“ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ನಾನು ಬೆಂಬಲ ನೀಡುತ್ತೇನೆ. ಬಿಜೆಪಿಯವರ ಕೈಯಲ್ಲಿ ಏನು ಮಾಡುಕಾಗುತ್ತೋ ಮಾಡಿಕೊಳ್ಳಲಿ. ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ” ಎಂದು ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ.
ನಗರದ ಕೆಂಗೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, “ಕ್ಷೇತ್ರದ ಎಲ್ಲ ಮತದಾರರ ಸಭೆ ಕರೆದಿದ್ದೆ, ಈ ಸಭೆಯಲ್ಲಿ ಇದುವರೆಗೂ ನಡೆದಂತಹ ಎಲ್ಲ ಮಾಹಿತಿಯನ್ನು ಕೊಟ್ಟಿದ್ದೇನೆ. ಬಿಜೆಪಿಯವರು ನನ್ನ ಜತೆಗೆ ನಡೆದುಕೊಂಡ ಬಗ್ಗೆಯೂ ಮಾಹಿತಿ ನೀಡಿದ್ದೇನೆ” ಎಂದರು.
“ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಘೋಷಣೆಯಾಗಿ ಇಷ್ಟು ದಿನ ಆದರೂ ಯಾರೊಬ್ಬರೂ ನನ್ನನ್ನು ಬೆಂಬಲ ಕೊಡಿ ಎಂದು ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 7 ರಿಂದ 8 ಬಾರಿ ಪ್ರಚಾರ ಮಾಡಿದ್ದಾರೆ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನನ್ನ ಬಳಿ ಇಲ್ಲಿಯವರೆಗೂ ಬಿಜೆಪಿಯ ಯಾವ ಅಭ್ಯರ್ಥಿಗಳು ಬಂದು ಪ್ರಚಾರ ನಡೆಸಿ ಎಂದು ಕೇಳಿಲ್ಲ. ಬಿಜೆಪಿಯ ಯಾವ ನಾಯಕರೂ ಯಾವುದೇ ಮಾಹಿತಿ ನೀಡಿಲ್ಲ. ನಮಗೂ ಸ್ವಾಭಿಮಾನ ಇದೆ. ಇಷ್ಟೆಲ್ಲಾ ಆದ ನಂತರವೂ ಸುಮ್ಮನಿದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ” ಎಂದರು.
“ರಾಜ್ಯ ನಾಯಕರೂ ಮಾತ್ರವಲ್ಲದೇ, ಕೇಂದ್ರ ನಾಯಕರೂ ಕೂಡ ನನ್ನನ್ನೂ ಸಂಪರ್ಕ ಮಾಡಿಲ್ಲ. ಮೊನ್ನೆ ಅಮಿಶಾ ಅವರು ಬಂದಾಗಲೂ ಕೂಡ ನನಗೆ ಆಹ್ವಾನ ನೀಡಿಲ್ಲ. ಗುರುವಾರದವರೆಗೂ ಕಾದಿದ್ದೆ, ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ, ಕಾರ್ಯಕರ್ತರ ಸಭೆ ಕರೆದಿದ್ದೇನೆ. ನಮ್ಮ ಅವಶ್ಯಕತೆ ಇಲ್ಲದವರ ಬಳಿ ನಾವ್ಯಾಕೆ ಹೋಗಬೇಕು” ಎಂದು ಹೇಳಿದರು.
“ಚಿಕ್ಕಮಗಳೂರಿನಿಂದ ಗೋ ಬ್ಯಾಕ್ ಎಂದು ಹೊರ ಹಾಕಿದವರನ್ನು ತಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಅಂಥವರನ್ನು ಬೆಂಗಳೂರಿನವರು ಸ್ವಾಗತ ಮಾಡಬೇಕಾ?” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? 2024-25ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಮೇ 29ರಿಂದ ಶಾಲೆಗಳು ಆರಂಭ
ಕಾಂಗ್ರೆಸ್‌ಗೆ ಮತ್ತೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಎಲ್ಲವನ್ನೂ ಕಾದು ನೋಡಿ. ಬಿಜೆಪಿಯವರೂ ಈಗ ಯಾರೇ ಬಂದು ಬೆಂಬಲ ನೀಡಿ ಎಂದು ಕೇಳಿದರೂ ನಾನು ಬೆಂಬಲ ನೀಡುವುದಿಲ್ಲ. ನನಗೆ ಯಾರೂ ಹೈಕಮಾಂಡ್ ಇಲ್ಲ. ನನ್ನ ಕ್ಷೇತ್ರದ ಮತದಾರರೇ ನನ್ನ ಹೈಕಮಾಂಡ್. ನನ್ನ ಕ್ಷೇತ್ರದ ಮತದಾರರ ನಿರ್ಧಾರವೇ ಅಂತಿಮ” ಎಂದರು.
“ನಾನೇ ಖುದ್ದಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ. ಪ್ರತಿ ದಿನ ಬಿಜೆಪಿಯವರು ನನ್ನನ್ನು ಯಾವ ರೀತಿ ಟಾರ್ಗೆಟ್ ಮಾಡಿದ್ದಾರೆ ಎಂಬುದು ಗೊತ್ತಿದೆ” ಎಂದು ಹೇಳಿದರು.