- ‘ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಕಾಂಗ್ರೆಸ್ ನಾಯಕರು’
- ‘ರಾಜ್ಯ ಸರ್ಕಾರ ನ್ಯಾಯವಾಗಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು’
ಅನ್ನಭಾಗ್ಯ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ. ಕೇಂದ್ರದ ಮೇಲೆ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ. ಎಫ್‌ಸಿಐಗೆ ಪತ್ರ ಬರೆಯುವ ಮೊದಲೇ ಮಾರಾಟ ಯೋಜನೆಯ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸಂಸದ ಪಿ ಸಿ ಮೋಹನ್ ಜೊತೆಯಾಗಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಅಕ್ಕಿ, ಗೋಧಿಗೆ ಸಂಬಂಧಿಸಿದಂತೆ ಅಂತರ್ ಸಚಿವಾಲಯ ಸಮಿತಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಮಾರದಂತೆ ಸೂಚನೆ ಮಾಡಿದೆ. ಅಕ್ಕಿ, ಗೋಧಿ ಕೊರತೆ ಆಗದಂತೆ ಮೇ ತಿಂಗಳಿನಲ್ಲೇ ಕೇಂದ್ರ ನಿಯಮಗಳಲ್ಲಿ ಈ ಬದಲಾವಣೆ ತಂದಿದೆ” ಎಂದರು.
“ಅಕ್ಕಿ ಕೊಡಲಾಗದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಣಿಯಲಾಗದವನು ನೆಲಡೊಂಕು ಅಂದಂತಾಗಿದೆ ರಾಜ್ಯ ಸರ್ಕಾರದ ಸ್ಥಿತಿ. ಈ ಮೂಲಕ ಕಾಂಗ್ರೆಸ್ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ. ನಿತ್ಯ ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಕಾಂಗ್ರೆಸ್ ನಾಯಕರು” ಎಂದು ವಾಗ್ದಾಳಿ ನಡೆಸಿದರು.
“ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರ ತಲಾ 5 ಕೆಜಿ ಅಕ್ಕಿ ಕೊಡುತ್ತಿದೆ. ಹಾಗಾದರೆ ರಾಜ್ಯ ಸರ್ಕಾರ ನ್ಯಾಯವಾಗಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು” ಎಂದು ಒತ್ತಾಯಿಸಿದರು.