ಕಾಂಗ್ರೆಸ್‌‌ಗೆ ಹೊಸ ತಿರುವು ನೀಡಬಲ್ಲ 2023ರ ತೆಲಂಗಾಣ ಚುನಾವಣೆಯ ಕಥೆ; ತಂಗಾಳಿಯೋ ಚಂಡಮಾರುತವೋ?

Date:

Advertisements

ತೆಲಂಗಾಣದಲ್ಲಿ ಕಾಂಗ್ರೆಸ್ ಪುಟಿದೇಳುತ್ತಿರುವುದಕ್ಕೆ ಮತ್ತು ಬಿಆರ್‌ಎಸ್‌ ಕುಸಿತ ಕಾಣುತ್ತಿರುವುದಕ್ಕೆ ಈ ಆರು ಅಂಶಗಳು ಮುಖ್ಯವಾಗಿ ತೋರುತ್ತಿವೆ.

ತೆಲಂಗಾಣದಲ್ಲಿ ನಡೆದಿರುವ ರಾಜಕೀಯ ತಿರುವು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಎದ್ದು ಕಾಣುತ್ತದೆ. ‘ರಾಷ್ಟ್ರೀಯ’ ಮಾಧ್ಯಮಗಳು ತಮ್ಮ ಹೆಚ್ಚಿನ ಗಮನವನ್ನು ಮೂರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಇರುವ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯ ಮೇಲೆ ಹರಿಸಿದ್ದರೂ, ದಕ್ಷಿಣದ ರಾಜ್ಯದಲ್ಲಿ ಬಹುಕೋನೀಯ ಸ್ಪರ್ಧೆಯಲ್ಲಿ ಸ್ಪಷ್ಟ ತೀರ್ಪು ಬರುವ ಸಾಧ್ಯತೆ ಇದೆ. ಇದು ರಾಷ್ಟ್ರ ರಾಜಕಾರಣದ ಮೇಲೂ ಹೆಚ್ಚಿನ ಪರಿಣಾಮ ಬೀರಲಿದೆ.

ಸುಮಾರು ಎರಡು ವರ್ಷಗಳ ಹಿಂದಿನವರೆಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಸ್ಥಿತಿ ಹೀನಾಯವಾಗಿತ್ತು. 2018ರಲ್ಲಿ ಕೇವಲ ಶೇ. 28 ಮತ ಹಂಚಿಕೆ ಮತ್ತು 119 ಸದಸ್ಯರ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಪಡೆದು ಹೀನಾಯ ಸೋಲನ್ನು ಕಂಡಿತ್ತು. ನಂತರ 2019ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿದ ಈ ಪಕ್ಷ, ಆಂಧ್ರಪ್ರದೇಶದಲ್ಲಾದಂತೆ ಮತ್ತದೇ ಪವಾಡಕ್ಕಾಗಿ ಎದುರು ನೋಡುತ್ತಿದೆ. ಇಂತಹ ಹೀನಾಯ ಸೋಲಿನ ನಂತರ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಜೀವ ಪಡೆದಿರುವುದು ತೀರ ಅಪರೂಪ ಎಂಬುದನ್ನು ಚುನಾವಣಾ ಇತಿಹಾಸ ದೃಢಪಡಿಸಿದೆ. 2019ರ ಲೋಕಸಭಾ ಚುನಾವಣೆ ಮತ್ತು 2020ರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಚುನಾವಣೆಗಳಲ್ಲಿ ಅಭೂತಪೂರ್ವ ಫಲಿತಾಂಶಗಳನ್ನು ನೀಡಿದ ಬಿಜೆಪಿ ರಾಜ್ಯದಲ್ಲಿ ತನ್ನ ಪ್ರಭಾವವನ್ನು ಅಮೂಲಾಗ್ರವಾಗಿ ಹೆಚ್ಚಿಸಿಕೊಂಡದ್ದು ಕಣ್ಣಿಗೆ ಕಾಣುವಂತಿದೆ. ಇದೇ ರೀತಿಯ ಫಲಿತಾಂಶವನ್ನು ಬಿಜೆಪಿ ಪಡೆಯದೇ ಇದ್ದರೆ, ತೆಲಂಗಾಣವನ್ನು ಮತ್ತೊಂದು ಪಶ್ಚಿಮ ಬಂಗಾಳವನ್ನಾಗಿ ಮಾಡಲು ಗಂಭೀರ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ.

Advertisements

ಸದ್ದಿಲ್ಲದಂತೆ ಬದಲಾವಣೆಗಳು ಘಟಿಸುತ್ತಿವೆ. ಮಲ್ಕಾಜ್‌ಗಿರಿಯ ಸಂಸದ ಅನುಮುಲಾ ರೇವಂತ್ ರೆಡ್ಡಿ ಅವರನ್ನು ಜೂನ್ 2021ರಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2018ರಲ್ಲಿ ತೆಲುಗು ದೇಶಂ ಪಕ್ಷಯನ್ನು (ಟಿಡಿಪಿ) ತೊರೆದ ಈ ಫಯರ್‌ಬ್ರಾಂಡ್ ಪ್ರಚಾರಕ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಭಾರತ್ ರಾಷ್ಟ್ರ ಸಮಿತಿ) ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ವಿರುದ್ಧ ತೀವ್ರ ವಾಗ್ದಾಳಿಗಳನ್ನು ನಡೆಸಿ ಹೆಸರಾಗಿದ್ದರು. ಹೈಕಮಾಂಡ್‌ನಿಂದ ಬಲವಾದ ಬೆಂಬಲ ಸಿಕ್ಕಿದ್ದು ಆರಂಭದಲ್ಲಿ ಇದ್ದ ಆಂತರಿಕ ಬಿಕ್ಕಟ್ಟುಗಳನ್ನು ನಿವಾರಿಸಲು ನೆರವಾಯಿತು. ನಿಸ್ತೇಜಗೊಂಡಿದ್ದ ಪಕ್ಷ ಮತ್ತೆ ಪುಟಿದೆದ್ದಿತು.

revanth with rahul
ರೇವಂತ್ ರೆಡ್ಡಿ ಜೊತೆಯಲ್ಲಿ ರಾಹುಲ್ ಗಾಂಧಿ

2022ರಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಸಂಚಾರ ನಡೆಸಿದಾಗ, ಎರಡೇ ವಾರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಉತ್ಸಾಹದಿಂದ ಮೈಕೊಡವಿ ಎದ್ದುನಿಂತರು. ಕೊನೆಯಲ್ಲಿ, ಕರ್ನಾಟಕದಲ್ಲಿ ಪಕ್ಷಕ್ಕೆ ಸಿಕ್ಕಿದ ಬಹುಮತದ ಗೆಲುವು ಚುನಾವಣೆಗೆ ಮುಂಚಿತವಾಗಿ ಅಗತ್ಯವಾಗಿ ತೆಲಂಗಾಣಕ್ಕೆ ಬೇಕಾಗಿದ್ದ ನೈತಿಕ ಸ್ಥೈರ್ಯವನ್ನು ನೀಡಿತು.

ಬಿಜೆಪಿಯ ಹೆಜ್ಜೆಗಳೇ ಊಹಾತೀತವಾಗಿ ಬೇರೆ ಕಡೆಗೆ ಇರುತ್ತವೆ. ಪಕ್ಷದ ಆಗಿನ ರಾಜ್ಯಾಧ್ಯಕ್ಷರಾಗಿದ್ದ ಹಿಂದುಳಿದ ಸಮುದಾಯದ ನಾಯಕ ಹಾಗೂ ಬಿಆರ್‌ಎಸ್ ಮತ್ತು ಕೆಸಿಆರ್‌ ವಿರುದ್ಧ ತೊಡೆತಟ್ಟಿ ನಿಂತಿದ್ದ ಬಂಡಿ ಸಂಜಯ್ ಕುಮಾರ್‌ರನ್ನು ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಲಾಯಿತು. ಅಲ್ಲದೇ, ದೆಹಲಿ ಅಬಕಾರಿ ಪ್ರಕರಣದಲ್ಲಿ ಕೆಸಿಆರ್ ಅವರ ಪುತ್ರಿ ಕೆ.ಕವಿತಾ ಅವರನ್ನು ಬಂಧಿಸದಿರುವ ನಿರ್ಧಾರ ಸ್ಪಷ್ಟವಾಗಿ ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಬಿಆರ್‌ಎಸ್‌ ಮೇಲೆ ತಳೆದಿರುವ ಮೃದುತ್ವವನ್ನು ತೋರಿಸುತ್ತದೆ. ಈ ರೀತಿ ಮಾಡುವ ಮೂಲಕ ಮುಂಬರುವ ಗೆಲುವಿಗೆ ಎದುರಾಗುವ ಅಡ್ಡಿಗಳನ್ನು ನಿವಾರಿಸಿದ ಸ್ಪಷ್ಟ ರಾಜಕೀಯ ಸಂದೇಶವನ್ನು ಬಿಜೆಪಿ ನೀಡಿದೆ. ಇದು ಅಲ್ಲಿಯವರೆಗೆ ಬಿಜೆಪಿ ಮತ್ತು ಬಿಆರ್‌ಎಸ್ ನಡುವಿನ ನಂಟಿನ ಬಗ್ಗೆ ಇದ್ದ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿಯನ್ನು ನೀಡಿದೆ.

ಬಿಆರ್‌ಎಸ್‌ ನೆಮ್ಮದಿಯಾಗಿರದಿದ್ದರೂ ಕಿರಿಕಿರಿಯಿಲ್ಲದೆ ಕುಳಿತಿತ್ತು. ಯಾವುದೇ ಆಡಳಿತ ವಿರೋಧಿ ವಾತಾವರಣ ಇರಲಿಲ್ಲ. ಪಬ್ಲಿಕ್‌ ಗಿಮಿಕ್‌ಗಳ ಮೂಲಕ ತಮ್ಮ ಶೋಕೇಸ್‌ ಯೋಜನೆಗಳನ್ನು ಮತ್ತು ಅಭಿವೃದ್ಧಿಯ ಕನಸುಗಳನ್ನು ಮತದಾರರ ಮನಸ್ಸಿನಲ್ಲಿ ಬಿತ್ತುವ ಮೂಲಕ ಎರಡು ಬಾರಿ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಿತು. ಇದಲ್ಲದೆ, ರೈತ ಬಂಧು ಮತ್ತು ದಲಿತ ಬಂಧುಗಳಂತಹ ಸಮಾಜದ ವಿವಿಧ ವರ್ಗಗಳಿಗೆ ಆರ್ಥಿಕವಾಗಿ ನೆರವಾಗುವ ಯೋಜನೆಗಳ ಸರಣಿಯನ್ನು ಜಾರಿಗೆ ತಂದಿದೆ. ಪಬ್ಲಿಕ್‌ ಪೋಲ್ ಒಂದು ರೀತಿಯ ಆತ್ಮತೃಪ್ತಿಯನ್ನೂ ಆ ಪಕ್ಷಕ್ಕೆ ನೀಡಿತ್ತು. ಆರಂಭಿಕ ಚುನಾವಣೆಗಳು ಬಿಆರ್‌ಎಸ್‌ಗೆ ದೊಡ್ಡ ಮಟ್ಟದ ಮುನ್ನಡೆಯನ್ನು ನೀಡಿದವು. ನಂತರದ ಸಮೀಕ್ಷೆಗಳು ಕಾಂಗ್ರೆಸ್‌ನ ಪುನರುತ್ಥಾನವನ್ನು ತೋರಿಸುತ್ತಿದ್ದರೂ, ನಾವು ಟ್ರ್ಯಾಕ್ ಮಾಡಿದ ಎಂಟು ಸಮೀಕ್ಷೆಗಳ ಸರಾಸರಿ ಮುನ್ಸೂಚನೆಯು ಬಿಆರ್‌ಎಸ್‌ಗೆ 57 ಮತ್ತು ಕಾಂಗ್ರೆಸ್‌ಗೆ 49 ಸ್ಥಾನಗಳನ್ನು ನೀಡಿದೆ.

ತೆಲಂಗಾಣದ ಸ್ಥಾನ ಎಲ್ಲಿದೆ?

ಪರಿದಿಯ ಒಳಗೆ ಮತ್ತು ಹೈದರಾಬಾದ್‌ನ ಆಚೆಗೂ, ಎಲ್ಲವೂ ಸರಿಯಾಗಿರಲಿಲ್ಲ. 2021ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (Human Development Indicators) ತೆಲಂಗಾಣವು 30 ರಾಜ್ಯಗಳಲ್ಲಿ 17 ನೇ ಸ್ಥಾನದಲ್ಲಿತ್ತು. ’ದಿ ಹಿಂದೂ’ವಿನ ಡೇಟಾ ಪಾಯಿಂಟ್ ಹೈದರಾಬಾದ್ ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ಅದರಿಂದ ದೂರದಲ್ಲಿರುವ ಜಿಲ್ಲೆಗಳ ನಡುವಿನ ಸಾಮಾಜಿಕ-ಆರ್ಥಿಕ ಸೂಚಕಗಳಲ್ಲಿ (Socio-Economic Indicators) ಇರುವ ಸಂಪೂರ್ಣ ವ್ಯತ್ಯಾಸವನ್ನು ಎತ್ತಿ ತೋರಿಸಿದೆ. ಎಂಟು ಸಾಮಾಜಿಕ ಅಭಿವೃದ್ಧಿ ಸೂಚಕಗಳ (Eight Social Development Indicators) ಡೇಟಾವು, ಎಂಟರಲ್ಲಿ ನಾಲ್ಕು ಸೂಚಕಗಳಲ್ಲಿ 2019-21ರ ಅವಧಿಯಲ್ಲಿ ತೆಲಂಗಾಣವನ್ನು ಅರ್ಧಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ಇರಿಸಿದೆ. ಕಡಿಮೆ ತೂಕವುಳ್ಳ ಮಕ್ಕಳ ಶೇಕಡಾವಾರುವಿನಲ್ಲಿ 30ರಲ್ಲಿ 21ನೇ ಸ್ಥಾನದಲ್ಲಿದೆ. ತಮ್ಮ ಎತ್ತರಕ್ಕೆ ಅನುಗುಣವಾಗಿ ತೂಕ ಕಡಿಮೆ ಇರುವ ಮಕ್ಕಳ ಪ್ರಮಾಣದಲ್ಲಿ 26ನೇ ಸ್ಥಾನದಲ್ಲಿದೆ. ಹದಿನೆಂಟು ವರ್ಷ ಪ್ರಾಯಕ್ಕಿಂತ ಮೊದಲು ವಿವಾಹವಾದ ಸದ್ಯ 20-24 ವರ್ಷ ವಯಸ್ಸಿನ ಮಹಿಳೆಯರ ಸಂಖ್ಯೆಯಲ್ಲಿ 23ನೇ ಸ್ಥಾನದಲ್ಲಿದೆ. ಆರು ವರ್ಷ ಪ್ರಾಯ ದಾಟಿದರೂ ಶಾಲೆಯ ಬಾಗಿಲನ್ನು ಕಾಣದ ಮಹಿಳೆಯರ ಜನಸಂಖ್ಯೆಯಲ್ಲಿ ತೆಲಂಗಾಣ ಅತ್ಯಂತ ಕೊನೆಯ ಸ್ಥಾನವಾದ 30ನೇ ಸ್ಥಾನವನ್ನು ಪಡೆದಿದೆ.

ಈ ಏಳು ಇಂಡಿಕೇಟರ್‌ಗಳಲ್ಲಿ ರಾಜ್ಯದ ಶ್ರೇಯಾಂಕ 2015-16 ಮತ್ತು 2019-21ರ ನಡುವೆ ಗಣನೀಯವಾಗಿ ಕುಸಿದಿದೆ. ಮೇಲೆ ತಿಳಿಸಿದ ನಾಲ್ಕು ಸೂಚಕಗಳ ಹೊರತಾಗಿ, ಇವುಗಳಲ್ಲಿ ಶಿಶು ಮರಣ ಪ್ರಮಾಣ, ಬೆಳವಣಿಗೆ ಕುಂಠಿತವಾಗಿರುವ ಮಕ್ಕಳ ಶೇಕಡಾವಾರು ಮತ್ತು ಆರೋಗ್ಯ ವಿಮಾ ಯೋಜನೆಯನ್ನೇ ಹೊಂದಿರದ ಸದಸ್ಯರಿರುವ ಕುಟುಂಬಗಳ ಪ್ರಮಾಣವೂ ಸೇರಿವೆ.
ಬಿಆರ್‌ಎಸ್ ಓಟದಲ್ಲಿ ಮುಂದಿದೆ ಎಂಬುದನ್ನು ಚುನಾವಣಾ ಸಮೀಕ್ಷೆಗಳು ತೋರಿಸಿದರೂ, ಹತ್ತಿರದಿಂದ ನೋಡಿದರೆ ಕಥೆಯೇ ಬೇರೆ. CVoter ಸರ್ವೇಯ ಪ್ರಕಾರ, “ಶೇ.57 ರಷ್ಟು ಜನರು ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದು, ಸರ್ಕಾರವನ್ನು ಬದಲಾಯಿಸಲು ಬಯಸಿದ್ದಾರೆ”. ಇತರ ನಾಲ್ಕು ರಾಜ್ಯಗಳಲ್ಲಿ ಅದೇ ಏಜೆನ್ಸಿ ನಡೆಸಿದ ಸರ್ವೇಯಂತೆ, ತಲಂಗಾಣದಲ್ಲಿ ಇರುವ ಸರ್ಕಾರದ ಮೇಲಿನ ಅತೃಪ್ತಿಯ ಮಟ್ಟ ಇತರ ರಾಜ್ಯಗಳಲ್ಲಿ ಇರುವುದಕ್ಕಿಂತ ಹೆಚ್ಚಿದೆ. ಪಂಚರಾಜ್ಯಗಳಲ್ಲಿ ಹಾಲಿ ಶಾಸಕರ ವಿರುದ್ಧ ಇರುವ ಜನರ ಅಸಮಾಧಾನದ ಮಟ್ಟ ತೆಲಂಗಾಣದಲ್ಲಿಯೇ ಅತಿ ಹೆಚ್ಚು (ಶೇ 53).

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತಿದ್ದ ಈ ಅಸಮಾಧಾನ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲವು ತಿಂಗಳ ಹಿಂದೆ ಇದ್ದ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವಿನ ಅಂತರ ಸುಮಾರು 6 ಶೇಕಡಾವಾರು ಅಂಕ (Percentage Points) ಚುನಾವಣೆಗೆ ಒಂದು ತಿಂಗಳು ಇರುವ ಮೊದಲೇ, ಒಂದೇ ವಾರದಲ್ಲಿ 2 ಅಂಕಗಳಿಗೆ ಕುಸಿದಿದೆ. ಭಾರತ್ ಜೋಡೋ ಅಭಿಯಾನದ ಕೆಲವು ಸಹವರ್ತಿಗಳ ಜೊತೆಗೆ ಲೇಖಕರಲ್ಲಿ ಒಬ್ಬರು (ಯೋಗೇಂದ್ರ ಯಾದವ್) ಬಿಆರ್‌ಎಸ್‌ನ ಕೆಲವು ಭದ್ರಕೋಟೆಗಳಿಗೆ ಭೇಟಿ ನೀಡಿದ್ದರು. ಆಗ ಬದಲಾವಣೆಯ ಗಾಳಿ ಬೀಸುತ್ತಿರುವುದು ಕಂಡುಬಂದಿತ್ತು. ಸತ್ಯಾಂಶವೇನೆಂದರೆ, ಬೀದಿಗಳಲ್ಲಿ ಜನರು ಸ್ವತಃ ಕೆಸಿಆರ್ ಮೇಲೆ ಯಾವ ಅಸಮಾಧಾನವಾಗಲೀ, ಕೋಪವನ್ನಾಗಲೀ ಇಟ್ಟುಕೊಂಡಿಲ್ಲ. ಅವರು ಕೆಸಿಆರ್‌ ಸರ್ಕಾರ ನೀಡಿದ ಗುಣಮಟ್ಟದ ರಸ್ತೆಗಳು, ಸಮರ್ಪಕ ’ಕರೆಂಟ್’ (ಗಾಬರಿಯಾಗಬೇಡಿ, ಕರೆಂಟ್‌ ಅಂದರೆ ವಿದ್ಯುತ್!) ಮತ್ತು ನೇರ ನಗದು ವರ್ಗಾವಣೆಯಂತಹ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ಗೊಂದು ಅವಕಾಶ ನೀಡುವ ಸಮಯ ಬಂದಿದೆ ಎಂಬ ಸ್ಪಷ್ಟ ಭಾವನೆ ಅವರಲ್ಲಿತ್ತು.

ಈ ಆರು ಅಂಶಗಳು ಎದ್ದು ಕಾಣುತ್ತಿವೆ!

ಒಂದು- ಕೆಸಿಆರ್ ನೀಡಿದ ಭರವಸೆಗಳಿಗೆ ಹೋಲಿಸಿದರೆ ಅವರ ಆಡಳಿತದ ಅಡಿಯಲ್ಲಿ ರಾಜ್ಯ ಅವುಗಳನ್ನು ಸಾಧಿಸಿದ್ದೇ ಕಡಿಮೆ. ಎರಡು- ಕೆಸಿಆರ್ ಅವರ ಐತಿಹಾಸಿಕ ಭ್ರಷ್ಟಾಚಾರಕ್ಕಿಂತ ತಮ್ಮ ಮಗ ಕೆಟಿ ರಾಮರಾವ್ ಜೊತೆಗೆ ಸೇರಿಕೊಂಡು ಸ್ಥಳೀಯ ಮಟ್ಟದಲ್ಲಿ ಬೆಳೆಸಿದ ದಮನಕಾರಿ ವ್ಯವಸ್ಥೆಯಿಂದ ಜನರು ನೊಂದು ಬೆಂದು ಹೋಗಿದ್ದಾರೆ. ಬಿಆರ್‌ಎಸ್‌ನ ಅನೇಕ ಶಾಸಕರು ಭ್ರಷ್ಟಾಚಾರ ಮತ್ತು ದುರಹಂಕಾರದಿಂದ ಕೊಬ್ಬಿಹೋಗಿದ್ದಾರೆ. ಮೂರು- ನಿರುದ್ಯೋಗದ ಮಟ್ಟ ಹೆಚ್ಚಾಗಿ ಯುವ ಮತದಾರರಲ್ಲಿ ಸರ್ಕಾರದ ಮೇಲೆ ಅತೀವ ಕೋಪ ಹುಟ್ಟುವಂತೆ ಮಾಡಿದೆ. ನಾಲ್ಕು- ಕೆಲವು ನಗದು ವರ್ಗಾವಣೆ ಯೋಜನೆಗಳು ಸ್ಥಳೀಯ ಮಟ್ಟದಲ್ಲಿ ಕ್ರೋನಿಸಂ ಬೆಳೆಯಲು ಕಾರಣವಾಗಿದೆ. ಐದು- ಹಿಂದೆ ಬಿಆರ್‌ಎಸ್‌ಗೆ ಬೆಂಬಲ ನೀಡಿದ್ದ ಮತ್ತು ಅದರ ವಿರುದ್ಧ ಯಾವುದೇ ರೀತಿಯ ದ್ವೇಷ ಇಟ್ಟುಕೊಂಡಿರದ ಮುಸಲ್ಮಾನರಲ್ಲಿ, ಬಿಆರ್‌ಎಸ್-ಬಿಜೆಪಿ ನಡುವಿನ ಈ ಮೈತ್ರಿ ಆಡಳಿತ ಪಕ್ಷದ ಬಗ್ಗೆ ಅಸಮಾಧಾನ ಹುಟ್ಟುವಂತೆ ಮಾಡಿದೆ. ಆರು- ಅಧಿಕೃತ ಜನಗಣತಿಯಂತೆ ಶೇ.2 ರಷ್ಟಕ್ಕಿಂತ ಹೆಚ್ಚಿಗೆ ಇರುವ ಕ್ರೈಸ್ತರಲ್ಲಿ ಮಣಿಪುರದ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿಯ ಬಗ್ಗೆ ಅಸಮಾಧಾನ ಎದ್ದಿದ್ದು, ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಬಿಜೆಪಿಗೆ ಪರ್ಯಾಯವನ್ನು ತರಲು ಯೋಚಿಸುತ್ತಿದ್ದಾರೆ.

ಈ ಎಲ್ಲಾ ಅಂಶಗಳು ಆಡಳಿತ ಪಕ್ಷದ ವಿನಾಶಕಾರಿ ಪತನಕ್ಕೆ ಕಾರಣವಾಗಿವೆ. ಎಷ್ಟು ವಿನಾಶಕಾರಿ ಎಂಬುದು ಬೇರೆಯೇ ಪ್ರಶ್ನೆ. ಕಳೆದ ಚುನಾವಣೆಯಲ್ಲಿ (ಬಿಆರ್‌ಎಸ್‌ ಶೇ.47, ಕಾಂಗ್ರೆಸ್‌ ಶೇ.28 ಮತ್ತು ಮಿತ್ರಪಕ್ಷಗಳು ಸೇರಿ ಶೇ.33) ಕಂಡ ಶೇ.14 ಅಂಕಗಳ ಕೊರತೆಯನ್ನು ನೀಗಿಸಲು ಮತ್ತು ಬಿಆರ್‌ಎಸನ್ನು ಹಿಂದಿಕ್ಕಲು ಕಾಂಗ್ರೆಸ್‌ಗೆ ಅಲೆಯ ಕೊರತೆಯೇನೂ ಇಲ್ಲ. 2018ರಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ 10 ರಲ್ಲಿ (ಪೂರ್ವದ ಖಮ್ಮಂ ಹೊರತುಪಡಿಸಿ) ಕ್ಲೀನ್‌ ಸ್ವೀಪ್‌ ಮಾಡಿದ್ದ ಬಿಆರ್‌ಎಸ್ 21 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್-ಟಿಡಿಪಿ ಮೈತ್ರಿಕೂಟದ ಎದುರು 119 ಸ್ಥಾನಗಳಲ್ಲಿ 88 ಸ್ಥಾನಗಳನ್ನು ಪಡೆದಿತ್ತು. ಸದ್ಯ ಪಕ್ಷಕ್ಕೆ ತನ್ನ ಪರವಾದ ಸುಮಾರು ಶೇ.10 ರಷ್ಟು ಒಟ್ಟಾರೆ ಸ್ವಿಂಗ್ ಮತ್ತು ಬಿಆರ್‌ಎಸ್ ವಿರುದ್ಧ ಅದೇ ಪ್ರಮಾಣದ ಸ್ವಿಂಗ್‌ನ ಅಗತ್ಯವಿದೆ. ಇದು ಕಷ್ಟವೆನಿಸಿದರೂ ಅಸಾಧ್ಯವೇನಲ್ಲ. ಗ್ರೇಟರ್ ಹೈದರಾಬಾದ್‌ನ ನಗರ ಪ್ರದೇಶಗಳು ಮತ್ತು ರಾಜ್ಯದ ಉತ್ತರದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಬಿಆರ್‌ಎಸ್ ವಿರುದ್ಧ ಅಲೆ ಇರುವಲ್ಲಿ ಬಿಜೆಪಿಯು ಕಾಂಗ್ರೆಸ್‌ನ ಅವಕಾಶಗಳನ್ನು ಕೆಡವಿಹಾಕಬಹುದು.

ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ರಾಜ್ಯದಲ್ಲಿ ಬಿಆರ್‌ಎಸ್‌ನೊಂದಿಗೆ ಸ್ನೇಹಪರವಾಗಿರುವುದು ಎದ್ದು ಕಾಣುತ್ತದೆ. ಅದರ ಭದ್ರಕೋಟೆಯಾದ ಓಲ್ಡ್ ಸಿಟಿಯಲ್ಲಿಯೂ ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಬಿಜೆಪಿಯ ಸಾಧನೆಯು ಕಾಂಗ್ರೆಸ್‌ಗೆ ಅಂತಿಮ ಹೊಡೆತವಾಗಬಹುದು. ವರದಿಗಳ ಪ್ರಕಾರ, ಬಿಜೆಪಿ ತನ್ನ ದುರ್ಬಲ ಸ್ಥಿತಿಯ ಹೊರತಾಗಿಯೂ ಕನಿಷ್ಠ 40 ಸ್ಥಾನಗಳಲ್ಲಿ ಬಿಆರ್‌ಎಸ್ ವಿರೋಧಿ ಮತಗಳನ್ನು ವಿಭಜಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳಿಗೆ ಮತ್ತು ಎಸ್‌ಸಿ ಕೋಟಾದ ಉಪವರ್ಗವಾದ ಮಾದಿಗ ದಲಿತರಿಗೆ ನೀಡಿದ ಭರವಸೆಯು ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿಗೆ ಪೆಟ್ಟಾಗಬಹುದು. ಈ ಸ್ಥಾನಗಳಲ್ಲಿ ಬಿಜೆಪಿ ಕೊಡುವ ಕೊನೆಯ ಹಂತದ ಹುರುಪಿನ ಬೆಂಬಲ ಬಿಆರ್‌ಎಸ್‌ಗೆ ಸ್ವಲ್ಪ ಸಮಾಧಾನವನ್ನು ನೀಡಬಹುದು. ಆಡಳಿತಾರೂಢ ಪಕ್ಷದ ಪರವಾಗಿ ಮತಹಾಕಲು ಕೊನೆಯ ಕ್ಷಣದಲ್ಲಿ ಭಾರಿ ಪ್ರಮಾಣದ ಹಣದ ಹೊಳೆ ಹರಿಯುವ ಸಾಧ್ಯತೆಯೂ ಇದೆ.

ಏನೇ ಆದರೂ, ಚುನಾವಣಾ ಅಲೆಗಳ ಇತಿಹಾಸವು ನಮಗೆ ಕಲಿಸುವುದೇನೆಂದರೆ, ಒಮ್ಮೆ ಅಲೆ ಚಲಾವಣೆಯಲ್ಲಿದ್ದರೆ, ಕೊನೆಯ ನಿಮಿಷದ ತಂತ್ರಗಳು ಸ್ವಲ್ಪವೂ ಪರಿಣಾಮ ಬೀರುವುದಿಲ್ಲ. ಡೊಮಿನೊ ಪರಿಣಾಮವು ಇನ್ನೂ ತಮ್ಮ ಒಲವನ್ನು ನಿರ್ಧರಿಸದ ಮತದಾರರನ್ನು, ಅದರಲ್ಲೂ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪರವಾಗಿ ತಿರುಗಿಸುವ ಸಾಧ್ಯತೆಯಿದೆ ಮತ್ತು ಹವಾ (ಗಾಳಿ) ಆಂಧಿಯಾಗಿ (ಚಂಡಮಾರುತ) ಬದಲಾಗಬಹುದು. ಇತ್ತೀಚಿನ ವಿಶ್ವಾಸಾರ್ಹ ಸಮೀಕ್ಷೆಯ ಅನುಪಸ್ಥಿತಿಯಲ್ಲಿ ನಿಖರವಾದ ಸ್ಥಾನಗಳ ಅಂಕಿಅಂಶಗಳನ್ನು ಊಹಿಸುವುದು ಅರ್ಥಹೀನ, ಆದರೆ ನಾಟಕೀಯ ತಿರುವುಗಳನ್ನು ಹೊಂದಿರುವ ಈ ಕಥೆ ಕಾಂಗ್ರೆಸ್‌ಗೆ ಬಹುಮತ ಸಿಗುವ ಮೂಲಕ ಕೊನೆಗೊಳ್ಳದಿದ್ದರೆ ಆಶ್ಚರ್ಯವೇ ಸರಿ.

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

?s=150&d=mp&r=g
ಶ್ರೇಯಸ್ ಸರ್ದೇಸಾಯಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X