ಹೊಸ ಜಿಲ್ಲೆ ಅಥವಾ ತಾಲೂಕುಗಳನ್ನು ರಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಗಮನ ಸೆಳೆಯುವ ಸೂಚನೆಯಲ್ಲಿ ಮಾತನಾಡಿದ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ್ ಅವರು ತಮ್ಮ ಕ್ಷೇತ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಈ ವೇಳೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಜನಗಣತಿ ಸಂದರ್ಭದಲ್ಲಿ ಯಾವ ರಾಜ್ಯಗಳೂ ಹೊಸ ಕಂದಾಯ ಜಿಲ್ಲೆ ಘೋಷಿಸಬಾರದು ಎಂದು ಕೇಂದ್ರ ಸರ್ಕಾರದ ನಿಯಮವಿದೆ. ಅಲ್ಲದೆ ರಾಜ್ಯ ಸರ್ಕಾರದ ಮುಂದೆಯೂ ಯಾವುದೇ ಹೊಸ ಜಿಲ್ಲೆ ಅಥವಾ ತಾಲೂಕು ರಚನೆಯ ಪ್ರಸ್ತಾವನೆ ಇಲ್ಲ” ಎಂದರು.
ಮುಂದುವರೆದು, “ಒಂದೆರಡು ತಾಲೂಕುಗಳಿಂದ ಜಿಲ್ಲಾ ಕೇಂದ್ರ ರಚನೆಯ ಕೋರಿಕೆ ಇದೆ. ಭವಿಷ್ಯದಲ್ಲಿ ಇಂತಹ ಸಾಧ್ಯತೆ ಎದುರಾದರೆ ಖಂಡಿತ ಇಂಡಿ ತಾಲೂಕನ್ನು ಪರಿಗಣಿಸಲಾಗುವುದು” ಎಂದು ಭರವಸೆ ನೀಡಿದರು.