- ಅಕ್ಕಿ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ
- ಸುರ್ಜೇವಾಲಗೆ ತಿರುಗೇಟು ನೀಡಿದ ಮಾಜಿ ಸಚಿವ ಅಶೋಕ್
ರಾಜ್ಯಕ್ಕೆ ಉಚಿತ ಅಕ್ಕಿ ಸರಬರಾಜು ಮಾಡಲು ಒಪ್ಪದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿ ಮಾಜಿ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎನ್ನುವುದು ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಕಾರ್ಯಾಂಗ. ಇವರು ಹೇಳಿದಂತೆ ಕೇಳಲು ಅದೇನು ಕಾಂಗ್ರೆಸ್‌ನ ಅತ್ತೆ ಮನೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೇಂದ್ರದ ವಿರುದ್ಧ ಐದು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಕ್ಕಿ ಕೊಡದ ಕ್ರಮವನ್ನು ಖಂಡಿಸಿ ಮೋಸ ಎಂದಿದ್ದಾರೆ. ಸುರ್ಜೇವಾಲ ಅವರೇ, ನಿಮ್ಮ ಸರ್ಕಾರ ಅಕ್ಕಿಯೋಜನೆ ಜಾರಿ ಮಾಡುವಾಗ ದಾಸ್ತಾನು ಸಂಗ್ರಹಗಳ ಬಗ್ಗೆ ಮಾಹಿತಿ ಪಡೆದುಕೊಳ್ಳದೆಯೇ ಯೋಜನೆ ರೂಪಿಸಿ, ಈಗ ಕೇಂದ್ರ ಸರ್ಕಾರ ದೂರುವುದು ಎಷ್ಟು ಸರಿ ಎಂದು ಅಶೋಕ್ ಪ್ರಶ್ನಿಸಿದರು.
ಸುರ್ಜೇವಾಲ ತಮ್ಮನ್ನು ತಾವು ರಾಜ್ಯ ಸರ್ಕಾರದ ಸಚಿವರೆಂದುಕೊಂಡಿದ್ದಾರೆ. ಇಲ್ಲಿನ ಮಂತ್ರಿಗಳಿಗಿಂತ ಜಾಸ್ತಿ ಹಾರಾಡುತ್ತಿದ್ದಾರೆ. ಪ್ರಣಾಳಿಕೆ ರೂಪಿಸುವಾಗ ಕೇಂದ್ರದ ಯೋಜನೆ ಬಗ್ಗೆ ತಿಳಿದುಕೊಂಡು, ಲೆಕ್ಕಾಚಾರ ಮಾಡಿಕೊಂಡು ಪಕ್ಷದವರಿಗೆ ಸೂಚನೆ ನೀಡುವ ಬದಲು, ಈಗ ಕೂಗಾಡಿಬಿಟ್ಟರೆ ಎಲ್ಲವೂ ಆಗತ್ತಾ? ನಿಮಗೆ ಆಗ ಪ್ರಜ್ಞೆ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ನಿಮ್ಮಗಳ ಪ್ರಕಾರ ನೀವು ಹೇಳಿದ್ದಕ್ಕೆಲ್ಲ ಕೇಂದ್ರ ಒಪ್ಪಿಕೊಂಡು ಓಕೆ ಅನ್ನಬೇಕಾ? ನಾಳೆ ನೀವು ರಾಜ್ಯ ಮಾರುತ್ತೇವೆ ಎಂದಾಗ ಅದಕ್ಕೂ ಒಪ್ಪಿಗೆ ಕೊಡಬೇಕು ಅನ್ನೋದು ನಿಮ್ಮ ಆಶಯವೇ ಎಂದು ಸುರ್ಜೇವಾಲರಿಗೆ ಕುಟುಕಿದರು.
ನಾವು ಎಂದಿಗೂ ಅಕ್ಕಿ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ನಮ್ಮ ಕೇಂದ್ರ ಸರ್ಕಾರ ಐದು ಕೆ ಜಿ ಉಚಿತ ಅಕ್ಕಿ ನೀಡುತ್ತಿದೆ. ಅದಕ್ಕೆ ಕಾಂಗ್ರೆಸ್‌ನವರು ತಮ್ಮ ಸೀಲು ಹಾಕಿಕೊಂಡರು. ಇವರದ್ದೊಂದು ಥರ ಊರ ಜನ ಹೇಳುವಂತೆ ನನ್ನ ತಟ್ಟೇದೂ ನನ್ನದೇ, ನಿನ್ನ ತಟ್ಟೇದೂ ನನ್ನದೇ ಎಂದು ಹೇಳಿಕೊಳ್ಳುವಂತೆ ಆಗಿದೆ. ಸಿಎಂ, ಡಿಸಿಎಂ ಸೇರಿಕೊಂಡು ಗ್ಯಾರಂಟಿ ಕಾರ್ಡ್ ಕೊಡುವಾಗ ಮುಂದಿನ ಸಮಸ್ಯೆ, ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡುವ ಕನಿಷ್ಠ ಜ್ಞಾನ ಇರಲಿಲ್ಲವೇ ಎಂದು ಅಶೋಕ್ ಕೇಳಿದರು.
ಈ ಸುದ್ದಿ ಓದಿದ್ದೀರಾ?:ಕರ್ನಾಟಕದ ನೆಮ್ಮದಿಯ ನಾಳೆಗಳಿಗಾಗಿ ಬೇಕಿವೆ ಗ್ಯಾರಂಟಿಗಳು
ಕಾಂಗ್ರೆಸ್ ಬಂದಿರೋದು ಅಧಿಕಾರಕ್ಕೆ. ಅವರಿಗೆ ಅದಷ್ಟೇ ಮುಖ್ಯ. ಇವರಿಗೆ ಜನಾಡಳಿತ ಬೇಡ. ಇವರ ಆಡಳಿತ ನೋಡಿದರೆ ವರ್ಷದೊಳಗೆ ರಾಜ್ಯ ದಿವಾಳಿಯಾಗಬಹುದು ಎಂದ ಅಶೋಕ್, ಪಕ್ಷದ ಎಟಿಎಂ ತುಂಬುವುದಷ್ಟೇ ಇವರ ಕಾಳಜಿ ಎಂದ ಅಶೋಕ್, ಉಚಿತ ಅಂತ ಕೊಡೋದು ಅದರ ಡಬಲ್ ವಸೂಲಿ ಮಾಡಿಕೊಳ್ಳೋದು ಇವರ ಅಜೆಂಡಾ ಎಂದು ಕಾಂಗ್ರೆಸ್ ಕುಟುಕಿದರು.
120 ವರ್ಷದ ಜವಾಬ್ಧಾರಿ ಪಕ್ಷ ಯೋಜನೆ ತರುವಾಗ ಅದರ ಬಗ್ಗೆ ಯೋಚನೆ ಮಾಡಿ ಕೆಲಸ ಮಾಡಬೇಕು. ಯೋಜನೆ ರೂಪಿಸಬೇಕು. ಓಟಿಗಾಗಿ ಘೋಷಣೆ ಮಾಡಿ ಈಗ ಜನರಿಗೆ ಮೋಸ ಮಾಡುವುದೇ ಕಾಂಗ್ರೆಸ್. ನೀವು ಕೊಡುವದಕ್ಕೆ ನಾವು ಬೇಡ ಎನ್ನುವುದಿಲ್ಲ. ಆದರೆ ಲೆಕ್ಕಾಚಾರ ಇಲ್ಲದೆ ಮಾಡುವುದು ಸರಿ ಇಲ್ಲ. ಮೊದಲು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಆ ನಂತರ ಕೇಂದ್ರ ಸರ್ಕಾರವನ್ನು ದೂರಲಿ ಎಂದು ಅಶೋಕ್ ಹೇಳಿದರು.
ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ಮೋಸದ ಭರವಸೆಗಳ ವಿರುದ್ದವೂ ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಜೂನ್ 19ರಂದು ಹೋರಾಟದ ಅಂತಿಮ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.