ಪಾಟ್ನಾದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಒಗ್ಗಟ್ಟಿನ ಸಭೆಯು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ದೇಶದ 15 ಪಕ್ಷಗಳ 32 ನಾಯಕರು ಪಾಲ್ಗೊಂಡು 2024ರ ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ಒಟ್ಟಿಗೆ ಹೋರಾಡಲು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಪಾಲ್ಗೊಂಡಿರುವ ಎಲ್ಲ ಪಕ್ಷಗಳು ಒಟ್ಟಾಗಿ ಹೋರಾಡಲು ಸಾಮಾನ್ಯ ವೇದಿಕೆಯನ್ನು ಕಂಡುಕೊಳ್ಳುತ್ತಿವೆ. ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ ನಮ್ಮ ಸಿದ್ಧಾಂತವನ್ನು ರಕ್ಷಿಸಲು ಹೊಂದಾಣಿಕೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ” ಎಂದರು.
“ಮಲ್ಲಿಕಾರ್ಜುನ ಖರ್ಗೆ ಮತ್ತು ನಿತೀಶ್ ಕುಮಾರ್ ಅವರ ನೇತೃತ್ವದೊಂದಿಗೆ ಮುಂದಿನ ಸಭೆಯಲ್ಲಿ ನಾವು ಈ ಚರ್ಚೆಯನ್ನು ಇನ್ನಷ್ಟು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಪ್ರತಿಪಕ್ಷಗಳ ಒಗ್ಗಟ್ಟಿನ ಮೊದಲ ಹಂತದ ಪ್ರಕ್ರಿಯೆ ಈ ಸಭೆಯಿಂದ ಮುಂದುವರಿಯುತ್ತದೆ” ಎಂದು ರಾಹುಲ್ ಗಾಂಧಿ ತಿಳಿಸಿದರು.
ಮುಂದಿನ ಸಭೆ ಶಿಮ್ಲಾದಲ್ಲಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವ ಸಾಮಾನ್ಯ ಉದ್ದೇಶ ಮುಂದಿನ ಸಭೆಯಲ್ಲಿ ಅಂತಿಮಗೊಳ್ಳಲಿದೆ. ನಾವೆಲ್ಲರೂ ಒಟ್ಟಾಗಿ ಹೋರಾಡಲು ಸಾಮಾನ್ಯ ಕಾರ್ಯಸೂಚಿಗೆ ಬರಲು ಪ್ರಯತ್ನಿಸುತ್ತಿದ್ದೇವೆ. ಮುಂದಿನ ಜುಲೈ 10 ಅಥವಾ 12 ರಂದು ಶಿಮ್ಲಾದಲ್ಲಿ ಮತ್ತೆ ಸಭೆ ನಡೆಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಂಚನೆಗೆ ಕಾದಿದೆ ‘ಪಿಂಕ್ ವಾಟ್ಸಾಪ್’ ಲಿಂಕ್: ಹೊಸ ಫೀಚರ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ಹಣ, ದಾಖಲೆಗಳು ಮಾಯ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, “ನಾವು ಒಗ್ಗಟ್ಟಾಗಿದ್ದೇವೆ, ಒಗ್ಗಟ್ಟಿನಿಂದ ಹೋರಾಡುತ್ತೇವೆ. ಇತಿಹಾಸವನ್ನು ಬದಲಾಯಿಸಬೇಕು ಎಂದು ಬಿಜೆಪಿ ಬಯಸುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶವು ಮತ್ತೊಂದು ಚುನಾವಣೆಯನ್ನು ನೋಡುವುದಿಲ್ಲ. ಅಗತ್ಯವಿದ್ದರೆ ನಮ್ಮ ರಕ್ತ ಹರಿಯಲಿ. ಆದರೆ ನಾವು ನಮ್ಮ ಜನರನ್ನು ರಕ್ಷಿಸುತ್ತೇವೆ. ಬಿಜೆಪಿ ಇತಿಹಾಸವನ್ನು ಬದಲಾಯಿಸಬೇಕೆಂದು ಬಯಸುತ್ತದೆ, ಆದರೆ ಬಿಹಾರದಿಂದ ಇತಿಹಾಸವನ್ನು ಉಳಿಸುವ ಕಾರ್ಯ ನಡೆಯುತ್ತದೆ” ಎಂದು ತಿಳಿಸಿದರು.
ಸಭೆಯಲ್ಲಿ ಪಾಲ್ಗೊಂಡ ನಾಯಕರು ಇವರು
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ್ (ಕಾಂಗ್ರೆಸ್), ನಿತೀಶ್ ಕುಮಾರ್, ಲಾಲನ್ ಸಿಂಗ್, ಸಂಜಯ್ ಝಾ (ಜೆಡಿಯು), ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ಎಂಕೆ ಸ್ಟಾಲಿನ್, ಟಿ ಆರ್ ಬಾಲು (ಡಿಎಂಕೆ), ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ರಾಘವ್ ಛೆಡ್ಡಾ, ಸಂಜಯ್ ಸಿಂಗ್ (ಎಎಪಿ), ಹೇಮಂತ್ ಸೊರೇನ್ (ಜೆಎಂಎಂ), ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್ (ಶಿವಸೇನೆ, ಯುಬಿಟಿ), ಶರದ್ ಪವಾರ್, ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ (ಎನ್‌ಸಿಪಿ), ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ (ಆರ್‌ಜೆಡಿ), ಅಖಿಲೇಶ್ ಯಾದವ್ (ಎಸ್‌ಪಿ), ಸೀತಾರಾಮ್ ಯೆಚೂರಿ (ಸಿಪಿಐಎಂ), ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್), ಮೆಹಬೂಬಾ ಮುಫ್ತಿ (ಪಿಡಿಪಿ), ದೀಪಂಕರ್ ಭಟ್ಟಾಚಾರ್ಯ (ಸಿಪಿಐಎಂಎಲ್), ಡಿ ರಾಜಾ (ಸಿಪಿಐ), ಫಿರ್ಹಾದ್ ಹಕೀಮ್ (ಎಐಟಿಸಿ).