ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಬೇಕು, ಆ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ಕೇಂದ್ರ ಸರಕಾರ ಸಹಕಾರ ನೀಡಬೇಕು ಎನ್ನುವುದು ಆ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಆರಂಭವಾದ ಅನಿರ್ಧಿಷ್ಟಾವಧಿ ಹೋರಾಟ ಫೆ.5ಕ್ಕೆ ಸಾವಿರ ದಿನಗಳಿಗೆ ಕಾಲಿಟ್ಟಿದೆ.
ರಾಯಚೂರು ಏಮ್ಸ್ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಸಾವಿರ ದಿನಗಳ ಹೋರಾಟ ಕುರಿತಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಹಲವಾರು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು, ಸಂಘಟನೆಗಳು ಮಾಡಿರುವ ಮನವಿ ಇಲ್ಲಿಯವರೆಗೂ ಕೇಂದ್ರ ಸರಕಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ” ಎಂದರು.
“ರಾಯಚೂರಿನ ಮೇಲೆ ಕೇಂದ್ರ ಸರ್ಕಾರದಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಅನ್ಯಾಯವಾಗುತ್ತಲೇ ಬರುತ್ತಿದೆ. ಸಂವಿಧಾನದ ಆಶಯದಂತೆ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದು ಕೇಂದ್ರ ಸರಕಾರದ ಕರ್ತವ್ಯ. ಆದರೆ, ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಕ್ಕೂಟ ವ್ಯವಸ್ಥೆಯೇ ತಲೆಕೆಳಗಾಗಿದೆ” ಎಂದು ಟೀಕಿಸಿದರು.

“2003 ರಲ್ಲಿ ಜಾರಿಯಾದ PMSSY ಪ್ರಧಾನ ಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆ, ಆರೋಗ್ಯ ಕ್ಷೇತ್ರದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಿಸುವ ನಿಟ್ಟಿನಲ್ಲಿ ಜಾರಿಯಾದ ಯೋಜನೆ. ದೇಶದ ವಿವಿಧ ಭಾಗಗಳಲ್ಲಿ ಏಮ್ಸ್ ಆಸ್ಪತ್ರೆಗಳನ್ನು ಪ್ರಾರಂಭಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು. ಈ ಯೋಜನೆಯ ಅಡಿಯಲ್ಲಿ ಈಗಾಗಲೇ ದೇಶದ 22 ರಾಜ್ಯಗಳಲ್ಲಿ ಕೇಂದ್ರ ಸರಕಾರ ಏಮ್ಸ್‌ಗಳನ್ನು ಮಂಜೂರುಗೊಳಿಸಿದೆ. ಇದೇ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯದ ರಾಯಚೂರಿಗೆ ಏಮ್ಸ್ ಮಂಜೂರುಗೊಳಿಸುವಂತೆ ಆಗ್ರಹಿಸಲಾಗುತ್ತಿದೆ” ಎಂದು ತಿಳಿಸಿದರು.
“ಕರ್ನಾಟಕದ ಬಗ್ಗೆ ಈ ಮಲತಾಯಿ ವರ್ತನೆ ಏಕೆ? ಏಮ್ಸ್ ಕೇವಲ ಆಸ್ಪತ್ರೆಯಲ್ಲ – ಇದು ಪ್ರಮುಖ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಾಗಿದೆ ಮತ್ತು ರಾಯಚೂರು ಏಮ್ಸ್ ಪಡೆಯಲು ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ. ಕನ್ನಡಿಗರ ಕಡೆಗಿನ ಈ ತಾರತಮ್ಯ ಸರಿಯಲ್ಲ. ಕೇಂದ್ರ ಸರಕಾರ ಕರ್ನಾಟಕ ರಾಜ್ಯವು ತನ್ನ ಹಕ್ಕಿಗಾಗಿ ನಿರಂತರವಾಗಿ ಹೋರಾಟ ಮಾಢುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಇತರ ರಾಜ್ಯಗಳಲ್ಲಿ ಏಮ್ಸ್ ಮಂಜೂರು ಮಾಡಿದಂತೆ ರಾಯಚೂರಿನ ಬಗ್ಗೆಯೂ ತಕ್ಷಣದ ನಿರ್ಧಾರವನ್ನು ಕೈಗೊಳ್ಳುತಂತೆ ನಾವು ಒತ್ತಾಯಿಸುತ್ತೇವೆ. ಕರ್ನಾಟಕದ ಜನರು ಈ ರೀತಿಯ ಅನ್ಯಾಯವನ್ನು ಇನ್ಮುಂದೆ ಸಹಿಸುವುದಿಲ್ಲ” ಎಂದು ಎಚ್ಚರಿಸಿದರು.
“ಬಿಜೆಪಿ ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ರಾಯಚೂರಿನ ಜಿಲ್ಲೆಯ ಬಗ್ಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಎಲ್ಲಾ ಮಾಹಿತಿಯಿದೆ. ನಮ್ಮ ರಾಜ್ಯದ ನಾಲ್ಕೂ ಜನ ಕೇಂದ್ರ ಸಚಿವರು ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. ರಾಜ್ಯ ಬಿಜೆಪಿ ನಾಯಕರು ಆ ಭಾಗದ ಜನರ ಅಪೇಕ್ಷೆ ಹಾಗೂ ಅಭ್ಯದಯಕ್ಕಾಗಿ ಮುತುವರ್ಜಿವಹಿಸಬೇಕು. ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಮಂಜೂರು ಮಾಡುವಂತೆ ಜನರು ನಡೆಸುತ್ತಿರುವ ಹೋರಾಟ ಇಂದು ಸಾವಿರ ದಿನಕ್ಕೆ ಕಾಲಿಟ್ಟಿದೆ. ಇದನ್ನು ಪರಿಗಣಿಸಿ ಕೇಂದ್ರ ಸರಕಾರ ತಕ್ಷಣ ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕು. ಇಲ್ಲದಿದ್ದಲ್ಲಿ ಈ ಅನ್ಯಾಯದ ವಿರುದ್ದ ಕರ್ನಾಟಕದ ಜನತೆ ಕೇಂದ್ರ ಸರಕಾರದ ವಿರುದ್ದ ಹೋರಾಟ ನಡೆಸಲಿದೆ” ಎಂದು ಹೇಳಿದರು.