- ತನಿಖೆ ವಿಷಯವನ್ನು ಬಹಿರಂಗಪಡಿಸಲು ಆಗುವುದಿಲ್ಲ
- ಕೆ ಎನ್ ರಾಜಣ್ಣ ಹೇಳಿರುವುದರಲ್ಲಿ ತಪ್ಪೇನಿಲ್ಲ
ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಏನೆಲ್ಲಾ ಹೈಡ್ರಾಮಾ ನಡೆಯುತ್ತಿದೆ ಎಂದು ಮಾಧ್ಯಮದಲ್ಲೇ ಎಲ್ಲ ಪ್ರಕಟವಾಗುತ್ತಿದೆ. ತನಿಖೆ ನಡೆಯುತ್ತಿದೆ. ಈಗಲೇ ನಾವು ಈ ಬಗ್ಗೆ ಪ್ರತಿಕ್ರಿಯಿಸಲು ಆಗುವುದಿಲ್ಲ. ತನಿಖೆಯಿಂದ ಸತ್ಯ ಹೊರಗೆ ಬರಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ತನಿಖೆ ವಿಷಯವನ್ನು ಬಹಿರಂಗಪಡಿಸಲು ಆಗುವುದಿಲ್ಲ. ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಯಾವ ವ್ಯಕ್ತಿಗಳ ಕೈವಾಡ ಇದೆ ಅವರೆಲ್ಲರ ಬಂಧನ ಆಗಲಿದೆ. ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ” ಎಂದರು.
ಟಿಕೆಟ್ ಕೊಡಿಸುವ ವಿಚಾರದ ವಂಚನೆ ಇದು. ಕಾಂಗ್ರೆಸ್ ಹೇಗೆ ನೋಡುತ್ತದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ವಂಚನೆ ಪ್ರಕರಣ ಏನಿದೆಯೋ ಆ ಬಗ್ಗೆ ತನಿಖೆ ನಡೆಯಲಿದೆ. ಇದರ ಹಿಂದೆ ಬಿಜೆಪಿಯವರು ಇದ್ದರೆ ಸತ್ಯ ಬಯಲಾಗಲಿದೆ” ಎಂದಷ್ಟೇ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರಾವಳಿಯ ಜನ ಹಿಂದುತ್ವದ ನಶೆಯಿಂದ ಹೊರಬರಲು ಇದು ʼಚೈತ್ರಕಾಲʼ
ಮೂವರು ಡಿಸಿಎಂ ಅಗತ್ಯವಿದೆ
“ಮೂವರು ಉಪ ಮುಖ್ಯಮಂತ್ರಿ ನೇಮಕ ಆಗಬೇಕು ಎಂದು ಕೆೆ ಎನ್ ರಾಜಣ್ಣ ನನ್ನ ಬಳಿಯೂ ಹೇಳಿದ್ದಾರೆ. ಆ ಕುರಿತು ಅವರು ಹೈಕಮಾಂಡ್‌ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಪತ್ರ ಬರೆಯುವ ಮೊದಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗಮನಕ್ಕೆ ತರಬೇಕು” ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದರು.
“ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂವರು ಡಿಸಿಎಂ ಸ್ಥಾನಗಳು ಸೃಷ್ಟಿಯಾದರೆ ಬಹಳ ಅನುಕೂಲವಾಗುತ್ತದೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಕಾದು ನೋಡಬೇಕು” ಎಂದರು.
ಕೆ ಎನ್ ರಾಜಣ್ಣ ನಿಮ್ಮ ಪರವಾಗಿಯೇ ಮಾತನಾಡಿದಂಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ನಾವಿಬ್ಬರು ಗೆಳೆಯರು. ಅದರಲ್ಲಿ ತಪ್ಪೇನಿದೆ? ಈಗ ರಾಜಣ್ಣ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಯಾವ ಸ್ವರೂಪ ಪಡೆಯಲಿದೆ. ಹೈಕಮಾಂಡ್ ಹೇಗೆ ಸ್ಪಂದಿಸಲಿದೆ ಎಂಬುದು ನೋಡಬೇಕು” ಎಂದು ಹೇಳಿದರು.