- ಈಗ ನಾನು ಖಾಸಗಿಯಾಗಿ ವಿದೇಶಿ ಪ್ರವಾಸಕ್ಕೆ ಹೋಗಿದ್ದೆ ಅಷ್ಟೇ
- ಇಲಾಖೆಗಳ ವಿಲೀನಕ್ಕೆ 10 ವರ್ಷದ ಹಿಂದೆಯೇ ವರದಿ ಕೊಟ್ಟಿದ್ದಾರೆ
ಮುಂದೆ ಸಮಯ ಬಂದಾಗ ಶಾಸಕರು ಮತ್ತು ಮಾಜಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣ. ಮುಂದೊಂದು ದಿನ ಆ ಸಮಯ ಬರಲಿದೆ. ಈಗ ನಾನು ಖಾಸಗಿಯಾಗಿ ಪ್ರವಾಸಕ್ಕೆ ಹೋಗಿದ್ದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಕೊರತೆಯಾಗಿದ್ದಕ್ಕೆ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿ, “ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲ. ಹಾಗಾಗಿ ಈ ಇಲಾಖೆಗಳನ್ನು ವಿಲೀನಗೊಳಿಸುವ ಬಗ್ಗೆ 10 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಈ ರೀತಿ ಹಿಂದಿನ ಸರ್ಕಾರಗಳಲ್ಲೂ ವಿಲೀನ ಪ್ರಕ್ರಿಯೆ ನಡೆದಿವೆ. ಗ್ಯಾರಂಟಿ ಯೋಜನೆಗಳಿಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದರು.
ಕಾಂತರಾಜ್ ಆಯೋಗದ ವರದಿಯಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆಯೇ? ಎಂಬುದಕ್ಕೆ ಪ್ರತಿಕ್ರಿಯಿಸಿ, “ಈ ವರದಿ ನೀಡಲು ಇನ್ನೂ ಎರಡು ತಿಂಗಳು ಸಮಯಾವಕಾಶ ಕೇಳಿದ್ದಾರೆ. ವರದಿ ಬಂದ ಬಳಿಕ ನೋಡೋಣ. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈ ಬಗ್ಗೆ ಚರ್ಚಿಸುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ
ಕಾಂತರಾಜ್ ಆಯೋಗದ ವರದಿ ಜಾರಿಯಾದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆಯಾಗುತ್ತದೆಯೇ ಎಂದು ಪ್ರಶ್ನಿಸಿದಾಗ, “ಆಯೋಗದವರು ನಮಗೆ ಇನ್ನೂ ವರದಿಯನ್ನೇ ಕೊಟ್ಟಿಲ್ಲ. ವರದಿ ನೀಡಿದ ನಂತರ, ಅದರ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ಸುದೀರ್ಘ ಪ್ರಕ್ರಿಯೆ ಬಾಕಿ ಇದೆ” ಎಂದು ತಿಳಿಸಿದರು.
ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ವಿಚಾರವಾಗಿ ಮಾತನಾಡಿ, “ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಎಲ್ಲ ರೀತಿಯ ಸಿದ್ಧತೆ ಮಾಡಿದ್ದಾರೆ. ಈ ಬಾರಿಯ ಅಧಿವೇಶನ ಯಾವ ತೊಂದರೆಯಿಲ್ಲದೆ, ಸುಗಮವಾಗಿ ನಡೆಯಲಿದೆ. ಅಧಿವೇಶನದ ವೇಳೆ ಪ್ರತಿಭಟನೆ ಮಾಡುವವರಿಗೆ ಬೇಡ ಎನ್ನಲಾಗದು. ಆಯಾ ಇಲಾಖೆ ಸಚಿವರು ಮೊದಲೇ ಅವರ ಅಹವಾಲುಗಳನ್ನು ಸ್ವೀಕರಿಸಿದರೆ, ಪ್ರತಿಭಟನೆಗಳು ಸ್ವಲ್ಪ ಕಡಿಮೆ ಆಗಬಹುದು” ಎಂದರು.