ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ (ಎಂಬಿಬಿ) ಕಾಲೇಜಿನಲ್ಲಿ ತ್ರಿಪುರಾ ಸ್ಟೂಡೆಂಟ್ಸ್ ಫೆಡರೇಶನ್ (ಟಿಎಸ್‌ಎಫ್) ಸದಸ್ಯನ ಮೇಲೆ ಎಬಿವಿಪಿ ಸದಸ್ಯರು ಹಲ್ಲೆ ನಡೆಸಿದ್ದು ತ್ರಿಪುರಾ ಪೊಲೀಸರು ಒಬ್ಬ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ಕಾಲೇಜಿಗೆ ದಾಖಲಾತಿ ಮಾಡಿಸಿಕೊಳ್ಳಲು ಬಂದಿದ್ದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾಗ ಇಬ್ಬರು ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ದೂರಿನ ಆಧಾರದ ಮೇಲೆ ನಾವು ಒಬ್ಬ ಎಬಿವಿಪಿ ಕಾರ್ಯಕರ್ತನನ್ನು ಬಂಧಿಸಿದ್ದೇವೆ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಪೂರ್ವ ಅಗರ್ತಲಾ ಪೊಲೀಸ್ ಠಾಣಾಧಿಕಾರಿ ಪ್ರಭಾರಿ ಸಂಜಿಬ್ ಸೇನ್ ಹೇಳಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 325ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಆರೋಪಿಯ ಹೆಸರನ್ನು ಬಹಿರಂಗಪಡಿಸಿಲ್ಲ.
ಇದನ್ನು ಓದಿದ್ದೀರಾ? ಕೇರಳ ವಿವಿ ಸೆನೆಟ್‌ಗೆ ರಾಜ್ಯಪಾಲರು ನೇಮಿಸಿದ್ದ ನಾಲ್ವರು ಎಬಿವಿಪಿ ಸದಸ್ಯರ ನಾಮನಿರ್ದೇಶನ ರದ್ದು: ಹೈಕೋರ್ಟ್
ಗಾಯಗೊಂಡ ವಿದ್ಯಾರ್ಥಿಯನ್ನು ಖೊರಾಂಗ್ ದೆಬ್ಬರ್ಮಾ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿಯನ್ನು ಗೋವಿಂದ್ ಬಲ್ಲಭ್ ಪಂತ್ (ಜಿಬಿಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ವಿದ್ಯಾರ್ಥಿಯನ್ನು ಬಿಡುಗಡೆಗೊಳಿಸಲಾಗಿದೆ.
ಟಿಎಸ್ಎಫ್ ಸದಸ್ಯರ ಪ್ರಕಾರ, ಹೊಸದಾಗಿ ದಾಖಲಾತಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ವಿಷಯದಲ್ಲಿ ಖೋರಾಂಗ್ ಮತ್ತು ಎಬಿವಿಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಟಿಎಸ್‌ಎಫ್ ಸದಸ್ಯ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಲು ಯತ್ನಿಸಿದಾಗ ಎಬಿವಿಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ.
“ನಾವು ಘಟನೆಯನ್ನು ಖಂಡಿಸುತ್ತೇವೆ. ನಾವು ಸಹ ಪ್ರಾಂಶುಪಾಲರನ್ನು ಭೇಟಿ ಮಾಡಿ ಆರೋಪಿ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವಂತೆ ನಾವು ಅವರಿಗೆ ಮನವಿ ಮಾಡಿದ್ದೇವೆ” ಎಂದು ಟಿಎಸ್‌ಎಫ್ ಅಗರ್ತಲಾ ಟೌನ್ ಸಮಿತಿಯ ಉಪಾಧ್ಯಕ್ಷ ಮನೀಶ್ ದೆಬ್ಬರ್ಮಾ ಹೇಳಿದರು.
ಇದನ್ನು ಓದಿದ್ದೀರಾ? ಗದಗ | ಬಿಜೆಪಿ, ಎಬಿವಿಪಿ ಬೃಹತ್ ಪ್ರತಿಭಟನೆ; ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯ
ಎಂಬಿಬಿ ಕಾಲೇಜು ಪ್ರಾಂಶುಪಾಲ ಡಾ.ನಿರ್ಮಲ್ ಭದ್ರ ಮಾತನಾಡಿ, “ಒಂದು ವಿದ್ಯಾರ್ಥಿ ಸಂಘಟನೆ ಹೊರತುಪಡಿಸಿ ನನಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ಘಟನೆಯ ನಂತರ ನಾವು ಪೊಲೀಸರಿಗೆ ಕರೆ ಮಾಡಿ ಗುಂಪನ್ನು ಚದುರಿಸಿದೆವು. ಸೂಕ್ತ ಭದ್ರತಾ ಕ್ರಮಗಳನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದರು.
ಇನ್ನು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಂಜಿತ್ ಸಹಾ ತಮ್ಮ ಸಂಘಟನೆಯ ಒಂದಿಬ್ಬರಿಗೆ ಗಾಯವಾಗಿದೆ. ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದೇವೆ ಎಂದು ಹೇಳಿದ್ದಾರೆ.
ಎಂಬಿಬಿ ಕಾಲೇಜು ತ್ರಿಪುರಾ ಮಹಾರಾಜ ಬಿರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ 1947ರಲ್ಲಿ ಸ್ಥಾಪಿಸಿದ ಮೊದಲ ಕಾಲೇಜು ಆಗಿದ್ದು ಇದು ರಾಜ್ಯದ ಅಪ್ರತಿಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇದನ್ನು ಈಗ ರಾಜ್ಯ ಸರ್ಕಾರ ನಡೆಸುತ್ತಿದೆ.