- ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದ ಸಿದ್ದರಾಮಯ್ಯ
- ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿದಿವೆ ಎಂದ ಡಿಕೆ ಶಿವಕುಮಾರ್
ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲ್ಲ. ಈ ಬಾರಿ ಬರುವುದು ಕಾಂಗ್ರೆಸ್‌ನ ಸ್ವತಂತ್ರ ಸರ್ಕಾರ ಎನ್ನುವುದು ಕಾಂಗ್ರೆಸ್‌ನ ಜೋಡೆತ್ತುಗಳೆಂದು ಕರೆಯಿಸಿಕೊಳ್ಳುವ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಸ್ಪಷ್ಟ ನುಡಿಗಳು.
ಇಂದು (ಮೇ11) ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ, ಪಕ್ಷ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 130ರಿಂದ 150 ಸ್ಥಾನ ಗೆಲ್ಲುತ್ತೆ. ಕರಾವಳಿ ಭಾಗದಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ನಾನು ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವುದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ. ಹಾಗೆಯೇ ನಾನು ವರುಣಾದಲ್ಲಿ ದೊಡ್ಟ ಅಂತರದ ಗೆಲುವು ಪಡೆಯುವೆ ಎಂದರು.
ಈ ಸುದ್ದಿ ಓದಿದ್ದೀರಾ?:ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ
ಇತ್ತ ಬೆಂಳೂರಿನಲ್ಲಿ ಮಾತನಾಡಿದ ಡಿಕೆಶಿ, ನಮ್ಮ ಗ್ಯಾರಂಟಿಗಳ ಮೇಲೆ ರಾಜ್ಯದ ಜನ ನಂಬಿಕೆ ಇಟ್ಟಿದ್ದಾರೆ. ಎಲ್ಲಾ ವರ್ಗದ ಜನರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ರಾಜ್ಯಾದ್ಯಂತ ಜನರು ಬದಲಾವಣೆ ಬಯಸಿದ್ದಾರೆ. ಹಳೆ ಮೈಸೂರು ಭಾಗದಲ್ಲೂ ಜನ ಬದಲಾವಣೆ ಬಯಸಿದ್ದಾರೆ ಎಂದರು.
ಕಾಂಗ್ರೆಸ್ 141 ಸ್ಥಾನ ಗೆಲ್ಲುವ ವಿಶ್ವಾಸವಿದೆ, ಹೀಗಾಗಿ ಆಪರೇಷನ್ ಹಸ್ತದ ಅವಶ್ಯಕತೆ ನಮಗೆ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.