ಉಭಯ ಸದನಗಳಲ್ಲೂ ಅಂಗೀಕಾರ ಪಡೆದ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ವಿಧೇಯಕ

Date:

Advertisements
  • ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ವಿಧೇಯಕ ಪ್ರಶಂಸಿಸಿದ ಪರಿಷತ್ ಸದಸ್ಯ ಮರಿತಿಬ್ಬೇಗೌಡ
  • ಜಮೀನು ಮಾರಾಟಕ್ಕೆ ಇಲಾಖೆ ಸಚಿವರ ಸಹಿ ಅಗತ್ಯ; ಕಂದಾಯ ಸಚಿವ ಕೃಷ್ಣಭೈರೇಗೌಡ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (ಪಿಟಿಸಿಲ್ ತಿದ್ದುಪಡಿ ಮಸೂದೆ) 2023 ಅನ್ನು ಶುಕ್ರವಾರ ವಿಧಾನ ಪರಿಷತ್ತಿನಲ್ಲಿಯೂ ಮಂಡಿಸಿರುವ ಸಚಿವ ಕೃಷ್ಣಭೈರೇಗೌಡ ಸದನದ ಅಂಗೀಕಾರ ಪಡೆದಿದ್ದಾರೆ. ಈ ವಿಧೇಯಕವನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.

ನಂತರ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, “1978ರಲ್ಲಿ ಈ ಕಾನೂನನ್ನು ಇದೇ ಸದನ ಮಂಜೂರು ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಸರ್ಕಾರದಿಂದ ಮಂಜೂರಾತಿಯಾಗಿರುವ ಜಮೀನುಗಳನ್ನು ಪರಭಾರೆ ಮಾಡಬೇಕಾದರೆ ಸರ್ಕಾರದ ಅನುಮತಿ ತೆಗೆದುಕೊಂಡಿರಬೇಕು. ಒಂದು ವೇಳೆ ಅನುಮತಿಯಿಲ್ಲದೇ ಮಾರಾಟ ಮಾಡಿದ್ದರೆ ಅಂತಹ ಜಮೀನುಗಳನ್ನು ಮೂಲ ಮಂಜೂರುದಾರರಿಗೆ ಮತ್ತೆ ಜಮೀನಿನ ಹಕ್ಕನ್ನು ನೀಡಬೇಕು ಎಂದು ಕಾನೂನು ತಂದಿತ್ತು” ಎಂದು ವಿವರಿಸಿದರು.

“ಅಂದು ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬಡವರಾಗಿದ್ದ ದಲಿತರು ತಿಳಿವಳಿಕೆಯ ಕೊರತೆಯಿಂದ ಅವರ ಜಮೀನುಗಳನ್ನು ಸರ್ಕಾರದ ಅನುಮತಿಯಿಲ್ಲದೇ ಬೇರೆಯವರು ಕೊಂಡುಕೊಳ್ಳುವುದನ್ನು ಕಡಿವಾಣ ಹಾಕಲು ಮುಂದಾಗಿದ್ದರು” ಎಂದರು.

Advertisements

“ಅಂದು ದಲಿತರಿಗೆ ಇದ್ದ ಏಕೈಕ ಆಸ್ತಿ ಸರ್ಕಾರ ಮಂಜೂರು ಮಾಡಿದ್ದ ಜಮೀನನ್ನು ಅವರಿಗೆ ಉಳಿಸಲು ಈ ಮಾದರಿ ಕಾನೂನನ್ನು ರಚನೆ ಮಾಡಿ ಎಲ್ಲ ರಾಜ್ಯಗಳಿಗೆ ಕಳಿಸಿಕೊಟ್ಟಿದ್ದರು. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಮತ್ತು ಕಂದಾಯ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಮಸೂದೆ ಮಂಡಿಸಿ 1978 ರಿಂದ ಕಾನೂನು ಜಾರಿಯಲ್ಲಿದೆ” ಎಂದು ತಿಳಿಸಿದರು.

“ಈ ಕಾನೂನಿನ ಅನ್ವಯ ನಮ್ಮ ಜಮೀನು ವಾಪಸ್ ಕೊಡಬೇಕೆಂದು ಪರಿಶಿಷ್ಟ ಜಾತಿಯ ಒಬ್ಬರು ದಾವೆ ಹೂಡಿದ್ದರು. ಆದರೆ, ಎಸಿಯವರು ನಿಮ್ಮ ಜಮೀನು ಮಾರಿ ಬಹಳ ವರ್ಷಗಳಾಗಿವೆ ಹಾಗಾಗಿ ಈಗ ಕೇಳಲು ಬರುವುದಿಲ್ಲ ಎಂದು ತೀರ್ಪು ನೀಡಿದ್ದರು. ಕೊನೆಗೆ ಅದೇ ಕೇಸು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆಗ ಸುಪ್ರೀಂ ಕೋರ್ಟ್ ಸೆಕ್ಷನ್ 5 ರಲ್ಲಿ ಕಾಲಮಿತಿ ನಿಗದಿ ಮಾಡಿಲ್ಲ ಎನ್ನುವ ನ್ಯೂನತೆಯನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದ್ದ ಹಕ್ಕನ್ನು ಕೊಡಲಾಗಿಲ್ಲ” ಎಂದು ಸಚಿವರು ವಿವರಿಸಿದರು. 

“ಮೂಲ ಕಾನೂನಿನಲ್ಲಿ ಯಾವಾಗಲೇ ಭೂಮಿ ಮಂಜೂರಾಗಿದ್ದರೂ, ಪರಭಾರೆಯಾಗಿದ್ದರೂ ಯಾವತ್ತು ಬೇಕಾದರೂ ಪ್ರಶ್ನಿಸಿ ಪರಭಾರೆ ಮಾಡಿಕೊಳ್ಳಬೇಕು ಎಂದಿದೆ. ಆದರೆ, ಕಾನೂನಿನಲ್ಲಿ ಕಾಲಮಿತಿಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುಪ್ರೀಂ ಹೇಳಿದೆ. ಹಾಗಾಗಿ ಉಪವಿಭಾಗಾಧಿಕಾರಿಗಳು ಸುಪ್ರೀಂ ಕೋರ್ಟ್‌ನ ಈ ಆದೇಶ ಇಟ್ಟುಕೊಂಡು ಕಾಲಮಿತಿ ಮೀರಿದೆ ಎಂಬ ನೆಪ ಹೇಳಿ ಅರ್ಜಿಗಳನ್ನು ತಳ್ಳಿಹಾಕುವುದು ನಡೆಯುತ್ತಿದೆ. 2017 ರಿಂದ ದಲಿತ ಸಮುದಾಯಗಳು ಈ ಕಾನೂನಿನ ನ್ಯೂನತೆ ಸರಿಪಡಿಸಲು ತಿದ್ದುಪಡಿ ತರಲು ಹೋರಾಟ, ಧರಣಿ ಮಾಡುತ್ತಾ ಬಂದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿದ್ದಾರೆ” ಎಂದರು.

“ನಮ್ಮ ಪಕ್ಷ ವಿರೋಧ ಪಕ್ಷದಲ್ಲಿದ್ದಾಗಲೇ, ‘ನಮ್ಮ ಸರ್ಕಾರ ಬಂದ ಕೂಡಲೇ ನ್ಯೂನತೆ ಸರಿಪಡಿಸಿ, 1978ರ ಮೂಲ ಕಾನೂನಿಗೆ ಜೀವ ತುಂಬುತ್ತೇವೆ’ ಎಂದು ಹೇಳಿದ್ದೆವು. ನಮ್ಮ ನಾಯಕ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ಅವರು ಚಿತ್ರದುರ್ಗದ ಸಮಾವೇಶದಲ್ಲಿ ದಲಿತರಿಗೆ ಈ ಮಾತನ್ನು ಕೊಟ್ಟಿದ್ದರು. ದಲಿತರು ಬಿಜೆಪಿಗೂ ಮನವಿ ಮಾಡಿದ್ದರೂ, ಬಿಜೆಪಿ 4 ವರ್ಷ ಅಧಿಕಾರದಲ್ಲಿದ್ದೂ ಸಹ ಮಾಡಿಲ್ಲ. ಫೆಬ್ರವರಿ ತಿಂಗಳಲ್ಲಿ 162ರಲ್ಲಿ 160ನೇ ಪ್ಯಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನನ್ನು ಸಂರಕ್ಷಿಸಲು ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಪೊಳ್ಳು ಭರವಸೆ ನೀಡಿದ್ದರು. ಆದರೆ ನ್ಯಾಯ ಕೊಡದೇ ಅನ್ಯಾಯ ಮುಂದುವರೆಸಿದ್ದರು” ಎಂದು ಆರೋಪಿಸಿದರು.

“ನಮ್ಮ ಸರ್ಕಾರ ಮಾತು ಕೊಟ್ಟಂತೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಮೊದಲನೇ ಅಧಿವೇಶನದಲ್ಲಿಯೇ ನಾವು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಂಡಿಸುತ್ತಿದ್ದೇವೆ. ಸೆಕ್ಷನ್ 5(1)ಸಿ ನಲ್ಲಿ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಈ ಅಧಿನಿಯಮದ ಉಪಬಂಧಗಳನ್ನು ರದ್ದುಪಡಿಸಲು ಯಾವುದೇ ಕಾಲಮಿತಿ ಇರತಕ್ಕದ್ದಲ್ಲ ಎಂಬ ತಿದ್ದುಪಡಿ ಸೇರಿಸಿದ್ದೇವೆ” ಎಂದರು.

“ದಲಿತರ ಜಮೀನು ಉಳಿಯಬೇಕೆಂಬ ಸದುದ್ದೇಶದಿಂದ ಇದನ್ನು ಮಾಡಿದ್ದೇವೆ. ಇದು ಹೊಸ ಕಾನೂನು ಅಲ್ಲ. ಕಾಲಮಿತಿ ಏನು ಹೇಳಿಲ್ಲ ಎಂದು ಸುಪ್ರೀಂ ಹೇಳಿದೆ. ಹಾಗಾಗಿ ಮೂಲ ಕಾನೂನಿನಲ್ಲಿ ನಾವು ಕಾಲಮಿತಿ ಇಲ್ಲ ಎಂದು ತಿದ್ದುಪಡಿ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ಪ್ರಕರಣಗಳು ಯಾವ ನ್ಯಾಯಾಲಯದಲ್ಲಿ ಇರಲಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಹೈಕೋರ್ಟ್, ಸುಪ್ರೀಂ ಕೋರ್ಟ್‌ ಎಲ್ಲೇ ಇರಲಿ, ಪೆಂಡಿಂಗ್ ಇದ್ದರೂ ಸಹ ಅವುಗಳಿಗೆ ಈ ಕಾಯ್ದೆ ಜಾರಿಯಾಗುತ್ತದೆ. ಯಾವುದಾದರೂ ಪ್ರಕರಣಗಳು ನ್ಯಾಯಸಮ್ಮತವಾಗಿ ವಿಲೇವಾರಿ ಆಗಿಹೋಗಿದ್ದರೆ ಅವು ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಈ ಕಾನೂನು ಜಾರಿಗೆ ಬಂದ ನಂತರ ಪೆಂಡಿಂಗ್ ಇರುವ ಕೇಸ್‌ಗಳಿಗೂ ಅನ್ವಯವಾಗುತ್ತದೆ” ಎಂದು ಮಾಹಿತಿ ನೀಡಿದರು.

ನ್ಯಾಯಾಲಯದಲ್ಲಿರುವ ಪ್ರಕರಣಗಳೆಷ್ಟು?

ಪಿಟಿಸಿಎಲ್ ಕಾಯ್ದೆ ಅನ್ವಯ ನ್ಯಾಯಾಲಯದಲ್ಲಿ ಎಷ್ಟು ಪ್ರಕರಣಗಳಿವೆ ಎಂದೂ ಸದನಕ್ಕೆ ಮಾಹಿತಿ ನೀಡಿದ ಸಚಿವ ಕೃಷ್ಣಭೈರೇಗೌಡ, “2017ರಿಂದ ಇತ್ತೀಚೆಗೆ 1,558 ಪ್ರಕರಣಗಳು ಖರೀದಿದಾರರ ಪರವಾಗಿ ಇತ್ಯರ್ಥವಾಗಿವೆ. 1,003 ಪ್ರಕರಣಗಳು ಪರಿಶಿಷ್ಟರ ಪರವಾಗಿ ಇತ್ಯರ್ಥವಾಗಿವೆ. ಗಮನಿಸಿಬೇಕಾದ ವಿಚಾರವೆಂದರೆ ಕಾನೂನಿನಲ್ಲಿ ಜಿಲ್ಲಾಧಿಕಾರಿಗೆ ಅಪೀಲ್ ಹೋಗುವ ಅಧಿಕಾರ ಇದೆ. ಹಾಗಾಗಿ ಜಿಲ್ಲಾಧಿಕಾರಿ ಮುಂದೆ 2,303 ಅಪೀಲ್‌ಗಳು ಹೋಗಿವೆ. ಹೈಕೋರ್ಟ್‌ನಲ್ಲಿ 719 ಅಪೀಲ್‌ಗಳು ಇವೆ. ಉಪವಿಭಾಗಾಧಿಕಾರಿ ಕೋರ್ಟ್‌ನಲ್ಲಿ ಮೂಲ ಮಂಜೂರುದಾರರ ವಿರುದ್ಧ ಆಗಿದ್ದರೂ ಅವರು ಮೇಲ್ಮನವಿ ಹೋಗಿದ್ದಾರೆ. ಹಾಗಾಗಿ ಆ ಪ್ರಕರಣಗಳಿಗೂ ಈ ತಿದ್ದುಪಡಿ ಅನ್ವಯಿಸುವುದರಿಂದ ಶೇ. 95 ರಷ್ಟು ಪ್ರಕರಣಗಳಿಗೆ ನ್ಯಾಯ ಸಿಗುತ್ತದೆ” ಎಂದು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಮೋದಿ ಉಪನಾಮ ಪ್ರಕರಣ : ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ತಡೆ ಅರ್ಜಿ ಮುಂದೂಡಿದ ಸುಪ್ರೀಂ

ವಿಧೇಯಕಕ್ಕೆ ಮರಿತಿಬ್ಬೇಗೌಡ ಪ್ರಶಂಸೆ

ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ವಿಧೇಯಕ 2023 ಅನ್ನು ಪ್ರಶಂಸಿಸಿದ್ದಾರೆ. ಸಚಿವ ಕೃಷ್ಣಭೈರೇಗೌಡ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ವಿವರಣೆ ನೀಡಿದ ನಂತರ ಮಾತನಾಡಿದ ಮರಿತಿಬ್ಬೇಗೌಡ ಅವರು, “ತುಳಿತಕ್ಕೊಳಪಟ್ಟ ಸಮುದಾಯದ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವ ಸಲುವಾಗಿ ಈ ನಿಯಮವನ್ನು ಸೇರಿಸಲಾಗಿತ್ತು. ಆದರೆ, ಈ ಹಿಂದೆ ಹಲವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬದಲಿ ಭೂಮಿ ಹೊಂದಿರುವುದಾಗಿ ತಿಳಿಸಿ ಸರ್ಕಾರ ನೀಡಿದ್ದ ಭೂಮಿಯನ್ನು ಮಾರಾಟ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಇಂತಹ ಅಕ್ರಮಗಳ ಮೇಲೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, “ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ವಿಧೇಯಕದ ಅನ್ವಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಸರ್ಕಾರ ಮಂಜೂರು ಮಾಡಿದ ಜಮೀನನ್ನು 15 ವರ್ಷಗಳ ನಂತರ ಸರ್ಕಾರದ ಅನುಮತಿ ಪಡೆದು ಮಾರಾಟ ಮಾಡಿಕೊಳ್ಳಬಹುದು. ಆದರೆ, ಇಂತಹ ಜಮೀನುಗಳ ಮಾರಾಟಕ್ಕೆ ಇಲಾಖೆ ಸಚಿವರ ಸಹಿ ಅಗತ್ಯ. ಈ ಮಾರಾಟದ ಪ್ರಕ್ರಿಯೆ ನನ್ನವರೆಗೂ ಅನುಮತಿಗಾಗಿ ಕೋರುತ್ತದೆ. ಹೀಗಾಗಿ ಇಲಾಖೆ ನಿಯಮಗಳ ಪಾಲನೆಯಲ್ಲಿ ಕಟ್ಟುನಿಟ್ಟಾದ ಕ್ರಮ ಜರುಗಿಸಿ ಮೋಸದ ಭೂ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು” ಎಂದು ಭರವಸೆ ನೀಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X