ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ರಾಜ್ಯದ ಹಳ್ಳಿಯ ಮಹಿಳೆಯರು ಗ್ಯಾರಂಟಿ ಯೋಜನೆಯಿಂದ ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯು ಮಹಿಳೆಯರ ಘನತೆಗೆ ಹಾಗೂ ಚಾರಿತ್ರಕ್ಕೆ ಧಕ್ಕೆ ತಂದಿದೆ ಎಂದು ಮಹಿಳಾ ಆಯೋಗ ಹೇಳಿದೆ. ಕುಮಾರಸ್ವಾಮಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಲು ಮುಂದಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ರಾಜಕೀಯ ಸಮಾವೇಶದಲ್ಲಿ ಭಾಷಣ ಮಾಡುವ ಸಂದರ್ಭ ಗ್ಯಾರಂಟಿ ಯೋಜನೆ ಜಾರಿಯಿಂದ ರಾಜ್ಯದ ಹಳ್ಳಿಯ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಕುಮಾರಸ್ವಾಮಿ ಅವರ ಈ ಹೇಳಿಕೆ ಮಹಿಳೆಯರ ಘನತೆಗೆ ಹಾಗೂ ಚಾರಿತ್ರಕ್ಕೆ ಧಕ್ಕೆ ತಂದಿದೆ. ಹಾಗಾಗಿ, ಇದನ್ನು ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವರಿಗೆ ನೋಟಿಸ್ ಜಾರಿ ಮಾಡಲಿದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲೇ ಆತ್ಮಹತ್ಯೆ
ಸಂಜಯ್ ಪಾಟೀಲ ವಿರುದ್ಧ ದೂರು
“ಜತೆಗೆ, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರ ಕುರಿತು ಅಪಮಾನಕಾರಿಯಾಗಿ ಹೇಳಿಕೆ ನೀಡಿರುವ ಸಂಜಯ್ ಪಾಟೀಲ ಅವರ ವಿರುದ್ಧವೂ ಕೂಡ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುವುದು” ಎಂದು ತಿಳಿಸಿದೆ.
“ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ರಾಜಕೀಯ ನಾಯಕರು ಮಹಿಳೆಯರ ಬಗ್ಗೆ ಹಾಗೂ ಅವರ ಘನತೆಯನ್ನು ಹೊಂದಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಈ ವಿಚಾರವನ್ನು ಸಾಮಾಜಿಕ ದೃಷ್ಟಿಕೋನದಿಂದ ಗಂಭೀರವಾಗಿ ಪರಿಗಣಿಸಿ ಮಹಿಳಾ ಆಯೋಗ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳುತ್ತದೆ” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.