ಬಿಎಸ್‌ಪಿ ಮುಖ್ಯಸ್ಥೆ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಉದಿತ್ ರಾಜ್ ವಿವಾದವನ್ನು ಸೃಷ್ಟಿಸಿದ್ದಾರೆ. “ಮಾಯಾವತಿ ಸಾಮಾಜಿಕ ಚಳವಳಿಯ ಕತ್ತು ಹಿಸುಕಿ ದಮನ ಮಾಡಿದ್ದಾರೆ. ಈಗ ಅವರ ಕತ್ತು ಹಿಸುಕುವ ಸಮಯ” ಎಂದು ಹೇಳಿದ್ದಾರೆ.
ಸೋಮವಾರ ಲಕ್ನೋದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಾಜ್, “ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನ ಭಗವಂತ ಕೃಷ್ಣನ ಬಳಿ ತನ್ನ ಸಂಬಂಧಿಕರನ್ನು ಹೇಗೆ ಕೊಲ್ಲಲಿ ಎಂದು ಪ್ರಶ್ನಿಸಿದರು. ಆಗ ‘ಸೋದರ ಸಂಬಂಧಿ ಮತ್ತು ಸಂಬಂಧಿಕರು ಎಂಬುದು ಯಾವುದೂ ಇಲ್ಲ. ಕೇವಲ ನ್ಯಾಯಕ್ಕಾಗಿ ಹೋರಾಡು, ನಿಮ್ಮವರನ್ನೇ ಕೊಲ್ಲು’ ಎಂದು ಕೃಷ್ಣ, ಅರ್ಜುನನಿಗೆ ಹೇಳಿದ್ದರು” ಎಂದು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಚೀನಾ ನಮ್ಮ ಶತ್ರು ರಾಷ್ಟ್ರವೆಂದು ಭಾವಿಸಬಾರದು: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಈ ವೇಳೆಯಲ್ಲೇ, “ಇಂದು ನನ್ನ ಕೃಷ್ಣ ನಿನ್ನ ಶತ್ರುಗಳನ್ನು ಮೊದಲು ಕೊಲ್ಲು ಎಂದು ಹೇಳಿದ್ದಾರೆ. ಹಾಗಾಗಿ ಸಾಮಾಜಿಕ ನ್ಯಾಯದ ಶತ್ರು, ಸಾಮಾಜಿಕ ಚಳವಳಿಯ ಕತ್ತು ಹಿಸುಕಿ ದಮನ ಮಾಡಿದ ಮಾಯಾವತಿಯ ಕತ್ತು ಹಿಸುಕುವ ಸಮಯ ಇದಾಗಿದೆ” ಎಂದು ಉದ್ರೇಕಕಾರಿ ಹೇಳಿಕೆ ನೀಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
“ಮಾಯಾವತಿಯ ಕ್ರೂರತೆ, ಅಸಮರ್ಥತೆ ಹೊರತಾಗಿಯೂ ಕಾರ್ಯಕರ್ತರು ಮತ್ತು ಮತದಾರರು ಹೋರಾಟ ಮುಂದುವರಿಸಿದರು. ಕಾರ್ಯಕರ್ತರ ಮನೆಗಳನ್ನು ಮಾರಾಟ ಮಾಡಲಾಗಿದೆ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕಿಲ್ಲ. ಅವರನ್ನು ಕ್ರೂರವಾಗಿ ನೋಡಲಾಗಿದೆ. ಆದರೂ ಬಹುಜನ ರಾಜ್ಯಕ್ಕಾಗಿ ಅವರು ತಮ್ಮ ಸಂಘರ್ಷವನ್ನು ಮುಂದುವರಿಸಿದರು” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಹಾಗೆಯೇ ಮುಸ್ಲಿಂ ಸಮುದಾಯದ ಸದ್ಯದ ಸ್ಥಿತಿಯ ಬಗ್ಗೆ ಮಾತನಾಡಿದ ಉದಿತ್ ರಾಜ್, “ಈ ಹಿಂದೆ ದಲಿತರು ಕೆಟ್ಟ ಸ್ಥಿತಿಯಲ್ಲಿ ಇದ್ದಂತೆ ಇಂದು ಮುಸ್ಲಿಂ ಸಮುದಾಯವು ಕೆಟ್ಟ ಸ್ಥಿತಿಯಲ್ಲಿದೆ. ಈ ಸ್ಥಿತಿಯ ವಿರುದ್ಧವಾಗಿ ಮುಸ್ಲಿಂ ಸಮುದಾಯ ಮಾತ್ರ ಪ್ರತ್ಯೇಕವಾಗಿ ಹೋರಾಡಲು ಸಾಧ್ಯವಿಲ್ಲ. ದಲಿತರು ಕೂಡ ಪ್ರತ್ಯೇಕ ಹೋರಾಡಲಾಗದು. ಮುಸ್ಲಿಂ ಸಮುದಾಯ ತಮ್ಮ ಸಮಸ್ಯೆಯ ಬಗ್ಗೆ ಮಾತನಾಡಿದಾಗ ಅದಕ್ಕೆ ಕೋಮುವಾದದ ಬಣ್ಣ ಹಚ್ಚಲಾಗುತ್ತದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಮಾಯಾವತಿಯವರು ಒಳಮೀಸಲಾತಿ ತೀರ್ಪು ವಿರೋಧಿಸಿದ್ದಕ್ಕೆ ಬಿಎಸ್‌ಪಿಗೆ ರಾಜೀನಾಮೆ: ಕೆ ಬಿ ವಾಸು ಸ್ಪಷ್ಟನೆ
ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಮಚಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಉದಿತ್ ರಾಜ್ ಅವರು 2019ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡವರು. 2003ರ ನವೆಂಬರ್‌ನಲ್ಲಿ ತನ್ನ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಇಂಡಿಯನ್ ಜಸ್ಟಿಸ್ ಪಾರ್ಟಿ ಸ್ಥಾಪಿಸಿದ ರಾಜ್, ಬಳಿಕ 2014ರ ಫೆಬ್ರವರಿಯಲ್ಲಿ ಐಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ರಾಜ್ 2014 ಮತ್ತು 2019ರಲ್ಲಿ ಲೋಕಸಭೆ ಸಂಸದರಾಗಿದ್ದು, 2014ರಲ್ಲಿ ಬಿಜೆಪಿ ಟಿಕೆಟ್‌ನಿಂದ 2019ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
