ರಾಜಕಾರಣಿಗಳ ಕಣ್ಣೀರು: ಮತದಾರರ ಮೆಚ್ಚಿಸುವ ತಂತ್ರವೇ?

Date:

Advertisements

ರಾಜ್ಯದ ಉಪಮುಖ್ಯಮುಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿ ನಡೆದ ಐಪಿಎಲ್ ದುರಂತದ ಘಟನೆಯ ಕುರಿತು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ ಮತ್ತು ರಾಜಕಾರಣಿಗಳ ರಾಜಕೀಯ ಲಾಭದ ಲೆಕ್ಕಾಚಾರಗಳು ಸಾರ್ವಜನಿಕರಲ್ಲಿ ನಿರಾಶೆಯನ್ನು ಉಂಟುಮಾಡಿದೆ. ರಾಜಕಾರಣಿಗಳ ಕಣ್ಣೀರು ರಾಜಕೀಯ ತಂತ್ರ, ಪ್ರಜೆಗಳ ಭಾವನೆಗಳಿಗೆ ಎಸಗುವ ದ್ರೋಹವಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ತೋರಿಸುವುದು, ಮೈಮರೆತು ಅಳುವುದು, ಸಂಕಟವನ್ನೇ ನಾಟಕೀಯವಾಗಿ ತೋರಿಸುವುದು ಸಾಮಾನ್ಯವಾಗುತ್ತಿದೆ. ಆದರೆ ಇದು ನಿಜವಾಗಲೂ ಭಾವನಾತ್ಮಕ ಸ್ಪಂದನೆಯೇ? ಅಥವಾ ಜನರನ್ನು ಭಾವನಾತ್ಮಕವಾಗಿ ಬಲವಂತದಿಂದ ಮತ ಕೇಳುವ ತಂತ್ರವೋ? ಎಂಬುದನ್ನು ಅರಿತುಕೊಳ್ಳಬೇಕಿದೆ.

ರಾಜಕಾರಣಿಗಳ ಕಣ್ಣೀರಿನ ವಿಚಾರ ಟೀಕೆಗೆ ಗುರಿಯಾಗಿರುವುದು ಇದೇ ಮೊದಲಲ್ಲ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇವರೆಲ್ಲರ ಕಣ್ಣೀರು ರಾಜಕೀಯ ಆರೋಪ, ಪ್ರತ್ಯಾರೋಪ ಹಾಗೂ ಟೀಕೆಗಳಿಗೆ ಕಾರಣವಾಗಿದೆ. ಇಂತಹ ಅನೇಕ ಘಟನೆಗಳನ್ನು ಗಮನಿಸಿದಾಗ ರಾಜಕಾರಣಿಗಳ ಕಣ್ಣೀರು ಒಂದು ರಾಜಕೀಯ ತಂತ್ರ ಮತ್ತು ಪ್ರಜೆಗಳ ಭಾವನೆಗಳಿಗೆ ಎಸಗುವ ದ್ರೋಹವಾಗಿದೆ ಎಂಬುದು ತಿಳಿಯುತ್ತದೆ.

Advertisements

ಯಡಿಯೂರಪ್ಪನವರ ಕಣ್ಣೀರು; ಕುಮಾರಸ್ವಾಮಿಗೆ ವಚನಭ್ರಷ್ಟತೆಯ ಪಟ್ಟ

ಜೆಡಿಎಸ್ ಪಕ್ಷ 2007ರ ಅಕ್ಟೋಬರ್ 2ರಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ ಕಾರಣ ಯಡಿಯೂರಪ್ಪನವರು 2007ರಲ್ಲಿ ಜೆಡಿಎಸ್ ಪಕ್ಷದಿಂದಾದ ವಿಶ್ವಾಸದ್ರೋಹ, ಕುಮಾರಸ್ವಾಮಿಯವರ ನಾಟಕೀಯ ಬದಲಾವಣೆಯ ವಿಷಯಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಚುನಾವಣೆಯ ಭಾಷಣಗಳಲ್ಲಿ ಕಣ್ಣೀರು ಸುರಿಸಿ, ಅನುಕಂಪದ ವಾತಾವರಣವನ್ನು ನಿರ್ಮಾಣ ಮಾಡಿದ್ದರು. ಇದರಿಂದ 2008ರ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿ 6 ಜನ ಪಕ್ಷೇತರರ ನೆರವಿನಿಂದ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸರ್ಕಾರ ರಚನೆ ಮಾಡಿತು. ಅಲ್ಲದೆ ಎಚ್ ಡಿ ಕುಮಾರಸ್ವಾಮಿಗೆ ವಚನಭ್ರಷ್ಟತೆಯ ಪಟ್ಟ ನೀಡುವಲ್ಲಿ ಯಶಸ್ವಿಯಾಗಿದ್ದರು.

ಬಸವರಾಜ ಬೊಮ್ಮಾಯಿ ಕಣ್ಣೀರು; 777 ಚಾರ್ಲಿಗೆ ತೆರಿಗೆ ವಿನಾಯಿತಿ

ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರಿಗೆ ಕಾರಣವಾದದ್ದು ಸಿನಿಮಾದಲ್ಲಿ ಚಾರ್ಲಿ ಹೆಸರಿನ ನಾಯಿ ಸಾವಿಗೀಡಾದ ದೃಶ್ಯ. ಈ ದೃಶ್ಯ ಕಂಡು ತಮ್ಮ ಸಾಕು ನಾಯಿ ಸನ್ನಿಯ ನೆನಪಾಗಿ ಕಣ್ಣೀರು ಸುರಿಸಿದ್ದರು ಹಾಗೂ 777 ಚಾರ್ಲಿ ಚಲನಚಿತ್ರಕ್ಕೆ ನೂರಕ್ಕೆ ನೂರರಷ್ಟು ತೆರಿಗೆ ವಿನಾಯಿತಿಯನ್ನು ನೀಡಿದ್ದರು. ಇದು ರಾಜ್ಯದಲ್ಲಿ ಟೀಕೆಗೆ ಒಳಗಾಗಿತ್ತು. ಹಿಜಾಬ್ ಕಾರಣದಿಂದ ತರಗತಿಗೆ ಹಾಜರಾಗದ ಹೆಣ್ಣುಮಕ್ಕಳ ಕುರಿತು ನಿಮಗೆ ಕಣ್ಣೀರು ಬರಲಿಲ್ಲವೆ? ಕೋಮುವಾದಿ ಮನಸ್ಥಿತಿಯ ಗೂಂಡಾಗಳು ಬಡ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿದಾಗ ನಿಮಗೆ ಕಣ್ಣೀರು ಬರಲಿಲ್ಲವೆ ಬೊಮ್ಮಾಯಿಯವರೇ ಎಂದು ರಾಜ್ಯದ ಜನತೆ ಪ್ರಶ್ನೆ ಮಾಡಿದ್ದರು.

ಎಚ್‌ಡಿಕೆ ಕಣ್ಣೀರು; ವಿಕ್ಸ್ ಕಣ್ಣೀರೆಂದು ಅಪಹಾಸ್ಯ

ಎಚ್ ಡಿ ಕುಮಾರಸ್ವಾಮಿಯವರು ಸಾರ್ವಜನಿಕ ಸಭೆಯಲ್ಲಿ ಕಣ್ಣೀರು ಸುರಿಸಿದ್ದನ್ನು ರಾಜಕೀಯ ವಿರೋಧಿಗಳು, ʼಕುಮಾರಸ್ವಾಮಿಯವರದ್ದು ವಿಕ್ಸ್ ಕಣ್ಣೀರುʼ ಎಂದು ಟೀಕೆ ಮಾಡಿದ್ದರು. ಇದರಿಂದ ಕುಮಾರಸ್ವಾಮಿ ಅಪಹಾಸ್ಯಕ್ಕೆ ಒಳಗಾಗಿದ್ದರು. ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ʼನಾನು ಮಾಡುವ ಸಾಧನೆಗೆ ನನಗೆ ಹೆಸರು ಬೇಡ. ನಿಮ್ಮ ಹೃದಯದಲ್ಲಿ ಕೊಟ್ಟ ಸ್ಥಾನ ಸಾಕು. ನಾನು ಸಾಯುವ ಮುನ್ನ ನಿಮ್ಮ ಋಣ ತೀರಿಸಿ ಹೋಗುವೆʼ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಕುಟುಂಬದ ಪರಂಪರೆ ಮುಂದುವರೆಸಿದ ನಿಖಿಲ್

ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿಯವರು, ʼಎರಡು ಚುನಾವಣೆಗಳಲ್ಲಿ ಸೋತಿರುವ ನಾನು ಏನು ತಪ್ಪು ಮಾಡಿದ್ದೇನೆಂದು ಗೊತ್ತಾಗುತ್ತಿಲ್ಲ. ಎಚ್ ಡಿ ದೇವೇಗೌಡರ ಮೊಮ್ಮಗನಾಗಿ, ಎಚ್ ಡಿ ಕುಮಾರಸ್ವಾಮಿ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟವೇನೋʼ ಎಂದು ಕಣ್ಣೀರು ಹಾಕಿದ್ದರು. ಇದು ಅಂದು ಟೀಕೆಗೆ ಗುರಿಯಾಗಿತ್ತು.

ರಾಜಕಾರಣಿಗಳು ಭಾವನೆಗಳನ್ನು ಉಪಯೋಗಿಸಿ, ಜನರ ಮನಸ್ಸಿನಲ್ಲಿ ತಾತ್ಕಾಲಿಕವಾಗಿ ಸಹಾನುಭೂತಿ ಗಳಿಸಿ, ಅದನ್ನು ಮತಗಳ ರೂಪದಲ್ಲಿ ಪರಿವರ್ತಿಸಿಕೊಳ್ಳುವ ಒಂದು ದೋಷಪೂರ್ಣ ಸಂಸ್ಕೃತಿ ವಿರುದ್ದ ಜನರು ನಿಲ್ಲಬೇಕಿದೆ. ರಾಜಕೀಯ ನಾಯಕನ ಕಣ್ಣೀರನ್ನು ನೋಡಿ, ಮತ ನೀಡಬಾರದು. ಬದಲಿಗೆ ಅವರ ನಡವಳಿಕೆ, ನೈತಿಕತೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಯಾರಿಗೆ ಮತ ನೀಡಬೇಕೆಂಬುದನ್ನು ತೀರ್ಮಾನಿಸಬೇಕಿದೆ.

ಇದನ್ನೂ ಓದಿದ್ದೀರಾ? ವಿಜಯ ಮಲ್ಯ- ಕಳ್ಳನೋ, ಸುಳ್ಳನೋ, ವಂಚಕನೋ ಅಥವಾ ಸಂತನೋ?

ರಾಜಕಾರಣಿಗಳ ಕಣ್ಣೀರು ರಾಜಕೀಯ ತಂತ್ರ. ಇದೊಂದು ಸಾಂದರ್ಭಿಕ ಜಾಲತಾಣದಂತಿದೆ. ಅವು ಕ್ಷಣಿಕವಾದ ಪ್ರಭಾವ ಉಂಟುಮಾಡಿದರೂ, ಸಮಾಜದ ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರವಲ್ಲ ಎನ್ನುವುದು ಜನತೆಗೆ ಅರಿವಾದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ.

“ರಾಜಕೀಯವು ನೈತಿಕತೆಯಿಂದ ಇರಬೇಕು; ನೈತಿಕತೆಯಿಲ್ಲದ ರಾಜಕೀಯವೆಂದರೆ ಅದು ನಾಶದ ಮಾರ್ಗ” ಎಂದು ಗಾಂದೀಜಿಯವರು ಹೇಳಿದ್ದಾರೆ.

ನಿಜವಾದ ನಾಯಕತ್ವ ಅಳುವಲ್ಲ, ಭದ್ರತೆಯಿಂದ, ನಿಷ್ಠೆಯಿಂದ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದರಲ್ಲಿ ಕಾಣಿಸಬೇಕು. ಜನರು ಯಾಕೆ ಮತ ಹಾಕುತ್ತಾರೆ ಎಂಬುದನ್ನು ರಾಜಕಾರಣಿಗಳು ಮರೆಯಬಾರದು. ಕಣ್ಣೀರಿಗಲ್ಲ, ನಾಟಕಕ್ಕಲ್ಲ, ಅದು ನಡವಳಿಕೆ, ಕ್ರಿಯಾಶೀಲತೆ ಮತ್ತು ಪ್ರಾಮಾಣಿಕತೆಗೆ ಎಂಬುದನ್ನು ಮರೆಯಬಾರದು.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X