು ಟಿವಿಯವರೆಲ್ಲ ಬಿಜೆಪಿ ಪರ” ಎಂದು ಬಿಟ್ಟರು.

ಅವರ ಮಾತು ಕೇಳಿ ನಮಗೆ ಕೋಪ ಬರಲಿಲ್ಲ. ಬಿಜೆಪಿಯ ಕಾರ್ಯತಂತ್ರಗಳನ್ನು, ಕೋಮುವಾದವನ್ನು ಜನರ ಮನಸ್ಸಲ್ಲಿ ಪ್ರತಿಷ್ಠಾಪಿಸಲು ಮುಖ್ಯವಾಹಿನಿ ಮಾಧ್ಯಮಗಳು ಎಷ್ಟೇ ಬಾಯಿ ಬಡಿದುಕೊಂಡರೂ ಜನರಲ್ಲಿ ಒಂದು ಎಚ್ಚರಿಕೆ ಕೆಲಸ ಮಾಡುತ್ತಿದೆ ಎಂಬ ಅರಿವಾಯಿತು. ಜನಕ್ಕೆ ಬೇಕಾಗಿರುವುದು ಶಾಂತಿ, ನೆಮ್ಮದಿಯೇ ಹೊರತು, ವಿಷ ಬೀಜ ಬಿತ್ತುವ ಸಿದ್ಧಾಂತವಂತೂ ಖಂಡಿತ ಅಲ್ಲ. ಮಾಧ್ಯಮಗಳು ಬಿಜೆಪಿ ಪರ ಕೆಲಸ ಮಾಡುತ್ತಿವೆ ಎಂಬ ಮನೋಭಾವ ಜನರಲ್ಲಿ ಬಂದುಬಿಟ್ಟಿದೆ. ಮುಖ್ಯವಾಹಿನಿ ಮಾಧ್ಯಮ ವಿರೋಧಿ ಚಳವಳಿ ಕಳೆದೊಂದು ದಶಕದಿಂದ ನಡೆಯುತ್ತಿರುವುದರ ಪರಿಣಾಮಗಳು ಈಗ ಕಾಣಿಸುತ್ತಿವೆ. ಜನ ಸಾಮಾನ್ಯರಿಗೂ ಮಾಧ್ಯಮಗಳು ಜನಪರವಿಲ್ಲ ಎಂಬ ಎಚ್ಚರಿಕೆ ಮೂಡಿದೆ ಎಂಬುದಂತೂ ಖಾತ್ರಿ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X