ಹಲವು ದಶಕಗಳ ಕಾಲ ಮುಕ್ತ ಮಾರುಕಟ್ಟೆಯನ್ನು ಉತ್ತೇಜಿಸಿದ ನಂತರ, ಅಮೆರಿಕ ಈಗ ರಕ್ಷಣಾತ್ಮಕ ನೀತಿಗೆ ತಿರುಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಪ್ರಪಂಚದ ಆರ್ಥಿಕತೆಯನ್ನು ಅಪಾಯದಂಚಿಗೆ ತಳ್ಳುತ್ತಿದೆ. ಇನ್ನಾದರೂ ಭಾರತ ದೊಡ್ಡಣ್ಣನ ಈ ಹುಚ್ಚಾಟದಿಂದ ದೂರ ಸರಿದು ದೇಶದ ಆರ್ಥಿಕತೆಯನ್ನು ಈ ಸುಂಕದಿಂದ ರಕ್ಷಿಸಬೇಕಾಗಿದೆ. ಹಾಗೆಯೇ ದಿಟ್ಟ, ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳಬೇಕಿದೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯವಾಗಿ ಅಮೆರಿಕಾದ ಜೊತೆ ವಹಿವಾಟು ನಡೆಸುವ ದೇಶಗಳ ಮೇಲೆ ಸುಂಕಗಳನ್ನು ಘೋಷಿಸಿದ್ದಾರೆ. ಸಂಸತ್ ಅನ್ನು ನಿರ್ಲಕ್ಷಿಸಿ, ಈ ಕ್ರಮವನ್ನು ಸಮರ್ಥಿಸಿಕೊಳ್ಳಲು ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಯುರೋಪಿಯನ್ ಯೂನಿಯನ್‌ನಂತಹ ದೀರ್ಘಕಾಲದ ಮಿತ್ರರಾಷ್ಟ್ರಗಳು ಅಮೆರಿಕವನ್ನು “ಸುಲಿಗೆ ಮಾಡುತ್ತಿವೆ” ಎಂದು ಅವರು ಆರೋಪಿಸಿ ವಿವಿಧ ದೇಶಗಳಿಗೆ ಬೇರೆ ಬೇರೆ ಸುಂಕವನ್ನು ಹೇರಿದ್ದಾರೆ. ಎಲ್ಲ ಆಮದು ವಸ್ತುಗಳಿಗೆ 10%, ಚೀನಾಕ್ಕೆ 54%, ಭಾರತಕ್ಕೆ 26%, ಯುರೋಪ್‌ಗೆ 20%, ವಿದೇಶಿ ಕಾರುಗಳಿಗೆ 25% ತೆರಿಗೆ ಹಾಕಿದ್ದಾರೆ. ಇದು ಇತರ ದೇಶಗಳ ತೆರಿಗೆಗೆ ಪ್ರತೀಕಾರ, ಉದ್ಯೋಗ ಸೃಷ್ಟಿ ಮತ್ತು ಅಮೆರಿಕದಲ್ಲೇ ಇನ್ನು ಮುಂದೆ ಎಲ್ಲಾ ವಸ್ತುಗಳ ಉತ್ಪಾದನೆಗೆ ಇದು ಪೂರಕ ಎಂದಿದ್ದಾರೆ. ಆದರೆ ಇವರು ಇಟ್ಟಿರುವ ಅಂಕಿ-ಸಂಖ್ಯೆಗಳು ತಾಳೆಯಾಗುತ್ತಿಲ್ಲ.
ಅಮೆರಿಕ ಈ ರೀತಿ ಆಮದು ಸುಂಕಗಳನ್ನು ಹೇರಿರುವುದು ಇದೇ ಮೊದಲೇನೂ ಅಲ್ಲ. 1828ರ ‘ತಾರೀಫ್ ಆ ಅಭೋಮಿನೇಷನ್ಸ್’ ಉತ್ತರದ ಕಾರ್ಖಾನೆಗಳನ್ನು ಕಾಪಾಡಲು ತೆರಿಗೆ ಹಾಕಿದರು. ದಕ್ಷಿಣ ರಾಜ್ಯಗಳು ದಂಗೆ ಎದ್ದವು, ಇದು ನಾಗರಿಕ ಯುದ್ಧಕ್ಕೆ ಮುನ್ನುಡಿಯಾಯಿತು. ಆಂತರಿಕ ಬಿಕ್ಕಟ್ಟಿಗೆ ಕಾರಣವಾಯಿತು.
1930ರ ಸ್ಮೂಟ್-ಹಾವ್ಲಿ ಸುಂಕ: ರಿಸೆಷನ್ ಸಮಯದಲ್ಲಿ ರೈತರನ್ನು ರಕ್ಷಿಸಲು ತೆರಿಗೆ ಹಾಕಿದರು. ಆದರೆ ಇತರ ದೇಶಗಳು ಸಹಕರಿಸದೆ ವಿರೋಧ ಮಾಡಿ, ವ್ಯಾಪಾರ 66% ಕಡಿಮೆಯಾಯಿತು. ಆರ್ಥಿಕ ಸಂಕಟ ಹೆಚ್ಚಾಯಿತು. ಈಗ ಚಾಲ್ತಿಗೆ ಬಂದಿರುವ ಟ್ರಂಪ್ ತೆರಿಗೆ ಇದಕ್ಕಿಂತ ದೊಡ್ಡದಾಗಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅಷ್ಟೇ ಪ್ರಮಾಣದ ಅಲ್ಲೋಲ ಕಲ್ಲೊಲ ಸೃಷ್ಟಿಸಲಿದೆ.
ಇದನ್ನು ಓದಿದ್ದೀರಾ?: ಭಾರತದ ನೆಲವನ್ನು ಅತಿಕ್ರಮಿಸಿದ ಚೀನಾ; ಪ್ರಧಾನಿ ಮೋದಿ ಮೌನ
ಟ್ರಂಪ್ ತಂಡ ನಿಜವಾದ ತೆರಿಗೆ ದರ ಲೆಕ್ಕ ಹಾಕಿಲ್ಲ. ಬದಲಿಗೆ, ಅಮೆರಿಕದ ವ್ಯಾಪಾರದಲ್ಲಾಗುವ ಏರು-ಪೇರನ್ನು, ತೊಂದರೆಯನ್ನು (ಟ್ರೇಡ್ ಡೆಫಿಸಿಟ್) ಗಮನದಲ್ಲಿಟ್ಟುಕೊಂಡು, ಒಂದು ದೇಶದ ರಫ್ತು ಹಣದಿಂದ ಭಾಗಿಸಿ, ಅದನ್ನು ‘ತೆರಿಗೆ ದರ’ ಎಂದು ಕರೆದಿದ್ದಾರೆ. ಉದಾಹರಣೆಗೆ: ಇಂಡೋನೇಷ್ಯಾ ಅಮೆರಿಕಕ್ಕೆ $28 ಬಿಲಿಯನ್ ವಸ್ತು ಕಳುಹಿಸುತ್ತದೆ, ಆದರೆ ಟ್ರೇಡ್ ಡೆಫಿಸಿಟ್ $17.9 ಬಿಲಿಯನ್. ಟ್ರಂಪ್ ಲೆಕ್ಕ: 17.9 ÷ 28 = 64%. ಇದನ್ನು ತೆರಿಗೆ ಎಂದು ಹೇಳಿ, ಅಮೆರಿಕ 32% ಸುಂಕ ಹಾಕಿದೆ. ಚೀನಾದ ನಿಜ ತೆರಿಗೆ 7.3% (ಟ್ರಂಪ್ ಹೇಳುವುದು 67%). ಯುರೋಪ್‌ನದು 5.2% (ಟ್ರಂಪ್ ಹೇಳುವುದು 39%). ಲೆಸೊಥೊ(ಬಡ ಆಫ್ರಿಕಾ ದೇಶ)ಗೆ 50% ತೆರಿಗೆ—ಅಮೆರಿಕ ಅಲ್ಲಿ ಏನೂ ರಫ್ತು ಮಾಡದ ಕಾರಣ. ಈ ರೀತಿಯ ಅಸಂಬದ್ಧ ತೆರಿಗೆ ಅಥವಾ ಸುಂಕ ಈವರೆಗಿನ ಯಾವುದೇ ಸರ್ಕಾರದಿಂದಲೂ ಆಗಿರಲಿಲ್ಲ.
ಯುರೋಪ್, ಕೊರಿಯಾ, ಚೀನಾ, ಜಪಾನ್ ಈಗಾಗಲೇ ಇದರ ವಿರುದ್ಧ ಒಂದಾಗಿದೆ. ತಮ್ಮ ತಮ್ಮ ವ್ಯಾಪಾರ ವಹಿವಾಟನ್ನು ರಕ್ಷಿಸಿಕೊಳ್ಳಲು ಪ್ರತೀಕಾರ ಸುಂಕ ವಿಧಿಸಲು ಶುರು ಮಾಡಿವೆ. ಯುರೋಪ್-ಅಮೆರಿಕ ವ್ಯಾಪಾರ ಸಮತೋಲನದಲ್ಲಿದೆ. ಆದರೆ ಟ್ರಂಪ್ 20% ತೆರಿಗೆ ಹಾಕಿದರೆ, ಯುರೋಪ್ ಅಮೆರಿಕದ ಸೇವೆಗಳಿಗೆ (ಬ್ಯಾಂಕ್, ಟೆಕ್) 20%+ ತೆರಿಗೆ ಹಾಕಲಿದೆ. ಚೀನಾ “ಅಮೆರಿಕದಿಂದ ಬರುವ ಎಲ್ಲಾ ಆಮದು ಸರಕುಗಳಿಗೆ, ಪ್ರಸ್ತುತ ಅನ್ವಯವಾಗುವ ಸುಂಕ ದರದ ಮೇಲೆ ಶೇ. 34ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಲಾಗುವುದು” ಎಂದು ಘೋಷಿಸಿದೆ. ನಿರ್ಬಂಧದ ಕಾರಣ ರಷ್ಯಾ(ಅಮೆರಿಕ ರಷ್ಯಾದಿಂದ ಯುರೇನಿಯಂ ಖರೀದಿಸುತ್ತದೆ), ಬೆಲಾರಸ್, ಉತ್ತರ ಕೊರಿಯಾಗೆ ವಿನಾಯಿತಿ ನೀಡಲಾಗಿದೆ. ಕೆನಡಾ, ಮೆಕ್ಸಿಕೋಗೆ ಸುಂಕ ಹಾಕಿ ಕೆನಡಾ, ಮೆಕ್ಸಿಕೋ ಪ್ರತಿ ಸುಂಕ ಹಾಕಿದಮೇಲೆ ಈಗ ಆ ದೇಶಗಳ ಮೇಲೆ ಸುಂಕ ಇಲ್ಲದಂತೆ ಮಾಡಿದೆ.
ಭಾರತೀಯ ಕಂಪನಿಗಳು ತಮ್ಮ ವಸ್ತುಗಳನ್ನು ಅಮೆರಿಕಕ್ಕೆ ರಫ್ತು ಮಾಡುವಾಗ 26% ತೆರಿಗೆ ಪಾವತಿಸಬೇಕಾಗಿದೆ. ಭಾರತವು ಅಮೆರಿಕಕ್ಕೆ $91 ಬಿಲಿಯನ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡುತ್ತದೆ. ಆದರೆ ಅಮೆರಿಕದಿಂದ ಕೇವಲ $34 ಬಿಲಿಯನ್ ಮೌಲ್ಯದ ವಸ್ತುಗಳನ್ನು ಖರೀದಿಸುತ್ತದೆ. ಇದರಿಂದ ಭಾರತಕ್ಕೆ ವ್ಯಾಪಾರ ಲಾಭ (ಟ್ರೇಡ್ ಡೆಫಿಸಿಟ್) ಕಡಿತಗೊಂಡಿದೆ. ಭಾರತ ಇದುವರೆಗೂ ಚಕಾರ ಎತ್ತಿಲ್ಲ.
ಅಮೆರಿಕಕ್ಕೆ ಟ್ರಂಪ್ ನೀಡಿರುವ ಭರವಸೆ- ಉದ್ಯೋಗಗಳನ್ನು ಮರಳಿ ತರುತ್ತೇವೆ ಎಂಬುದು. ಆದರೆ ಅದು ಕೇವಲ ಮರೀಚಿಕೆಯಷ್ಟೇ. ಬಂಡವಾಳಗಾರರಿಗೆ ಉದ್ಯೋಗಗಳ ಬಗ್ಗೆ ಕಾಳಜಿ ಇಲ್ಲ, ಅವರಿಗೆ ಲಾಭ ಮುಖ್ಯ. ಆ ಲಾಭವು ವಿದೇಶಗಳಲ್ಲಿ ಕಡಿಮೆ ವೆಚ್ಚದ ಕೆಲಸಗಾರರಿಂದ ಬರುತ್ತದೆ. ಆದರೆ ಅಮೆರಿಕದ ಶ್ರೀಮಂತರು ಚೀನಾದಿಂದ ಉತ್ಪಾದನೆಯನ್ನು ಹೊರತರಲು ಬಯಸುತ್ತಿದ್ದಾರೆ. ಆದರೆ ಅದು ಅಮೆರಿಕಕ್ಕೆ ಬರಬೇಕೆಂದೇನೂ ಇಲ್ಲ. ಅಮೆರಿಕ ಸರ್ಕಾರವು ರಾಷ್ಟ್ರೀಯ ಭದ್ರತೆಗೆ ಮುಖ್ಯವಾದ ಉದ್ಯಮಗಳನ್ನು—ಉದಾಹರಣೆಗೆ ಸೆಮಿಕಂಡಕ್ಟರ್ ಉದ್ಯಮವನ್ನು— ಪುನರುತ್ಥಾನಗೊಳಿಸಲು ಒತ್ತಾಯಿಸುತ್ತಿದೆ. ಇದಕ್ಕೆ ದೊಡ್ಡ ಸಹಾಯಧನ ಬೇಕು ಮತ್ತು ಟ್ರಂಪ್ ಇದನ್ನು ತೆರಿಗೆಗಳಿಂದ ಹಣ ಒಟ್ಟುಗೂಡಿಸಿ ಮಾಡಲು ಯೋಜಿಸಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಇತರ ದೇಶಗಳು ಅಮೆರಿಕಕ್ಕೆ ಪ್ರತೀಕಾರ ಕ್ರಮ ಕೈಗೊಂಡು, ನಷ್ಟ ತರುತ್ತವೆ. ಇದರ ಜೊತೆಗೆ, ಟ್ರಂಪ್ ಕಂಪನಿಗಳ ತೆರಿಗೆ ದರವನ್ನು 21%ರಿಂದ 15%ಕ್ಕೆ ಇಳಿಸಲು ಬಯಸುತ್ತಾರೆ. ಇದರಿಂದ ಸರ್ಕಾರದ ಹಣ ಕಡಿಮೆಯಾಗುತ್ತದೆ. ಆಗ ಸಾಮಾನ್ಯ ದುಡಿಯುವ ವರ್ಗದ ಜನರೇ ಈ ಯೋಜನೆಗೆ ಹಣ ಕೊಡಬೇಕಾಗುತ್ತದೆ. ಇದೇ ಸಮಯದಲ್ಲಿ ಆರೋಗ್ಯ, ಶಿಕ್ಷಣ ಮತ್ತು ವಸತಿಯಂತಹ ಮೂಲಭೂತ ಸೌರ್ಕರ್ಯಗಳಿಗೆ ಕಡಿಮೆಯಾಗುತ್ತವೆ.
ಟ್ರಂಪ್ ಅವರ ಪ್ರತೀಕಾರದ ಸುಂಕ ನೀತಿ ಕುರಿತು ಅಮೆರಿಕದ ಹೆಸರಾಂತ ಅರ್ಥಶಾಸ್ತ್ರಜ್ಞ, ಸಾರ್ವಜನಿಕ ನೀತಿ ವಿಶ್ಲೇಷಕ ಪ್ರೊ. ಜೆಫ್ರಿ ಸಾಸ್, ‘ಶುಲ್ಕಗಳಿಂದ ಜೀವನಮಟ್ಟ ಕುಸಿಯಲಿದೆ. ಅವು ಅಮೆರಿಕದ ಆರ್ಥಿಕತೆಯನ್ನು ನಾಶಮಾಡಲಿವೆ. ಮತ್ತು ಅವುಗಳನ್ನು ಹಾಕಲಾಗುತ್ತಿರುವುದು ಬಹಳ ಅಸಂಬದ್ಧ ಮತ್ತು ತಪ್ಪಾದ ಕಾರಣಗಳಿಗಾಗಿ– ಅದು ಸಂಪೂರ್ಣವಾಗಿ ತಪ್ಪು’ ಎನ್ನುತ್ತಾರೆ.
🇺🇸JEFFREY SACHS:
— Sony Thang (@nxt888) April 3, 2025
"Tariffs are going to lower living standards.
They're going to wreck the US economy, and they're being put on for unbelievably bizarre and mistaken reasons that are completely fallacious.
Let me explain.
The United States runs a large deficit in its trade in… pic.twitter.com/FeVIGVrCnx
ಮುಂದುವರೆದು, ಅಮೆರಿಕದ ವಸ್ತುಗಳು ಮತ್ತು ಸೇವೆಗಳ ವ್ಯಾಪಾರದಲ್ಲಿ ದೊಡ್ಡ ಕೊರತೆಯಿದೆ– ಇದನ್ನು ಅಮೆರಿಕದ ಪ್ರಸ್ತುತ ಖಾತೆ (Current Account) ಎಂದು ಕರೆಯುತ್ತಾರೆ. ಮತ್ತು ಆ ಕೊರತೆ ಸದ್ಯಕ್ಕೆ ಸುಮಾರು ಒಂದು ಟ್ರಿಲಿಯನ್ ಡಾಲರ್‌ಗಳಷ್ಟಿದೆ. ಪ್ರಸ್ತುತ ಖಾತೆ ಕೊರತೆ ಎಂದರೆ– ಮತ್ತು ಅದು ನಿಖರವಾಗಿ ಅರ್ಥವಾಗುವುದು– ಅಮೆರಿಕ ಉತ್ಪಾದನೆಗಿಂತ ಹೆಚ್ಚು ಖರ್ಚು ಮಾಡುತ್ತಿದೆ. ಅದೇ ಕೊರತೆಗೆ ಕಾರಣ. ನೀವು ಉತ್ಪಾದನೆಗಿಂತ ಹೆಚ್ಚು ಖರ್ಚು ಮಾಡಿದಾಗ, ಕೊರತೆ ಉಂಟಾಗುತ್ತದೆ.
ನಾವು ಉತ್ಪಾದನೆಗಿಂತ ಹೆಚ್ಚು ಖರ್ಚು ಮಾಡುತ್ತೇವೆ. ಏಕೆಂದರೆ ಈ ದೇಶದಲ್ಲಿ ಉಳಿತಾಯ ಬಹಳ ಕಡಿಮೆ ಇದೆ. ಸರಕಾರಕ್ಕೆ ಭಾರೀ ಬಜೆಟ್ ಕೊರತೆಯೂ ಇದೆ. ಸರಕಾರ ರಾಷ್ಟ್ರದ ಕ್ರೆಡಿಟ್ ಕಾರ್ಡ್ ಆಗಿದೆ– ಅದು ಸಾಲದ ಮೇಲೆ ಓಡುತ್ತದೆ. ಅದು ಇಸ್ರೇಲ್ ಗಳಂತಹ ದೇಶಗಳ ಯುದ್ಧಗಳಿಗೆ ಹಣ ಕೊಡುತ್ತದೆ. ಜಗತ್ತಿನ 80 ದೇಶಗಳಲ್ಲಿ ಸೇನಾ ತಾಣಗಳಿಗೆ ಹಣ ಕೊಡುತ್ತದೆ. ವರ್ಷಕ್ಕೆ ಟ್ರಿಲಿಯನ್ ಡಾಲರ್ ಮೀರಿ ಸೇನೆಯ ಮೆಲುಕುಗಳಿಗೆ ಹಣ ಕೊಡುತ್ತದೆ. ಜೊತೆಗೆ ಸೇನಾ ಕೈಗಾರಿಕಾ ವ್ಯವಸ್ಥೆಗೆ ಶತಕೋಟಿಗಳಿಗೆ ಹೆಚ್ಚುವರಿ ವೆಚ್ಚ ಮಾಡುತ್ತದೆ. ಅದರ ಜೊತೆ ಜೊತೆಗೇ, ಅಮೆರಿಕದ ಶ್ರೀಮಂತರಿಗೆ ತೆರಿಗೆ ಕಡಿತವನ್ನು ಕೊಡುತ್ತದೆ. ಅಷ್ಟೇ ಅಲ್ಲ, ಅಮೆರಿಕದ ಶ್ರೀಮಂತರಿಗೆ ತೆರಿಗೆ ತಪ್ಪಿಸಲು ಅವಕಾಶ ಕೊಡುತ್ತದೆ. ಅದು ಲೆಕ್ಕಪತ್ರ ಪರಿಶೀಲನೆ (ಆಡಿಟ್) ಮಾಡುವುದಿಲ್ಲ. ತೆರಿಗೆ ಕಾನೂನು ಜಾರಿಗೆ ಬಲಹೀನಗೊಳಿಸುತ್ತದೆ. ಇವೆಲ್ಲದರ ಪರಿಣಾಮವಾಗಿ, ನಮ್ಮ ದೇಶದ ಒಟ್ಟು ಖರ್ಚು, ದೇಶದ ಆದಾಯಕ್ಕಿಂತ ತುಂಬಾ ಜಾಸ್ತಿ ಆಗಿದೆ.
ಇದು ಭ್ರಷ್ಟ ಶ್ರೀಮಂತರಿಗೆ ಮುಕ್ತವಾಗಿ ಎಲ್ಲವನ್ನೂ ಕೊಡುವ ರಾಜಕೀಯ ಗುಂಪಿನ ರಾಜಕಾರಣ. ಅದರ ಪರಿಣಾಮವೇ ಈ ದೊಡ್ಡ ಕೊರತೆಗಳು. ಅದಕ್ಕೆ ಟ್ರಂಪ್ ಬೇರೆಯವರನ್ನು ಹೊಣೆಯಾಗಿಸುತ್ತಾರೆ.
ಇದನ್ನು ಓದಿದ್ದೀರಾ?: ಅಮೆರಿಕ | ಊಟ, ನಿದ್ದೆ, ಶೌಚ ಬಿಟ್ಟು ಸಂಸತ್‌ನಲ್ಲಿ 25 ಗಂಟೆ ನಿರಂತರ ಭಾಷಣ ಮಾಡಿದ ಸಂಸದ; ಟ್ರಂಪ್ ವಿರುದ್ಧ ವಾಗ್ದಾಳಿ
ಹಲವು ದಶಕಗಳ ಕಾಲ ಮುಕ್ತ ಮಾರುಕಟ್ಟೆಯನ್ನು ಉತ್ತೇಜಿಸಿದ ನಂತರ, ಅಮೆರಿಕ ಈಗ ರಕ್ಷಣಾತ್ಮಕ ನೀತಿಗೆ ತಿರುಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಪ್ರಪಂಚದ ಆರ್ಥಿಕತೆಯನ್ನು ಅಪಾಯದಂಚಿಗೆ ತಳ್ಳುತ್ತಿದೆ. ಪ್ರಪಂಚದ ವ್ಯಾಪಾರ ವ್ಯವಸ್ಥೆ ತನ್ನದೇ ಆದ ಗೊಂದಲಗಳ ಭಾರದಿಂದ ಕುಸಿಯುತ್ತಿದೆ. ಒಂದೇ ದಿನ $3.25 ಟ್ರಿಲಿಯನ್ ಅಮೆರಿಕ ಸ್ಟಾಕ್ ಮಾರುಕಟ್ಟೆಯಿಂದ ಕಣ್ಮರೆಯಾಗಿದೆ. ಇನ್ನಾದರೂ ಭಾರತ ದೊಡ್ಡಣ್ಣನ ಈ ಹುಚ್ಚಾಟದಿಂದ ದೂರ ಸರಿದು ಭಾರತದ ಆರ್ಥಿಕತೆಯನ್ನು ಈ ಸುಂಕದಿಂದ ರಕ್ಷಿಸಬೇಕಾಗಿದೆ. ಹಾಗೆಯೇ ದಿಟ್ಟ, ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳಬೇಕಿದೆ.
