ಮಹಾರಾಷ್ಟ್ರದಲ್ಲಿ ಇನ್ನೆರಡು ದಿನಗಳಲ್ಲಿ (ನವೆಂಬರ್ 20) ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ಪಕ್ಷಗಳು ಚುನಾವಣಾ ತಯಾರಿಯನ್ನು ಮಾಡಿಕೊಂಡಿದೆ. ಈ ನಡುವೆ ಮಹಾರಾಷ್ಟ್ರ ಬಿಜೆಪಿಯ ‘ಏಕ್ ಹೈ ತೊ ಸೇಫ್ ಹೈ’ (ಜೊತೆಯಾಗಿದ್ದರೆ ಸುರಕ್ಷಿತವಾಗಿರುತ್ತೇವೆ) ಎಂಬ ಘೋಷಣೆಯನ್ನು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ವಿವರಿಸಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೊದಲು ಲಾಕರ್ ಬಾಕ್ಸ್‌ನಿಂದ ಎರಡು ಚಿತ್ರಗಳನ್ನು ಹೊರತೆಗೆದು ಪ್ರದರ್ಶಿಸಿದ್ದಾರೆ. ಒಂದು ಚಿತ್ರದಲ್ಲಿ ಮೋದಿ ಮತ್ತು ಅದಾನಿ ಇದ್ದರೆ, ಇನ್ನೊಂದು ಚಿತ್ರ ಧಾರಾವಿಯದ್ದಾಗಿದೆ. ಈ ಚಿತ್ರವನ್ನು ತೋರಿಸಿ ಏಕ್ ಹೈ ತೊ ಸೇಫ್ ಹೈ ಘೋಷಣೆಯನ್ನು ರಾಹುಲ್ ವಿವರಿಸಿದ್ದಾರೆ.
‘ಏಕ್ ಹೈ ತೊ ಸೇಫ್ ಹೈ’ ಎಂಬ ಘೋಷಣೆಯಲ್ಲಿ ‘ಏಕ್’ (ಒಂದು) ಅಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಆಪ್ತ ವಲಯ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಭಾರತದಲ್ಲಿ ತೆವಳುತ್ತಿರುವ ಮೂಲಸೌಕರ್ಯ ಯೋಜನೆಗಳಿಗೆ ಬಾಂದ್ರಾ ಕಾಲ್ತುಳಿತ ತಾಜಾ ನಿದರ್ಶನ: ರಾಹುಲ್ ಗಾಂಧಿ
“ಅವರ ನಾಯಕತ್ವದಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮಾತ್ರ ಸುರಕ್ಷಿತರಾಗಿದ್ದಾರೆ. ಆದರೆ ಧಾರಾವಿ ಜನರು ನಿರ್ಲಕ್ಷಿಸಲ್ಪಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ. ಹಾಗೆಯೇ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹಲವು ಪ್ರತಿಜ್ಞೆಗಳನ್ನು ಕೂಡಾ ಮಾಡಿದ್ದಾರೆ.
नरेंद्र मोदी का 'एक हैं तो सेफ हैं' 👇 pic.twitter.com/H9JXDSQmIN
— Congress (@INCIndia) November 18, 2024
“ನಾವು ಮೀಸಲಾತಿ ಮೇಲಿನ ಶೇಕಡ 50 ಮಿತಿಯನ್ನು ತೆಗೆದುಹಾಕುತ್ತೇವೆ” ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಜಾತಿ ಗಣತಿ ಮುಖ್ಯವಾದುದ್ದು. ಅದು ನಮ್ಮ ಮುಂದಿರುವ ಅತೀ ಪ್ರಮುಖ ಕಾರ್ಯ ಎಂದರು.
ಮುಂಬರುವ ಮಹಾರಾಷ್ಟ್ರ ಚುನಾವಣೆಯನ್ನು ಶ್ರೀಮಂತರು ಮತ್ತು ಹಿಂದುಳಿದವರ ನಡುವಿನ ‘ಸೈದ್ಧಾಂತಿಕ ಕದನ’ ಎಂದು ಬಣ್ಣಿಸಿದ್ದಾರೆ.
ಇದನ್ನು ಓದಿದ್ದೀರಾ? ಆಪ್ ತೊರೆದು ಬಿಜೆಪಿ ಸೇರಿದ ಕೈಲಾಶ್ ಗಹ್ಲೋಟ್
ಇನ್ನು ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, “ಅದಾನಿಗೆ ಏನು ಬೇಕೋ ಅದನ್ನು ಅವರು ಪಡೆಯುತ್ತಾರೆ. ಕಾರ್ಪೋರೇಟ್ ವಲಯದ ಬಗ್ಗೆ ಹೆಚ್ಚು ಕಾಳಜಿ ಬಿಜೆಪಿ ನಾಯಕರಿಗಿದೆ” ಎಂದು ದೂರಿದರು.
“ಫಾಕ್ಸ್‌ಕಾನ್ ಮತ್ತು ಏರ್‌ಬಸ್ ಸೇರಿದಂತೆ 7 ಲಕ್ಷ ಕೋಟಿ ರೂ ಯೋಜನೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ವರ್ಗಾಯಿಸಲಾಗಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾದರೆ ಜನರ ಹಿತಾಸಕ್ತಿಯನ್ನು ರಕ್ಷಿಸುತ್ತದೆ” ಎಂದು ಭರವಸೆ ನೀಡಿದರು.
