ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ನ್ಯಾಯ ಸಿಗುವವರೆಗೂ ನಾನು ಕೊರಳಲ್ಲಿ ಭಕ್ತರಿಂದ ಮಾಲೆ ಹಾಕಿಸಿಕೊಳ್ಳುವುದಿಲ್ಲ ಎಂದು ದಿಂಗಾಲೇಶ್ವರ ಶ್ರೀಗಳು ಶಪಥ ಮಾಡಿದ್ದಾರೆ.
ಧಾರವಾಡದ ಸೇವಾಲಯದಲ್ಲಿ ಮಂಗಳವಾರ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, “ಈಗಾಗಲೇ ನಮ್ಮ ನಿಲುವು ಕೇಂದ್ರದವರೆಗೂ ಮುಟ್ಟಿದೆ. ನನ್ನ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾನಿರುವ ವೇದಿಕೆಯಲ್ಲಿ ಮಾಲೆ ಹಾಕಲು ಬಿಡುವದಿಲ್ಲ. ಗುರಿ ಮುಟ್ಟುವವರೆಗೂ ರಾಜ್ಯದ ಜನತೆ ನನಗೆ ಮಾಲೆ ಹಾಕಬೇಡಿ” ಎಂದು ಭಕ್ತರಿಗೆ ತಿಳಿಸಿದರು.
“ನಾನು ಹತ್ತು ವರ್ಷದವ ಇದ್ದಾಗ ಹೋರಾಟ ಮಾಡಿ ಮನೆ ಬಿಟ್ಟು, ಸನ್ಯಾಸಿ ಆದವನು. ವ್ಯಕ್ತಿಯ ಹಿತಕ್ಕಾಗಿ ಹೋರಾಟ ಮಾಡಿದವನು ನಾನಲ್ಲ. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅವೆರಡೂ ಒಂದೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆ” ಎಂದರು.
“ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಟ ಮಾಡಿದ್ದೆ. ಹಿಂದಿನ ಸರ್ಕಾರದಲ್ಲಿ 40% ಕಮಿಷನ್ ವಿರುದ್ಧ ಹೋರಾಟ ಮಾಡಿದ್ದೆ. ಈಗ ಪ್ರಲ್ಹಾದ್ ಜೋಶಿ ವಿರುದ್ಧ ಹೋರಾಟ ಮಾಡುತ್ತಿರುವೆ” ಎಂದು ಹೇಳಿದರು.
“ಜಾತಿ ಮತ್ತು ಪಕ್ಷದ ಪರವಾದ ಹೋರಾಟ ನನ್ನದಲ್ಲ. ನಮ್ಮ ಮಠ ಜಾತ್ಯತೀತ ಮಠ. ಜೋಶಿಯವರನ್ನು ನಮ್ಮ ಸಮಾಜದದವರು ಗೆಲ್ಲಿಸಿದರು. ಗೆಲ್ಲಿಸಿದವರನ್ನೇ ಜೋಶಿಯವರು ಮರೆತರು. ನನ್ನ ಹೋರಾಟಕ್ಕೆ ಜಯ ಸಿಕ್ಕ ಮೇಲೆಯೇ ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಮಾಲೆ ಹಾಕಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ದಿನ ಸಂಪಾದಕೀಯ | ಬರಗಾಲಕ್ಕೆ ಬರಲಿಲ್ಲ, ಪರಿಹಾರ ಕೊಡಲಿಲ್ಲ, ಓಡೋಡಿ ಬರುತ್ತಿದ್ದಾರೆ ಓಟಿಗಾಗಿ!
ದಲಿತರಿಗೂ ಮೋಸ
“ಕೇವಲ ಲಿಂಗಾಯತರಿಗೆ ಅಷ್ಟೇ ಅಲ್ಲದೇ, ದಲಿತರಿಗೂ ಮೋಸ ಮಾಡಿದ್ದಾರೆ. ಅನೇಕ ಬಹುಸಂಖ್ಯಾತರು ಜೋಶಿ ಕಾಟಕ್ಕೆ ನುಚ್ಚು ನೂರಾಗಿದ್ದಾರೆ. ಅನೇಕ ವ್ಯಕ್ತಿಗಳನ್ನು ಜೋಶಿ ನಾಶ ಮಾಡಿದ್ದಾರೆ. ಈ ರಾಜ್ಯದಲ್ಲಿ ಕಣ್ಣೀರು ಹಾಕಲಿಕ್ಕೆ ಅನುಮತಿ ಇಲ್ಲದಂತಾಗಿದೆ. ಹದಿನೈದು ವರ್ಷದ ಹಿಂದೆ ಕೇಂದ್ರ ಮಂತ್ರಿ ಆದ ವ್ಯಕ್ತಿ ಈಗ ಶಾಸಕನಾಗಿ ಇವರ ಕೈಗೊಂಬೆ ಆಗಿದ್ದಾರೆ. ಜೋಶಿ ಏನ್ ಹೇಳ್ತಾರೆ, ಆ ರೀತಿ ಒದರುತ್ತಿದ್ದಾರೆ” ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕಿಡಿಕಾರಿದರು.
ತಿಂದು ಹಾಕಿದ ಜೋಶಿ
“ಸದಾಕಾಲವೂ ಮೋದಿ ಪಕ್ಕ ಇರುವ ಜೋಶಿ ನಮ್ಮ ನಾಡಿಗಾಗಿ ಏನೂ ಮಾಡಿದ್ದಾರೆ? ಸಣ್ಣಪುಟ್ಟ ಕೆಲಸಕ್ಕಾಗಿ ನಾನು ವಿದ್ಯಾರ್ಥಿಗಳನ್ನು ಜೋಶಿ ಹತ್ತಿರ ಕಳಿಸಿದರೆ, ಅವರ ಕೆಲಸ ಕೂಡ ಮಾಡಿಲ್ಲ. ಇವರ ಸಂಸದರಾಗಿದ್ದು ಜನರ ಕೆಲಸ ಮಾಡಲಿಕ್ಕೆ. ಜೋಶಿ ಪ್ರಧಾನ ಮಂತ್ರಿ ಪಕ್ಕ ಇದ್ದಾಗ ನಮ್ಮ ನಾಡಿಗೆ ಏನಾದ್ರೂ ತಂದು ಹಾಕ್ತಾರೆಂದು ಕಾಯ್ದು ನೋಡಿದ್ವಿ. ಆದ್ರೆ ಜೋಶಿ ಏನೂ ತಂದು ಹಾಕಲಿಲ್ಲ, ಎಲ್ಲವನ್ನೂ ತಿಂದು ಹಾಕಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಮತದಾರರು ಜೋಶಿ ಕಿಸೆಯಲ್ಲಿದ್ದಾರಾ?
“ಪಕ್ಷದ ಕಾರ್ಯಕರ್ತರಿಗೆ ಇರುವ ನಿಷ್ಠೆ, ಆ ಪಕ್ಷದಿಂದ ಗೆದ್ದು ಬಂದವರಿಗೆ ಇರುವುದಿಲ್ಲ. ದಲಿತ ನಾಯಕ ಶಾಸಕನಾಗಿ ಆಯ್ಕೆಯಾಗಿ ನಾಲ್ಕು ತಿಂಗಳ ಕಳೆದರೂ ಜೋಶಿ ಅವರು ತಮ್ಮ ಮನೆಯೊಳಗೆ ಬಿಟ್ಟುಕೊಂಡಿರಲಿಲ್ಲ. ಚುನಾವಣೆ ಮೊದಲು ನಾನು ಅವರನ್ನು ನೋಡಿಕೊಳ್ಳುತ್ತೇನೆ. ಚುನಾವಣೆ ಮುಗಿದ ಮೇಲೆ ಅವರು ನನ್ನನ್ನು ನೋಡಿಕೊಳ್ಳಲಿ, ನಾನು ಎಲ್ಲದಕ್ಕೂ ಸಿದ್ದ” ಎಂದು ತಿಳಿಸಿದರು.
