ಸಂಸತ್ತಿನ ಉಭಯ ಸದನಗಳಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಿದ ಕುರಿತು ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಸಂಸದರನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವವರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಅವರು ಮಾತನಾಡಿದರು. “ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷವು ಹಲವಾರು ಪಾಠಗಳನ್ನು ಕಲಿತಿದೆ. ಆ ಪಾಠಗಳ ಜೊತೆಗೆ 2024ರ ಲೋಕಸಭೆ ಚುನಾವಣೆಯತ್ತ ಗಮನ ಹರಿಸಬೇಕು” ಎಂದು ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ.
“ತೆಲಂಗಾಣ ಹೊರತುಪಡಿಸಿ ಐದು ರಾಜ್ಯಗಳ ಚುನಾವಣೆಯ ಫಲಿತಾಂಶಗಳು ನಿರಾಶಾದಾಯಕವಾಗಿವೆ. ಫಲಿತಾಂಶಗಳ ಕುರಿತು ಕಾಂಗ್ರೆಸ್ ಪ್ರಾಥಮಿಕ ವಿಶ್ಲೇಷಣೆಯನ್ನು ನಡೆಸಿದೆ. ಪಕ್ಷದ ಕಾರ್ಯಕ್ಷಮತೆಯ ಹಿಂದಿನ ಕಾರಣಗಳನ್ನು ಗುರುತಿಸಿದೆ” ಎಂದು ಹೇಳಿದ್ದಾರೆ.
“ಫಲಿತಾಂಶಗಳ ಹೊರತಾಗಿಯೂ, ಸೋತ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪಡೆದಿರುವ ಮತ ಹಂಚಿಕೆಯು ಕೆಲವು ಸಕಾರಾತ್ಮಕ ಭರವಸೆಗಳನ್ನು ನೀಡಿದೆ. ಇದು ನಮಗೆ ಒಂದು ನಿರ್ದಿಷ್ಟ ಭರವಸೆಯನ್ನು ಹುಟ್ಟುಹಾಕಿದೆ. ಸರಿಯಾಗಿ ಗಮನ ಹರಿಸಿದರೆ ನಾವು ಖಂಡಿತವಾಗಿಯೂ ಯಶಸ್ಸು ಗಳಿಸಬಹುದು” ಎಂದು ಖರ್ಗೆ ತಿಳಿಸಿದ್ದಾರೆ.