- ‘ಆಂಧ್ರಪ್ರದೇಶ ಮಾದರಿ ಕುರಿತು ಮಾಹಿತಿ ಪಡೆಯಲಾಗಿದೆ’
- ‘ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ಅಂತಿಮ ನಿರ್ಧಾರ’
ಆಂಧ್ರಪ್ರದೇಶದಲ್ಲಿ ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಿ ಬಳಸಬಹುದಾದ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸುವ ಬಗ್ಗೆ ಪ್ರಸ್ತಾವವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, “ಬಿಪಿಎಲ್ ಪಡಿತರ ಚೀಟಿದಾರರಲ್ಲಿ ಕೆಲವರು ಆಹಾರ ಧಾನ್ಯ ಪಡೆಯದಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ವೈದ್ಯಕೀಯ ಸೇವೆಗಳಲ್ಲಿ ಶುಲ್ಕ ರಿಯಾಯ್ತಿ ಪಡೆಯುವುದಕ್ಕೆ ಮಾತ್ರ ಕೆಲವು ಕಾರ್ಡ್‌ಗಳು ಸೀಮಿತವಾಗಿವೆ” ಎಂದರು.
“ಆಂಧ್ರಪ್ರದೇಶ ಮಾದರಿ ಕುರಿತು ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಮೂರು ಲಕ್ಷ ಅರ್ಜಿಗಳು ಬಾಕಿ
“ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಕೋರಿರುವ ಮೂರು ಲಕ್ಷ ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರದಲ್ಲಿ ಪರಿಶೀಲಿಸಿ, ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂತ್ರಾಲಯದಲ್ಲಿ ರಾಮನ ವಿಗ್ರಹ; ಆಂಧ್ರದಲ್ಲಿ ಬಿಜೆಪಿಯ ಪ್ರತಿಮಾ ರಾಜಕಾರಣ
566 ಕೋಟಿ ರೂ. ಪಾವತಿ
“ಈವರೆಗೂ 27 ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ 566 ಕೋಟಿ ರೂ. ಮೊತ್ತವನ್ನು ಗ್ರಾಹಕರಿಗೆ ಪಾವತಿಸಲಾಗಿದೆ. ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬಾಕಿ ಇದ್ದು, ವಾರದೊಳಗೆ ಎಲ್ಲರ ಖಾತೆಗಳಿಗೂ ಹಣ ವರ್ಗಾವಣೆ ಮಾಡಲಾಗುವುದು” ಎಂದರು.
“ಮಾಹಿತಿ ಕೊರತೆ ಇರುವ ಪಡಿತರ ಚೀಟಿದಾರರನ್ನು ಸಂಪರ್ಕಿಸಿ, ಅಗತ್ಯ ಮಾಹಿತಿ ಜೋಡಣೆ ಮಾಡಲಾಗುವುದು. ಎರಡರಿಂದ ಮೂರು ತಿಂಗಳಲ್ಲಿ ಅಂತಹ ಪಡಿತರ ಚೀಟಿದಾರರ ಖಾತೆಗೂ ಹಣ ವರ್ಗಾವಣೆ ಮಾಡಲಾಗುವುದು” ಎಂದು ವಿವರಿಸಿದರು.
30.90 ಲಕ್ಷ ಪಡಿತರ ಚೀಟಿಗೆ ಮಾಹಿತಿ ಜೋಡಣೆ ಇಲ್ಲ
“1.28 ಕೋಟಿ ಬಿಪಿಎಲ್ ಪಡಿತರ ಚೀಟಿಗಳು ರಾಜ್ಯದಲ್ಲಿವೆ. ಈ ಪೈಕಿ 97.27 ಲಕ್ಷ ಪಡಿತರ ಚೀಟಿದಾರರ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೋಡಣೆ ಮಾಡಲಾಗಿದೆ. 30.90 ಲಕ್ಷ ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಈ ಮಾಹಿತಿ ಜೋಡಣೆಯಾಗಿಲ್ಲ” ಎಂದು ಮುನಿಯಪ್ಪ ಹೇಳಿದರು.