ಗ್ರಾಮಾಭಿವೃದ್ಧಿಯ ಅಡಿಯಲ್ಲಿ ಭೂ ರಹಿತರು, ಕಾರ್ಮಿಕರು, ಮಹಿಳೆಯರು ಮತ್ತು ಬಡವರಿಗೆ ಸಾಲ ನೀಡಿ, ಬ್ಯಾಂಕ್‌ಗಿಂತ ಹೆಚ್ಚು ಬಡ್ಡಿ ದರ ವಿಧಿಸಿ, ದೇವರ ಹೆಸರಲ್ಲಿ ಬಡ್ಡಿ ವ್ಯವಹಾರ ನಡೆಸಲಾಗುತ್ತಿದೆ. ಧರ್ಮಸ್ಥಳದ ಧರ್ಮದರ್ಶಿಗಳ ಮೈಕ್ರೋ ಫೈನಾನ್ಸಿಂಗ್ ಕಾರ್ಯಾಚರಿಸುವ ವಿಧಾನವನ್ನು ಬಹಳ ಹತ್ತಿರದಿಂದ ಕಂಡ ಡಾ. ಸಂದೀಪ್ ಸಾಮೆತಡ್ಕ ನಾಯಕ್, ಅವರೊಂದಿಗೆ ಸಾಲ ಮತ್ತು ಬಡ್ಡಿ ವ್ಯವಹಾರಗಳ ಸುತ್ತ ಮಾತುಕತೆ...
ಪ್ರಶ್ನೆ: ಗ್ರಾಮಾಭಿವೃದ್ಧಿ ಹೆಸರಲ್ಲಿ ಧರ್ಮಸ್ಥಳದವರು ಮೈಕ್ರೋ ಫೈನಾನ್ಸ್ ವ್ಯವಹಾರ ಆರಂಭಿಸಿದ್ದು ಹೇಗೆ?
ಡಾ. ಸಂದೀಪ್: ಸುಮಾರು 20 ವರ್ಷಗಳ ಹಿಂದೆ ಇರಬಹುದು. ಭೂರಹಿತ ಶ್ರಮಿಕರಿಗೆ ಬ್ಯಾಂಕ್ ಸುಲಭದಲ್ಲಿ ಸಾಲ ಕೊಡುತ್ತಿರಲಿಲ್ಲ. ಈಗಲೂ ಪರಿಸ್ಥಿತಿ ಬದಲಾಗಲಿಲ್ಲ, ಇರಲಿ. ಮೊದಲೇ ಆರ್ಥಿಕವಾಗಿ ಕಷ್ಟದಲ್ಲಿರುವ ಈ ವರ್ಗ, ಚಿಕ್ಕ ಪುಟ್ಟ ವ್ಯವಹಾರಕ್ಕಾಗಿ, ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ಶುಲ್ಕ ಭರಿಸಲು ಅಥವಾ ಶುಭಕಾರ್ಯಕ್ರಮಗಳಿಗಾಗಿ ಸಾಲ ಪಡೆಯಲು ಕಷ್ಟ ಇತ್ತು. ಕೆಲವರು ಅಧಿಕ ಬಡ್ಡಿಗೆ ಕೈಸಾಲದ ಮೊರೆ ಹೋಗಿ, ಬಡ್ಡಿ ಕಟ್ಟಲಾಗದೆ, ಸಾಲವೂ ತೀರದೆ ಕಷ್ಟಪಟ್ಟ ಉದಾಹರಣೆ ಎಷ್ಟೋ ಇದೆ.
ಈ ಸಂದರ್ಭದ ಲಾಭ ಪಡೆಯಲು ‘ಗ್ರಾಮಾಭಿವೃದ್ಧಿ’ ಹೆಸರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಎಂಬ ಸಂಸ್ಥೆ ಮೈಕ್ರೋ ಫೈನಾನ್ಸ್ ವ್ಯವಹಾರಕ್ಕೆ ಇಳಿಯಿತು. ಇದು ಸುಲಭದಲ್ಲಿ, ಅಧಿಕ ಬಡ್ಡಿಗೆ ಸಾಲ ಕೊಟ್ಟು, ಬಡ್ಡಿ ವಸೂಲಿ ಮಾಡುವ ಸರಳ ವ್ಯವಹಾರ. ಮೊದಲು ಒಂದು ಸರಕಾರೇತರ ಸಂಸ್ಥೆ ಸ್ಥಾಪನೆ ಆಯಿತು. ಅದು ಕಾನೂನು ಬಾಹಿರ ಅಂತ ಗೊತ್ತಾದ ಮೇಲೆ: State Bank of India, Union Bank of India, Canara Bank, Corporation bank, IDBI bank, Pragathi Krishna Grameen Bank, Vijaya Bank and Syndicate Bank ಅಂತಹ ಸರಕಾರೀ ಮತ್ತು ಖಾಸಗೀ ಬ್ಯಾಂಕುಗಳಿಗೆ Business Correspondent and Business Facilitator ಆಗಿ ನಿರ್ವಹಿಸುವ ಒಂದು ಸಂಘ ಕಟ್ಟಲಾಯಿತು. ಸಾಲಕ್ಕಾಗಿ ಬ್ಯಾಂಕ್ ಮತ್ತು ಶ್ರಮಿಕರ ವರ್ಗದ ಮಧ್ಯೆ ದಲ್ಲಾಳಿ ಮಾಡುವುದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ರಾಥಮಿಕ ಕೆಲಸ.
ಪ್ರಶ್ನೆ: ಧರ್ಮಸ್ಥಳದವರ ಈ ಮೈಕ್ರೋ ಫೈನಾನ್ಸ್ ವ್ಯವಹಾರದ ರೀತಿ-ನೀತಿ ಹೇಗೆ, ಬಲಿಪಶುಗಳಾರು?
ಡಾ. ಸಂದೀಪ್: ಭೂರಹಿತ ಕಾರ್ಮಿಕರು ಮತ್ತು ಚಿಕ್ಕ ಹಿಡುವಳಿದಾರರೇ ಈ ವ್ಯವಹಾರದ ಗುರಿ. ಯಾಕೆಂದರೆ ಬಡವರಿಗೆ ಸಾಲ ಸಿಕ್ಕಿದ್ದೇ ಸಂತೋಷ. ಸಾಲಕ್ಕಾಗಿ ಅನೇಕರು ಈ ಸಂಘಕ್ಕೆ ಉತ್ಸಾಹದಿಂದ ಸೇರಿದರು. ಇದರ ಬಡ್ಡಿ ಎಷ್ಟು? ಬಡ ಭೂರಹಿತ ವರ್ಗಕ್ಕೆ ಧರ್ಮಸ್ಥಳದ ಒಟ್ಟು ಬಡ್ಡಿ ಶೇಕಡಾ 16.5ರಿಂದ 17. ಸಾಲಕ್ಕೆ ಕಟ್ಟುವ ಈ ಬಡ್ಡಿಯಲ್ಲಿ ಶೇ.5.25ರಷ್ಟು ದಲ್ಲಾಳಿ ಸಂಸ್ಥೆಗೆ ದಲ್ಲಾಳಿ ಶುಲ್ಕ. ಅಂದರೆ, ಬಡವರಿಗೆ ಸಿಗಬೇಕಾದ ಸಾಲಕ್ಕೆ ಶೇ.11ರಷ್ಟು ಬಡ್ಡಿ ಇದ್ದರೆ, ಅದಕ್ಕೆ ಶೇ.5.25ರಷ್ಟು ದಲ್ಲಾಳಿ ಶುಲ್ಕ ಸೇರಿಸಿ ಶೇ.16.5ರಿಂದ 17ರವರೆಗಿನ ಬಡ್ಡಿಯನ್ನು ಬಡವರು ಬ್ಯಾಂಕುಗಳಿಗೆ ಕಟ್ಟಬೇಕು. ಉದಾಹರಣೆಗೆ, ಒಂದು ಶ್ರಮಿಕ ಮಹಿಳೆಗೆ ಪುತ್ತೂರಿನಲ್ಲಿ ದಿನಕ್ಕೆ 350 ರೂಪಾಯಿ ಮಜೂರಿ. ಅಂದರೆ, ತಿಂಗಳಿಗೆ 10,000 ಗರಿಷ್ಠ ಉತ್ಪತ್ತಿ. ವರ್ಷಕ್ಕೆ 1,20,000 ರೂಪಾಯಿಗಳು. 2 ಲಕ್ಷ ಸಾಲ ಇದ್ದಲ್ಲಿ 34,000 ರೂಪಾಯಿ ಬಡ್ಡಿಗೆ ಹೋಯಿತು. ಆ 34 ಸಾವಿರ ರೂಪಾಯಿಯಲ್ಲಿ ಅಂದಾಜು 10 ಸಾವಿರ ರೂಪಾಯಿ ದಲ್ಲಾಳಿ ಸಂಸ್ಥೆಗೆ. ಅಂದರೆ, ವರ್ಷಕ್ಕೆ 3-4 ತಿಂಗಳು ದುಡಿದ ಹಣ ಬಡ್ಡಿಗೆ! ಉಳಿದದ್ದು ತನ್ನ ಸಾಲ ತೀರಿಸಲಿಕ್ಕೆ ಮತ್ತು ಜೀವನಕ್ಕೆ.
ಪ್ರಶ್ನೆ: ಇಷ್ಟಲ್ಲದೇ ಬೇರೆ ಏನಾದರೂ ಕಟ್ಟಬೇಕೇ?
ಡಾ. ಸಂದೀಪ್: ಇದಲ್ಲದೆ, ಸಾಲಕ್ಕೆ ಮತ್ತು ಆರೋಗ್ಯಕ್ಕೆ ವಿಮೆ ಕಡ್ಡಾಯ. ಅದಕ್ಕೆ ದುಬಾರಿ ವಿಮೆಯ ಕಂತು. ಈ ಸಂಘಕ್ಕೆ ಸೇರಿದ ಸದಸ್ಯರು ಒಂದಿಷ್ಟು ಹಣ ಉಳಿತಾಯ ಖಾತೆಯಲ್ಲಿ ಹೂಡಬೇಕು. ಆ ಉಳಿತಾಯದ ಹಣ ಆಂತರಿಕ ಸಾಲಕ್ಕೆ ಉಪಯೋಗಿಸುವಂತಿಲ್ಲ. ಇದು ಸಂಸ್ಥೆಯ ಪರವಾಗಿ ಬ್ಯಾಂಕುಗಳಿಗೆ ಸಾಲಕ್ಕೆ ಭದ್ರತೆಗಾಗಿ. ಇದಕ್ಕೆ ಸಿಗುವ ಬಡ್ಡಿ ಕೇವಲ ಶೇ.4. ಅಂದರೆ, ಬಡವರಿಂದ ಶೇಖರಿಸಿದ ದುಡ್ಡಿಗೆ ಬಡ್ಡಿ ಶೇ.4. ಬಡವರು ಸಾಲಕ್ಕೆ ಕಟ್ಟುವ ಬಡ್ಡಿ ಶೇ.16ರಿಂದ 17. ಅದರಲ್ಲಿ ದಲ್ಲಾಳಿ ಶುಲ್ಕ ಶೇ.5.25. ಹೀಗಿದೆ ಧರ್ಮಸ್ಥಳದವರ ವ್ಯಾಪಾರ! ಇದನ್ನು ಬಡವರು ಕಟ್ಟುವುದಾದರೂ ಹೇಗೆ? ಹೀಗೆ ಸಾಲ ತೀರಿಸದೆ, ಪ್ರತೀ ವರ್ಷ ಬಡ್ಡಿ ಮಾತ್ರ ಕಟ್ಟುತ್ತಾ ಇರುವ ಸಂಗತಿ ನನಗೆ ಇತ್ತೀಚಿಗೆ ಕೆಲವರಿಂದ ತಿಳಿಯಿತು. ಹಾಗಾದರೆ, ಚಾಲ್ತಿಯಲ್ಲಿರುವ ಬಡ್ಡಿ ದಕ್ಷಿಣ ಕನ್ನಡದಲ್ಲಿ ಎಷ್ಟು? ಭೂಮಾಲೀಕರಿಗೆ ಕೃಷಿ ಸಾಲಕ್ಕೆ ಶೇ.3 ಬಡ್ಡಿ. ಸರಕಾರೀ ಬ್ಯಾಂಕುಗಳಲ್ಲಿ ಸಾಲಕ್ಕೆ ಸಾಧಾರಣ ಶೇ.10 ಬಡ್ಡಿ ಈಗ ಚಾಲ್ತಿ. ಇದು ಭೂಮಾಲೀಕರಿಗೆ, ಭೂಮಿಯನ್ನು ಒತ್ತೆ ಇಟ್ಟು ಸಿಗುವ ಸಾಲ. ಭೂರಹಿತ ಕಾರ್ಮಿಕರಿಗೆ ಇದರ ಪ್ರಯೋಜನವೂ ಇಲ್ಲ. ಇನ್ನು ಸಹಕಾರಿ ಸಂಘಗಳಿಗೆ ಹೋದರೆ, ಶೇ.12 ಈಗ ಚಾಲ್ತಿ. ಇದು ಭೂರಹಿತ ಕಾರ್ಮಿಕರ ಮತ್ತೆ ಭೂಮಾಲಿಕರ ಬಗ್ಗೆ ಇರುವ ಸೌಕರ್ಯದ ವ್ಯತ್ಯಾಸ ತಿಳಿಯಲು ಒಂದು ಉದಾಹರಣೆ.
ಇದನ್ನು ಓದಿದ್ದೀರಾ?: ಮೈಕ್ರೋ ಫೈನಾನ್ಸ್ ಕಿರುಕುಳ: ಸರ್ಕಾರದ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರು
ಪ್ರಶ್ನೆ: ಹಾಗಾದರೆ, ಬೇರೆ ಕಡೆ ಗ್ರಾಮಾಭಿವೃದ್ಧಿ ಯೋಜನೆಗಳು ಹೇಗಿದೆ?
ಡಾ. ಸಂದೀಪ್: ಅಂಗನವಾಡಿ ಕೂಡ ಇಂತಹದ್ದೇ ಕಾರ್ಯಕ್ರಮ ಇಟ್ಟುಕೊಂಡಿದೆ. ವರ್ಷಕ್ಕೆ ಶೇ.3-4 ಬಡ್ಡಿ ಅಷ್ಟೇ. ಇದು ಸರಕಾರಿ ಪ್ರಾಯೋಜಿತ. ಇನ್ನು, ದಕ್ಷಿಣ ಕನ್ನಡದ ಹತ್ತಿರದ ಕಾಸರಗೋಡಿನಲ್ಲಿ ಹೇಗಿದೆ? ಕುಡುಂಬಶ್ರೀ ಯೋಜನೆಯಡಿಯಲ್ಲಿ ವರ್ಷಕ್ಕೆ 3 ಲಕ್ಷದವರೆಗೆ ಶೇ.4 ಬಡ್ಡಿ. ಅಂದರೆ, ಕಾಸರಗೋಡಿನಲ್ಲಿರುವ ಮಹಿಳೆ 2 ಲಕ್ಷ ಸಾಲಕ್ಕೆ 8 ಸಾವಿರ ಬಡ್ಡಿ ಕಟ್ಟುವಾಗ ದಕ್ಷಿಣ ಕನ್ನಡದ ಶ್ರಮಿಕರು 34 ಸಾವಿರ ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಕಟ್ಟುತ್ತಾರೆ ಮತ್ತು ಅದರಲ್ಲಿ 10 ಸಾವಿರ ರೂಪಾಯಿಗಳನ್ನು ಬ್ಯಾಂಕುಗಳು ವೀರೇಂದ್ರರ ಸಂಘಕ್ಕೆ ದಲ್ಲಾಳಿ ಶುಲ್ಕದ ರೂಪದಲ್ಲಿ ಕೊಡುತ್ತವೆ.
ಪ್ರಶ್ನೆ: ಬಡ್ಡಿ ವ್ಯವಹಾರದ ಜೊತೆಗೆ ಮಂಜುನಾಥ ದೇವರ ಸೇವೆಯೂ ಇದೆಯಂತಲ್ಲ?
ಡಾ. ಸಂದೀಪ್: ಹೌದು, ಇದೆ. ಇದೆಲ್ಲದರ ಮಧ್ಯೆ, ತಮ್ಮ ಕೆಲಸ ಬಿಟ್ಟು ತಿಂಗಳಿಗೊಮ್ಮೆ ಸಭೆ, ಸ್ಥಳೀಯ ಜಾತ್ರೆಗೆ ದೇಣಿಗೆ ಸಂಗ್ರಹಕ್ಕೆ, ಸ್ಥಳೀಯ ದೇವಸ್ಥಾನಕ್ಕೆ ಶ್ರಮದಾನಕ್ಕೆ ಈ ಶ್ರಮಿಕರನ್ನು ಉಪಯೋಗಿಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಯಿಂದ ಜನರು ಧರ್ಮಸ್ಥಳ ಮಂಜುನಾಥ ದೇವರ ಮೇಲೆ ಇರುವ ಭಕ್ತಿಯಿಂದ ಬರುತ್ತಾರೆ. ಬಡವರು ಮಾಡುವ ಈ ಕೆಲಸದಿಂದ ಧರ್ಮಸ್ಥಳಕ್ಕೆ ಮತ್ತಷ್ಟು ಪ್ರಚಾರ ಬಂದಂತಾಯಿತು. ಬಡವರು ಕಟ್ಟುವ ಬಡ್ಡಿಯಿಂದ ಬಂದ ಲಾಭದಿಂದ ಸ್ಥಳೀಯ ದೇವಸ್ಥಾನಕ್ಕೆ, ಅದರ ಮುಖ್ಯ ವ್ಯವಹಾರಿ ಬೆಳತಂಗಡಿಯ ವೀರೇಂದ್ರರ ಶಿಫಾರಿಸ್ಸಿನ ಮೇಲೆ ದೇಣಿಗೆಯೂ ಸಿಗಲು ಪ್ರಾರಂಭ ಆಯಿತು. ಆಗಲೂ ಒಂದು ವೇದಿಕೆ ಮತ್ತು ಪ್ರಚಾರಕ್ಕೆ ನಾಂದಿ. ಸ್ವಲ್ಪ ಶ್ರೀಮಂತ ದೇವಳ ಆದರೆ, ಅದಕ್ಕೆ ಮುಖ್ಯ ಅತಿಥಿ ಕೂಡ ವೀರೇಂದ್ರರೇ. ಅಲ್ಲಿಯೂ ಒಂದಿಷ್ಟು ಜನಸಂಪರ್ಕ ಮತ್ತು ಗಣ್ಯ ವ್ಯಕ್ತಿ ಪಟ್ಟ. ಪತ್ರಿಕೆಗಳಲ್ಲಿ ಹೆಸರು.
10-11 ವರ್ಷಗಳ ಹಿಂದೆ ನಾನು ‘ಹಾವು ಕಡಿತ ಸಮಸ್ಯೆ ಮತ್ತು ಅರಿವು’ ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಕೊಡಲು ಆಹ್ವಾನದ ಮೇಲೆ ಹೋಗಿದ್ದೆ. ಕಾರ್ಯಕ್ರಮ ಶುರು ಆದದ್ದು ಮಂಜುನಾಥ ದೇವರನ್ನು ಹಾಗೂ ವೀರೇಂದ್ರರನ್ನು ನೆನಪಿಸುತ್ತಾ. ಕಾರ್ಯಕ್ರಮ ಮುಕ್ತಾಯಗೊಂಡಾಗಲೂ ವೀರೇಂದ್ರರ ಬಗ್ಗೆ ಒಂದು ಚಿಕ್ಕ ಜಾಹೀರಾತು ಹೇಳಿ. ಹೀಗೆ, ಬಡವರ ದುಡ್ಡಿನಿಂದ ಬಡವರಿಗೆ ಜಾಹೀರಾತು ತೋರಿಸಿ, ಹೆಸರು ಮತ್ತು ಹಣ ಮಾಡುವ ದಲ್ಲಾಳಿ ವ್ಯವಹಾರ ಎಂದೆನಿಸುತ್ತದೆ. 15ರಿಂದ 20 ವರ್ಷಗಳ ಹಿಂದೆ ಸಾಲ ಪಡೆಯಲು ಕಷ್ಟಪಡುತ್ತಿದ್ದ ಈ ಶ್ರಮಿಕ ವರ್ಗ ಈಗ ಬಡ್ಡಿ ಕಟ್ಟಲು ಕಷ್ಟ ಪಡುತ್ತಿದೆ. ವ್ಯತ್ಯಾಸ ಇಷ್ಟೇ. ಭಾರತದಲ್ಲಿರುವ ಆರ್ಥಿಕ ಕುಸಿತ ಮತ್ತು ನಿರುದ್ಯೋಗ ಮತ್ತಷ್ಟು ಕಷ್ಟ ಕೊಡುತ್ತಿದೆ.
ಪ್ರಶ್ನೆ: ಹಾಗಾದರೆ, ಇದೆಲ್ಲ ಯಾರಿಗೂ ಗೊತ್ತಿಲ್ಲವೇ?
ಡಾ. ಸಂದೀಪ್: ಎಲ್ಲರಿಗೂ ಗೊತ್ತಿದೆ. ಬೆಳತಂಗಡಿಯ ನಾಗರಿಕ ಸೇವಾ ಟ್ರಸ್ಟ್ ಮತ್ತು ಅವರ ಬೆಂಬಲಿಗರಿಗೆ ಬಿಟ್ಟರೆ ಬೇರೆಯವರಿಗೆ ಎದ್ದು ಮಾತನಾಡುವ ಧೈರ್ಯ ಇಲ್ಲ. ಸಾಲಗಾರರಿಗೆ ಮಾತನಾಡುವ ಶಕ್ತಿ ಇಲ್ಲ. ಭೂಮಾಲೀಕರಿಗೆ ಅದರ ವಿರುದ್ಧ ಹೋರಾಡುವ ಅಗತ್ಯ ಇಲ್ಲ. ಭೂರಹಿತ ಕಾರ್ಮಿಕರ ಆಹಾರ ಅಭದ್ರತೆಯೇ ಭೂಮಾಲೀಕರಿಗೆ ಒಂದು ದೊಡ್ಡ ಲಾಭ. ಯಾಕೆಂದರೆ, ಹಸಿವೆಯಿಂದಾಗಿ ಅಗ್ಗದಲ್ಲಿ ಕೆಲಸಕ್ಕೆ ಜನ ಸಿಗುತ್ತಾರೆ. ಚುನಾವಣೆ ಬಂದಾಗ ತ್ವರಿತವಾಗಿ ಬೆಳತಂಗಡಿಗೆ ಹೋಗುವ ರಾಜಕಾರಣಿಗಳಿಗೆ, ಈ ಅವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ ಸಾಹಸ ಬೇಡದ ವಿಚಾರ.
ಇದನ್ನು ಓದಿದ್ದೀರಾ?: ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಸಹೋದರನ 7.59 ಎಕರೆ ಭೂ ಮಂಜೂರಾತಿ ರದ್ದುಗೊಳಿಸಿದ ನ್ಯಾಯಾಲಯ
ಈ ವ್ಯವಹಾರದಲ್ಲಿ ಸಿಕ್ಕಿಹಾಕಿಕೊಂಡವರಲ್ಲಿ ಹಿಂದುಳಿದ ವರ್ಗದ ಹಿಂದೂಗಳು ಬಹುಸಂಖ್ಯಾತರು. ದಕ್ಷಿಣ ಕನ್ನಡದ ಬಡ ಹಿಂದೂಗಳು ಕೋಮು ಗಲಭೆಯಲ್ಲಿ ಪೆಟ್ಟು ತಿನ್ನುತ್ತಾ, ಪೊಲೀಸ್ ಠಾಣೆ ಕೋರ್ಟ್ ಅಲೆಯುತ್ತಾ, ಧರ್ಮಸ್ಥಳಕ್ಕೆ ಭಕ್ತಿಯಿಂದ ಹೋಗುತ್ತಾ, ಸಾಲ-ಬಡ್ಡಿ ಕಟ್ಟುತ್ತಾ, ಹಿಂದುತ್ವದ ಉಳಿವಿಗಾಗಿ ಮತ ಹಾಕುತ್ತಾ ಬಂದಿರುವುದಕ್ಕೆ 30 ವರ್ಷಗಳಾಯಿತು. ಅದೇ ಹಿಂದುತ್ವದ ಗುತ್ತಿಗೆ ಪಡೆದಿರುವಂತೆ ನಟಿಸುವ ರಾಷ್ಟ್ರೀಯ ಸ್ವಯಂ ಸೇವಕ ಸರಸಂಘಚಾಲಕರಿಂದ ಹಿಡಿದು, ಪ್ರಧಾನ ಮಂತ್ರಿಗಳವರೆಗೆ ಎಲ್ಲರೂ ಬೆಳತಂಗಡಿ ವೀರೇಂದ್ರರೊಟ್ಟಿಗೆ ಹೊಂದಾಣಿಕೆಯಲ್ಲಿ ಇರುವವರೇ. ಹಾಗಾಗಿ ಈ ಬಡ ಹಿಂದುಗಳಿಗೆ ಒಂದು ಪರಿಣಾಮಕಾರಿ ಪರಿಹಾರ ಸಿಗುತ್ತಿಲ್ಲ. ಇದರಿಂದ ಗ್ರಾಮಾಭಿವೃದ್ಧಿ ಹೇಗೆ ಸಾಧ್ಯ? ಹೇಳಿ.
ಪ್ರಶ್ನೆ: ಪರಿಹಾರವೇನು?
ಡಾ. ಸಂದೀಪ್: ಬಡವರ ಉದ್ಧಾರ ಆಗಬೇಕಾದರೆ, ಸ್ಥಳೀಯ ಶಾಸಕರು ದಳ್ಳಾಳಿಗಳನ್ನು ಹೊರಗಿಟ್ಟು ಕುಡುಂಬಶ್ರೀ ಅಂತಹ ಶಾಸನಗಳನ್ನು ಮಾಡಬೇಕು. ಆದರೆ ದಳ್ಳಾಳಿಗಳೊಂದಿಗೆ ನಿಕಟ ಸಂಪರ್ಕ ಇದ್ದವರನ್ನು ಶಾಸಕಾಂಗಕ್ಕೆ ಆಯ್ಕೆ ಮಾಡುವುದರಿಂದ ಇದು ಸಾಧ್ಯ ಇಲ್ಲ. ಉದ್ರೇಕಿಸುವ ಭಾಷಣಕ್ಕೆ, ಕೋಮುಗಲಭೆ ಪ್ರಚೋದನೆಗೆ ಮತ್ತು ಉದ್ಘಾಟನೆಗೆ ಸೀಮಿತವಾಗಿರುವ ಶಾಸಕರನ್ನು ಎಬ್ಬಿಸಿ ಅವರ ಸಂಬಳಕ್ಕೆ ಮಾಡಬೇಕಾದ ಕೆಲಸವನ್ನು ನೆನಪಿಸಿ ಕೊಡುವ ಕೆಲಸ ಪ್ರಜೆಗಳು ಮಾಡಬೇಕಾಗಿದೆ. ಸರಕಾರೀ ಶಾಲೆಗಳ ದುಸ್ಥಿತಿ, ಸರಕಾರೀ ಆರೋಗ್ಯ ಇಲಾಖೆಯಲ್ಲಿರುವ ಬಜೆಟ್ ಕೊರತೆ, ಆಹಾರ ಅಭದ್ರತೆ, ಇವೆಲ್ಲ ಎದುರಿಸುತ್ತಾ ಬರುವ ಈ ಶ್ರಮಿಕರ ಮಕ್ಕಳು ದೊಡ್ಡವರಾದಾಗ ಬಡವರಾಗಿಯೇ ಉಳಿಯಬೇಕೇ ಅಥವಾ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಬೇಕೇ ಎಂಬುದರತ್ತ ಯೋಚಿಸಬೇಕಾಗಿದೆ.