ಬಿಗ್‌ಬಾಸ್‌ನ ಸ್ಪರ್ಧಿ ವರ್ತೂರು ಸಂತೋಷ್ ಅವರ ಬಂಧನದ ಬಳಿಕ ಹುಲಿ ಉಗುರು, ಹಲ್ಲು, ಚರ್ಮ ಬಳಕೆ ಮಾಡುತ್ತಿರುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ತೊಡಗಿದ್ದಾರೆ.
ಇದರ ಭಾಗವಾಗಿಯೇ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿ ಆಧರಿಸಿ ರಾಜ್ಯದ ವಿವಿಧೆಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಅಲ್ಲದೇ, ಬುಧವಾರ ನಟ, ಬಿಜೆಪಿ ಸಂಸದ ಜಗ್ಗೇಶ್ ಅವರ ಮನೆಯಲ್ಲಿ ಶೋಧ ನಡೆಸಿದ ವೇಳೆ ಹುಲಿ ಉಗುರು ಇದ್ದ ಲಾಕೆಟ್ ಅನ್ನು ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು.
‘ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ’ ಎಂದಿದ್ದ ಜಗ್ಗೇಶ್
ಆ ಬಳಿಕ ಟ್ವೀಟ್ ಮಾಡಿದ್ದ ಜಗ್ಗೇಶ್, ‘ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಇದು ಎಂದು ತಿಳಿಸಿದ್ದೇನೆ. ಎಷ್ಟೋ ದೋಚುವ ಮನುಷ್ಯರು, ದೇಶದ್ರೋಹಿಗಳು, ಕೊಲೆ ಪಾತಕರು, ಸಮಾಜ ಘಾತಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆ ತಗ್ಗಿಸುವ ಯಾವ ಕೆಲಸವೂ ಮಾಡಿಲ್ಲ, ಮಾಡೋದೂ ಇಲ್ಲ’ ಎಂದಿದ್ದರು.
‘ಒಂದು ವಿಷಯ ಅದ್ಭುತವಾಗಿ ಅರಿತೆ. ಪ್ರೀತಿಸುವವರು 1000 ಜನ ಇದ್ದರೂ ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೇ ಇರುತ್ತಾರೆ. ಒಂದು ವಿಷಯ ನೆನಪಿಟ್ಟುಕೊಳ್ಳಿ. ಒಳ್ಳೆಯ ಗುಣ, ನಡತೆ ಇದ್ದಾಗ ಕೊಲ್ಲೋಕೆ ಸಾವಿರ ಮಂದಿ ಬಂದರೂ ಕಾಯಲು ಒಬ್ಬ ಬರುತ್ತಾನೆ. ಅವನೇ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದನ್ನು ಮಾಡಿ. ಅನ್ಯರಿಗೆ ಕೆಡುಕು ಬಯಸಿ ಬಾಳಿದರೆ ನಾಶ’ ಎಂದು ಅವರು ಬರೆದಿದ್ದಾರೆ.
ಮನೆಯಲ್ಲಿ ಶೋಧ ನಡೆಸಿದ ವೇಳೆ ಅರಣ್ಯಾಧಿಕಾರಿಗಳಿಗೆ ಲಾಕೆಟ್ ತಾವಾಗಿಯೇ ಒಪ್ಪಿಸಿದ ಬಳಿಕ, ಅಧಿಕಾರಿಗಳ ವಿರುದ್ಧವೇ ಹೈಕೋರ್ಟಿಗೆ ಜಗ್ಗೇಶ್ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ನೋಟಿಸ್ ನೀಡದೆ ಮನೆ ಶೋಧ ಮಾಡಿದ್ದಾರೆ ಎಂದು ದೂರಿದ್ದಾರೆ.
‘ಪೂರ್ತಿ ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದ ಮಾತನ್ನಾಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರವೆಂದು ಘೋಷಿಸಬೇಕು’ ಎಂಬುದಾಗಿ ಜಗ್ಗೇಶ್ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
‘ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಪಡಿಸಬೇಕು. ನೋಟಿಸ್ಗೆ ಉತ್ತರಿಸುವ ಮೊದಲೇ 14 ಅಧಿಕಾರಿಗಳಿಂದ ದಾಳಿ ನಡೆದಿದೆ. ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು’ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
‘ಹುಲಿಯಂತೆ ಇರಬೇಕು’ ಎಂದು ಅಮ್ಮ ಕೊಟ್ಟಿದ್ದ ಹುಲಿ ಉಗುರು!
ಜಗ್ಗೇಶ್ ಅವರು 20ನೇ ವಯಸ್ಸಿನಲ್ಲಿದ್ದಾಗ ಅವರ ತಾಯಿ ಹುಲಿಯ ಉಗುರಿನ ಪೆಂಡೆಂಟ್ನ ಗಿಫ್ಟ್ ಆಗಿ ನೀಡಿದ್ದರು. ನನ್ನ ಮಗ ಹುಲಿಯಂತೆ ಇರಬೇಕು ಎಂದು ಅಮ್ಮ ಕೊಟ್ಟಿರುವುದಾಗಿ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆ, ಜಗ್ಗೇಶ್ ತನ್ನ ಕೊರಳಲ್ಲಿದ್ದ ಲಾಕೆಟ್ ಅನ್ನು ತೋರಿಸಿದ್ದರು. ಬಹಿರಂಗವಾಗಿ ಹುಲಿ ಉಗುರು ತನ್ನಲ್ಲಿರುವುದಾಗಿ ಘೋಷಿಸಿಕೊಂಡಿದ್ದರು.
ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಸುದ್ದಿ ಹೊರ ಬೀಳುತ್ತಿದ್ದಂತೆಯೇ, ಜಗ್ಗೇಶ್ ಬಳಿಯೂ ಹುಲಿ ಉಗುರು ಇದೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು.