ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆ ಜಾರಿಗೆ ಸಾಕಾಗುವಷ್ಟು ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆ 5 ಕೆ.ಜಿ ಅಕ್ಕಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, 10 ಕೆ.ಜಿ ಅಕ್ಕಿಯ ಹಣ ನೀಡುವಂತೆ ಬಿಜೆಪಿ ಒತ್ತಾಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಮಾನ್ಯ ಸಿದ್ದರಾಮಯ್ಯ ಅವರೇ ಕೊನೆಗೂ 5 ಕೆ.ಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಎಟಿಎಂ ಸರ್ಕಾರಕ್ಕೆ ಮರ್ಯಾದೆ, ವಚನಬದ್ಧತೆ ಇರುವುದೇ ಆದರೆ, ನೀವು ಕೊಡಬೇಕಿರುವುದು ಕೇವಲ 5 ಕೆ.ಜಿಯ ಅಕ್ಕಿಯ ಹಣವನ್ನಲ್ಲ, 10 ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ ಬಡಿದುಕೊಂಡಂತೆ, 10 ಕೆಜಿಯ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ. ಕೊಟ್ಟ ಮಾತು ತಪ್ಪಿ ನಡೆದರೆ ಮೆಚ್ಚಲಾರರು ಕನ್ನಡಿಗರು” ಎಂದು ಕಿಡಿಕಾರಿದೆ.

ಅಕ್ಕಿ ಬದಲು ಹಣ: ಕೆ ಎಚ್ ಮುನಿಯಪ್ಪ
“ಅಕ್ಕಿ ಕೊರತೆಯಿಂದಾಗಿ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ತಲಾ 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೊರತೆಯಾಗುವ ಅಕ್ಕಿಯ ಬದಲಾಗಿ ಹಣ ನೀಡಲಾಗುವುದು” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಬಿಗ್ ಬ್ರೇಕಿಂಗ್ | ಅನ್ನಭಾಗ್ಯ: ಅಕ್ಕಿ ಬದಲು ಹಣ ನೀಡಲು ಸರ್ಕಾರ ನಿರ್ಧಾರ
“ಅಕ್ಕಿ ಬದಲಾಗಿ ಹಣ ನೀಡುತ್ತೇವೆ. ಒಂದು ಕೆ.ಜಿ ಅಕ್ಕಿಗೆ 34 ರೂ. ನಿಗದಿ ಮಾಡಲಾಗಿದೆ. ಪಡಿತರದಾರರಿಗೆ ತಲಾ ಐದು ಕೆ.ಜಿ ಅಕ್ಕಿ ನೀಡಲಾಗುತ್ತದೆ. ಉಳಿದ ಐದು ಕೆ.ಜಿ ಅಕ್ಕಿಯ ಬದಲಿಗೆ, ಪ್ರತಿ ಕೆ.ಜಿಗೆ 34 ರೂ.ನಂತೆ ಹಣ ನೀಡುತ್ತೇವೆ. ಹಣ ನೀಡುವ ವ್ಯವಸ್ಥೆಯು ಅಕ್ಕಿ ಸಂಗ್ರಹವಾಗುವವರೆಗೂ ಚಾಲ್ತಿಯಲ್ಲಿರುತ್ತದೆ” ಎಂದು ಮಾಹಿತಿ ನೀಡಿದ್ದರು.