ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಮಾಡಿದ ‘ಅಲೆದಾಡುವ ಆತ್ಮ’ ಹೇಳಿಕೆಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸಂಸ್ಥಾಪಕ ಶರದ್ ಪವಾರ್ ಅವರು ತಿರುಗೇಟು ನೀಡಿದ್ದಾರೆ. ತನ್ನನ್ನು ತಾನು ‘ಅಲೆದಾಡುವ ಆತ್ಮ’ ಎಂದು ಕರೆದುಕೊಂಡಿರುವ ಶರದ್ ಪವಾರ್, “ಈ ‘ಅಲೆದಾಡುವ ಆತ್ಮ’ ನಿಮ್ಮನೆಂದಿಗೂ ಬಿಡದು” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಅಹಮದ್‌ನಗರದಲ್ಲಿ (ಅಹಲ್ಯಾ ನಗರ) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎನ್‌ಸಿಪಿಯ ಮುಖ್ಯಸ್ಥ ಶರದ್ ಪವಾರ್ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸುವ ಬಗ್ಗೆ ಪಿಎಂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
“ದೇಶದ ಜನರು ಅವರಿಗೆ (ಪಿಎಂ ಮೋದಿ) ಬಹುಮತ ನೀಡಲಿಲ್ಲ, ಅವರು ಸರ್ಕಾರ ರಚಿಸುವಾಗ, ಅವರು ಸಾಮಾನ್ಯ ಜನರ ಒಪ್ಪಿಗೆ ಪಡೆದಿದ್ದಾರೆಯೇ? ಅವರು ಬಿಹಾರದ ಮುಖ್ಯಮಂತ್ರಿ (ನಿತೀಶ್ ಕುಮಾರ್) ಅವರ ಸಹಾಯವನ್ನು ತೆಗೆದುಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಎಲ್ಲಿ ಹೋದರೂ ಕೂಡಾ ಭಾರತ ಅಥವಾ ಭಾರತ ಸರ್ಕಾರ ಎಂದು ಹೇಳಿಲ್ಲ. ಬರೀ ಮೋದಿ ಸರ್ಕಾರ, ಮೋದಿಯ ಗ್ಯಾರಂಟಿ ಎಂದು ಹೇಳಿಕೊಂಡು ಬಂದಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆಗೆ ಸಿದ್ಧರಾಗಿರಿ: ಎನ್‌ಸಿಪಿ ಕಾರ್ಯಕರ್ತರಿಗೆ ಶರದ್ ಪವಾರ್ ಸೂಚನೆ
“ಆದರೆ ಜನರು (ಚುನಾವಣೆಯಲ್ಲಿ) ತಾವು ಇಂಡಿಯಾ ಒಕ್ಕೂಟದೊಂದಿಗೆ ಇದ್ದೇವೆ ಎಂದು ಸಾಬೀತುಪಡಿಸಿದ್ದಾರೆ. ಪ್ರಧಾನಿ ಮೋದಿ ಇಲ್ಲಿಗೆ ಬಂದು ನಾನು ಅಲೆದಾಡುವ ಆತ್ಮ ಎಂದು ಹೇಳಿದರು. ಆದರೆ ಈ ಅಲೆದಾಡುವ ಆತ್ಮ ಉಳಿಯುತ್ತದೆ. ಅದು ನಿಮ್ಮನ್ನು ಎಂದಿಗೂ ಬಿಡುವುದಿಲ್ಲ” ಎಂದು ಹೇಳಿದರು.
ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಅವರು ಶರದ್ ಪವಾರ್ ಮೇಲೆ ವಾಗ್ದಾಳಿ ನಡೆಸಿದ್ದು ಶರದ್ ಪವಾರ್ ಅವರನ್ನು ‘ಅಲೆದಾಡುವ ಆತ್ಮ’ ಎಂದು ಕರೆದಿದ್ದರು. ಹಾಗೆಯೇ ಮಹಾರಾಷ್ಟ್ರದ ರಾಜಕೀಯ ಅಸ್ಥಿರತೆಯ ಬಗ್ಗೆ ದೂಷಿಸಿದ್ದರು. “ಮಹಾರಾಷ್ಟ್ರದಲ್ಲಿ ಅಲೆದಾಡುವ ಆತ್ಮ 45 ವರ್ಷಗಳ ಹಿಂದೆ ಅಸ್ಥಿರತೆಗೆ ಕಾರಣವಾಗಿದೆ. ಈಗ ಈ ವ್ಯಕ್ತಿ ದೇಶವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ.