- ರಾಜ್ಯದ 224 ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ
- ರಾಜ್ಯದಲ್ಲಿ ಒಟ್ಟು 5,33,77,162 ಮತದಾರರು ಇದ್ದಾರೆ
2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದು, ಸದ್ಯ ಸಿದ್ಧವಾಗಿರುವ ‘ಕರಡು ಮತದಾರರ ಪಟ್ಟಿ’ಯನ್ನು ಶುಕ್ರವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಚುನಾವಣೆ ಆಯೋಗದ ನಿರ್ದೇಶನ ಮೇರೆಗೆ 01.01. 2024ರಂತೆ ಮತದಾರರ ಪಟ್ಟಿ ಪರಿಷ್ಕರಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಒಟ್ಟು 5,33,77,162 ಮತದಾರರು ಇದ್ದಾರೆ. ಆ ಪೈಕಿ ಪುರುಷ ಮತದಾರರು 2,68,02,838 ಮತ್ತು ಮಹಿಳಾ ಮತದಾರರು 2,65,69,428 ಹಾಗೂ ಇತರೆ 4896 ಮತದಾರರಿದ್ದಾರೆ. ಈ ಮೂಲಕ ಕಳೆದ ವರ್ಷ 2023ಕ್ಕಿಂತಲೂ (5,30,85,566) ಸುಮಾರು 3 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆ ಆಗಿದ್ದಾರೆ.
ಈಗ ಬಿಡುಗಡೆಗೊಂಡಿರುವ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಇಂದು ಅಕ್ಟೋಬರ್ 27ರಿಂದ ಡಿಸೆಂಬರ್ 09ರವರೆಗೆ ಅವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಕೆಲವು ದಿನಗಳ ಕಾಲ ವಿಶೇಷ ಅಭಿಯಾನಗಳು ಆಯೋಗದಿಂದ ಜರುಗಲಿವೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಲ್ಲಿಕೆ ಆಗುವ ಆಕ್ಷೇಪಣೆಗಳನ್ನು ಡಿಸೆಂಬರ್ 26ರಂದು ವಿಲೇವಾರಿ ಮಾಡಿ, 2024ರ ಜನವರಿ 05ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಐಸ್‌ಲ್ಯಾಂಡ್ ಮಹಿಳೆಯರ ಮುಷ್ಕರದಲ್ಲಿ ಅಡಗಿರುವ ಪಾಠಗಳು
ಮತದಾನ ಕೇಂದ್ರಗಳ ಸಂಖ್ಯೆ ಹೆಚ್ಚಳ
ಈ ವರ್ಷ ಮತದಾನ ಕೇಂದ್ರಗಳ ಸಂಖ್ಯೆಯನ್ನು (845) ಹೆಚ್ಚಿಸಲಾಗಿದ್ದು, ಒಟ್ಟು ಸಂಖ್ಯೆ 58,834ಕ್ಕೆ ಏರಿಕೆ ಆಗಿದೆ. ಕಳೆದ 2023ರಲ್ಲಿ ಈ ಮತದಾನ ಕೇಂದ್ರಗಳ ಸಂಖ್ಯೆ 58,282 ರಷ್ಟಿದ್ದವು. ಬಿಡುಗಡೆ ಆಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು, ವಿಳಾಸ ಇನ್ನಿತರ ಮಾಹಿತಿಗಳು ಸರಿಯಾಗಿದೆಯೇ, ಹೆಸರುಗಳು ಬಿಟ್ಟು ಹೋಗಿವೆಯೇ ಎಂಬುದನ್ನು ಅಧಿಕೃತ ಜಾಲತಾಣ http://eco.karnataka.gov.in/en ಗೆ ತೆರಳಿ ಪರಿಶೀಲಿಸಿಕೊಂಡು ತಪ್ಪಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.
2023ರ ಅಂತಿಮ ಮತದಾರರ ಪಟ್ಟಿ ಪ್ರಕಾರ ಕರ್ನಾಟಕದಲ್ಲಿ ಯುವ ಮತದಾರರು (18-19 ವರ್ಷಗಳು) 7,07,488, ತೃತೀಯ ಲಿಂಗಿಗಳು 4,645, ಸಾಗರೋತ್ತರ ಮತದಾರರು 3,010, ವಿಕಲಚೇತನ ಮತದಾರರು (ಮತದಾರರ ಪಟ್ಟಿ ಡೇಟಾಬೇಸ್‌ನಲ್ಲಿ ಗುರುತಿಸಲಾಗಿದೆ) 5,13,296 ಮತ್ತು 80 ವರ್ಷ ಮೇಲ್ಪಟ್ಟ ಮತದಾರರು 12,19,236, ಕರಡು ಪಟ್ಟಿ 2024 ರ ಪ್ರಕಾರ, ಯುವ ಮತದಾರರು (18-19 ವರ್ಷಗಳು) 13,45,707, ತೃತೀಯ ಲಿಂಗಿ 4,896, ಸಾಗರೋತ್ತರ ಮತದಾರರು 3,055, ವಿಕಲಚೇತನ ಮತದಾರರು (ಮತದಾರರ ಪಟ್ಟಿ ಡೇಟಾಬೇಸ್‌ನಲ್ಲಿ ಗುರುತಿಸಲಾಗಿದೆ) 5,66,777, 80 ವರ್ಷ ಮೇಲ್ಪಟ್ಟ ಮತದಾರರು 11,76,093 ಇದ್ದರು ಎಂದು ಆಯೋಗ ಮಾಹಿತಿ ನೀಡಿದೆ.
ಚುನಾವಣೆ ಆಯೋಗ ಕಳೆದ ವರ್ಷ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಈವರೆಗೆ ಒಟ್ಟು 18,88,243 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರದಲ್ಲಿ 16,31,547 ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಉಳಿದಂತೆ 1,71,964 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ. ಒಟ್ಟು 224 ಕ್ಷೇತ್ರಗಳ ಮತದಾರರ ಪಟ್ಟಿ ಪೈಕಿ ಬೆಂಗಳೂರು ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು (7,06,207) ಮತದಾರರನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರವು ಅತೀ ಕಡಿಮೆ (1,66,907) ಮತದಾರರನ್ನು ಹೊಂದಿದ. ಶೇಕಡಾ 100 ರಷ್ಟು ಭಾವಚಿತ್ರ ಹಾಗೂ ಮತದಾರರ ಗುರುತಿನ ಚೀಟಿಯ ಡೌನ್‌ಲೋಡ್ ಅವಕಾಶ ಕಲ್ಪಿಸಲಾಗಿದೆ.