ಆರ್‌ಸಿಬಿ ವಿಜಯೋತ್ಸವದ ಸನ್ನಿವೇಶದಲ್ಲಿ ಸರ್ಕಾರದ ಹಲವಾರು ಉದ್ಧಟತನದ ತೀರ್ಮಾನ ಮತ್ತು ಪೊಲೀಸ್ ಅಧಿಕಾರಿಗಳ ಸಲಹೆ ಧಿಕ್ಕರಿಸಿದ್ದರಿಂದ ಅಮಾಯಕ ಜನಗಳ ಬಲಿಯಾಗಿದೆ. ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಎಫ್‌ಐಆರ್ ಕಾಪಿ ನೋಡಿದರೆ ಸರ್ಕಾರದ ಹಣೆಬರಹ ಗೊತ್ತಾಗುತ್ತದೆ. ಒಂದೇ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆಗೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದರೂ ಸರ್ಕಾರ ಅದನ್ನು ತಿರಸ್ಕರಿಸಿದೆ. ವಿಧಾನಸೌಧ ಮುಂಭಾಗ ಮತ್ತು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದು ಯಾರು? ಫೈನಲ್ ಪಂದ್ಯದ ರಾತ್ರಿ ಸಾವಿರಾರು ಪೊಲೀಸರು ರಾತ್ರಿ ಕೆಲಸ ಮಾಡಿದ್ದರಿಂದ ಒಂದೇ ದಿನ ಎರಡು ಕಾರ್ಯಕ್ರಮ ಆಯೋಜನೆಗೆ ಪೊಲೀಸರು ಅನುಮತಿಸಿಲ್ಲ. ಆದರೂ ಕಾರ್ಯಕ್ರಮ ನಡೆದಿದೆ. ಇದಕ್ಕೆ ಸೂಚನೆ ಕೊಟ್ಟವರನ್ನು ಸಚಿವ ಸಂಪುಟದಿಂದ ಹೊರಹಾಕಬೇಕು” ಎಂದು ಪರೋಕ್ಷವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ವಿಧಾನಸೌಧದ ಮುಂಭಾಗದಲ್ಲೇ ಕಾರ್ಯಕ್ರಮ ನಡೆಯಬೇಕು ಎಂದು ಹಠ ಹಿಡಿದವರು ಯಾರು? ನನಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರೇ ವಿಧಾನಸೌಧದ ಮುಂದೆ ಕಾರ್ಯಕ್ರಮ ಆಗಬೇಕು ಎಂದು ಸೂಚಿಸಿದ್ದಾರೆ. ಆರ್‌ಸಿಬಿ ತಂಡವನ್ನು ಏರ್‌ಪೋರ್ಟ್‌ನಿಂದ ಕರೆದುಕೊಂಡು ಬಂದಿದ್ದು ಡಿ ಕೆ ಶಿವಕುಮಾರ್. ಆರ್‌ಸಿಬಿ ತಂಡದೊಂದಿಗೆ ತಾವು ಮತ್ತು ತಮ್ಮ ಕುಟುಂಬ ಸದಸ್ಯರು ಫೋಟೋ ತೆಗೆಸಿಕೊಳ್ಳುವ ಹುಚ್ಚಿಗೆ ಈಗ ಅಮಾಯಕ ಜನರ ಬಲಿಯಾಗಿದೆ” ಎಂದು ದೂರಿದರು.
“ಡಿ ಕೆ ಶಿವಕುಮಾರ್ ಕಣ್ಣೀರು ನೋಡಿದ್ರೆ ಅದೊಂದು ಡ್ರಾಮಾ ಅಂತ ಜನರಿಗೇ ಗೊತ್ತಾಗುತ್ತದೆ. ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಈಗ ಪೊಲೀಸರನ್ನು ಬಲಿಕೊಟ್ಟಿದ್ದಾರೆ. ನನ್ನ ಪ್ರಕಾರ ಇದೆಲ್ಲ ಯೋಜಿತ ಪ್ಲ್ಯಾನ್. ಮುಂದೆ ಇವರಿಗೆಲ್ಲ ಉನ್ನತ ಹುದ್ದೆ ಸಿಗಬಹುದು. ಇದು ಯಾರಿಗಾದ್ರೂ ಗೊತ್ತಾಗುವ ಸಂಗತಿ” ಎಂದರು.
“ಡಿಸಿಎಂ, ತಾನೇ ಗೆದ್ದು ತಂದಿದ್ದೇನೆ ಎನ್ನುವಂತೆ ಕಪ್ಗೆ ಮುತ್ತಿಟ್ಟರು. ಈ ಸರ್ಕಾರ ಎರಡು ಕಡೆ ಯಾವ ಆಧಾರದಲ್ಲಿ ಕಾರ್ಯಕ್ರಮ ಮಾಡಿದೆ? ಅಧಿಕಾರಿಗಳು ಸಲಹೆ ಕೊಟ್ಟರು ಬಡವರ ಜೀವನದಲ್ಲಿ ಚೆಲ್ಲಾಟ ಆಡಿದರು. ಇಷ್ಟು ಸಾವು- ನೋವುಗಳಾಗ್ತಿದ್ರೂ, ಅತ್ತ ಸಿಎಂ ಮೊಮ್ಮಗನನ್ನು ಕರೆದುಕೊಂಡು ಜನಾರ್ದನ್ ಹೋಟೆಲ್ಗೆ ದೋಸೆ ತಿನ್ನೋಕೆ ಹೋಗಿದ್ದರು” ಎಂದು ಕಿಡಿಕಾರಿದರು.
“ಡಿ ಕೆ ಶಿವಕುಮಾರ್ ಕ್ರೆಡಿಟ್ ತೆಗೆದುಕೊಳ್ಳಲು ಈ ರೀತಿ ಮಾಡಿದ್ದಾರೆ. ತಮ್ಮ ಪಟಾಲಂ ಕರೆದುಕೊಂಡು ನೇರವಾಗಿ ಹೆಚ್ಎಎಲ್‌ಗೆ ಹೋದ್ರು. ಇವರ ಕೈಯಲ್ಲಿ ಕನ್ನಡ ಬಾವುಟಗಳು. ಆದ್ರೆ ಕತ್ತಲ್ಲಿ ಯಾವುದೋ ಸ್ಟೈಲ್ ಟವಲ್ ಅಂತೆ. ಅಲ್ಲಿ ಸ್ಟೈಲ್ ಮಾಡಿಕೊಂಡು ಬ್ರಾಂಡ್ ಬೆಂಗಳೂರು ಅಂತಾ ತೋರಿಸೋಕೆ ಕಾರಿನಲ್ಲೇ ಆರ್‌ಸಿಬಿ ಬಾವುಟ ಹಿಡಿದು ಪೋಸ್ ಕೊಟ್ಟಿದ್ದಾರೆ” ಎಂದು ವ್ಯಂಗ್ಯ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
ಆರ್ ಅಶೋಕ್ ಹೇಳಿದ್ದೇನು?
ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ಹನ್ನೊಂದು ಜನರು ಸಾವನ್ನಪ್ಪಿದ್ದು, ಸರ್ಕಾರವೇ ಅಪರಾಧಿ ಸ್ಥಾನದಲ್ಲಿದೆ. ಹೀಗಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು.
“ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಹೊಸಪೇಟೆಯಲ್ಲಿ ‘ಸಮರ್ಪಣಾ ಸಮಾವೇಶ’ ನಡೆಸಿತು, ಇದಕ್ಕಾಗಿ ಮೂರು ದಿನ ಸಿದ್ಧತೆ ಮಾಡಿಕೊಂಡಿತು ಸರ್ಡ್ರಿಕಾರ. ಆರ್‌ಸಿಬಿ 18 ವರ್ಷದ ಮೇಲೆ ಕಪ್ ಗೆದ್ದಿದೆ. ಕೋಟಿ ಕೋಟಿ ಜನರು ಅಭಿಮಾನಿಗಳಿದ್ದಾರೆ. ಹೀಗಿರುವಾಗ ಕ್ರೀಡಾಭಿಮಾನಿಗಳ ಸಮಾವೇಶಕ್ಕೆ ಸರ್ಕಾರ ಒಂದಾದರೂ ಪೂರ್ವಸಿದ್ಧತಾ ಸಭೆ ಮಾಡಿದ ಉದಾರಹಣೆ ಇದೆಯಾ? ಎಲ್ಲವೂ ತರಾರುರಿಯಲ್ಲಿ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ. ಸರ್ಕಾರವೇ ಇದರ ನೇರ ಹೊಣೆ ಹೊರಬೇಕು” ಎಂದು ಆಗ್ರಹಿಸಿದರು.
“ಆರ್‌ಸಿಬಿ ವಿಜಯೋತ್ಸವವನ್ನು ಒಂದೇ ಸ್ಥಳದಲ್ಲಿ ಮಾಡಿ ಎಂದು ಪೊಲೀಸ್ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ಕೊಟ್ಟಿದೆ. ಆದರೆ, ಡಿ ಕೆ ಶಿವಕುಮಾರ್ ಅವರು ಪೊಲೀಸರ ಸಲಹೆ ಸ್ವೀಕರಿಸದೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ವಿಜಯೋತ್ಸವ ಆಚರಿಸಿ ಎಂದು ಕರೆಕೊಟ್ಟಿದ್ದಾರೆ. ವಿಧಾನಸೌಧ ಕಾರ್ಯಕ್ರಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಸರ್ಕಾರ, ಹನ್ನೊಂದು ಯುವಕರ ಸಾವಿನೊಂದಿಗೆ ಆಟವಾಡಿದೆ” ಎಂದು ಟೀಕಿಸಿದರು.
“ಈಗ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಕಮಿಷನರ್ ಅವರನ್ನು ಅಮಾನತು ಮಾಡಿದೆ. ಇದು ಇತಿಹಾದಲ್ಲಿ ಮೊದಲು. ಕೋತಿ ತಾನು ಮೊಸರು ತಿಂದು, ಮೇಕೆಗೆ ಒರೆಸಿದಂತೆ ಸರ್ಕಾರದ ನಡೆ ಇದೆ. ಪೊಲೀಸರು ವಿಜಯೋತ್ಸವ ಆಚರಿಸಲು ಕರೆ ಕೊಟ್ಟಿದ್ದರಾ? ಜನರಿಗೆ ಕರೆ ಕೊಟ್ಟಿದ್ದು ಇದೇ ಸಿದ್ದರಾಮಯ್ಯ ಅವರು. ಈಗಲಾದರೂ ತಪ್ಪನ್ನು ಸರ್ಕಾರ ಹೊತ್ತಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಸಿಎಂ, ಡಿಸಿಎಂ ರಾಜೀನಾಮೆ ನೀಡಲಿ: ವಿಜಯೇಂದ್ರ
ಆರ್‌ಸಿಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
“ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿ ತಪ್ಪಿಸಿಕೊಳ್ಳುವ ಷಡ್ಯಂತ್ರ ಮುಖ್ಯಮಂತ್ರಿಗಳದು. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ವೈಫಲ್ಯಕ್ಕಾಗಿ ಬೇಹುಗಾರಿಕಾ ದಳದ ಅಧಿಕಾರಿಗಳನ್ನು ಯಾಕೆ ಅಮಾನತು ಮಾಡಿಲ್ಲ? ಬೇಹುಗಾರಿಕಾ ದಳ ನೇರ ಸಿಎಂ ಕೆಳಗಡೆ ಬರುತ್ತದೆ; ಅವರನ್ನು ಅಮಾನತು ಮಾಡಿದರೆ ಇದು ಮುಖ್ಯಮಂತ್ರಿಗಳ ಬುಡಕ್ಕೆ ಬರಲಿದೆ. ಆದ್ದರಿಂದ ಅವರನ್ನು ಅಮಾನತು ಮಾಡಿಲ್ಲ”ಎಂದರು.
“ನಾವು 30-40 ಸಾವಿರ ಜನರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. 2ರಿಂದ 3 ಲಕ್ಷ ಜನರು ಬಂದಿದ್ದಾರೆ. ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವ ಮೂಲಕ ಬೇಹುಗಾರಿಕಾ ದಳದ ವೈಫಲ್ಯವನ್ನು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.