- ‘ಕೇಂದ್ರ ಸರ್ಕಾರ ಬಳೆ ತೊಡುವಂತಿಲ್ಲ ಮಾರ್ಗಸೂಚಿ ಹೊರಡಿಸಿದೆ‘
- ಕಟೀಲ್ ಕೈಗೆ ಬಳೆ ತೊಟ್ಟು ಇದನ್ನು ಪ್ರತಿಭಟಿಸಲಿ: ಕಾಂಗ್ರೆಸ್ ವ್ಯಂಗ್ಯ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆ ತೊಡದಂತೆ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಎಂಬ ಸುದ್ದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಗಳೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಮುಂದುವರಿದು, “ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿದೆ” ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆತೊಡದಂತೆ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಎಂದು ಹಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದರಿಂದಾಗಿ ಬಿಸಿಯೂಟ ತಯಾರು ಮಾಡುವ ಅಡುಗೆ ಸಿಬ್ಬಂದಿ, ಮಹಿಳಾ ಹೋರಾಟಗಾರ್ತಿಯರು ಸೇರಿದಂತೆ ಹಿಂದು ಸಂಘಟನೆಗಳಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಸ್ಪಷ್ಟನೆ ನೀಡಿದ್ದಾರೆ.
ಧಿಕ್ಕಾರ ಹಾಕಿ ಕಟೀಲ್ ಟ್ವೀಟ್
“ಹಿಂದೂಗಳ ವಿರುದ್ಧ ಸದಾ ವಿಷಕಾರುವ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ದ್ವೇಷದ ಆದೇಶ ಹೊರಬಿದ್ದಿದೆ. ʼಬಿಸಿಯೂಟ ಅಡುಗೆದಾರರುʼ ಕೈಗೆ ಬಳೆ ಧರಿಸಬಾರದು ಎಂದಿರುವ ಕಾಂಗ್ರೆಸಿಗರು ಆ ಬಳೆಗಳನ್ನು ತಾವು ಧರಿಸಿಕೊಳ್ಳಬೇಕೆಂದಿದ್ದಾರೆಯೇ? ಎಂಬುದೇ ತಿಳಿಯುತ್ತಿಲ್ಲ. ಹಿಂದೂ ಆಚರಣೆಗಳನ್ನು ಹತ್ತಿಕ್ಕಬೇಕೆಂಬ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ತಿರುಗೇಟು
“ತಮ್ಮದೇ ಸರ್ಕಾರ ರೂಪಿಸುವ ನೀತಿ ನಿಯಮಗಳ ಬಗ್ಗೆ ಅರಿವಿಲ್ಲದ ನಳಿನ್ ಕುಮಾರ್ ಅವರು ಸಂಸದ ಸ್ಥಾನಕ್ಕೆ ಅಪಚಾರವಿದ್ದಂತೆ. ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಬಿಸಿಯೂಟದ ಕಾರ್ಯಕರ್ತೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಕೈಗೆ ಉಗುರುಬಣ್ಣ ಹಚ್ಚಬಾರದು, ಬಳೆ ತೊಟ್ಟಿರಬಾರದು ಎಂದು ಕೇಂದ್ರ ಸರ್ಕಾರ 2020ರಲ್ಲೇ ಆದೇಶ ಹೊರಡಿಸಿದೆ. ನಳಿನ್ ಕುಮಾರ್ ಕಟೀಲ್ ಅವರೇ, ಆ ಬಳೆಯನ್ನು ತಾವು ಧರಿಸಿಕೊಳ್ಳಲೆಂದು ಮೋದಿಯವರು ಈ ಆದೇಶ ಹೊರಡಿಸಿದ್ದೇ? ಹಿಂದೂ ಆಚರಣೆಗಳನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡರೇ? ಕಟೀಲ್ ಕೈಗೆ ಬಳೆ ತೊಟ್ಟು ಇದನ್ನು ಪ್ರತಿಭಟಿಸಲಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಕಾಲೆಳೆದಿದೆ.