ಕಾಂಗ್ರೆಸ್ ವಕ್ತಾರ ನಿಕೇತ್‌ರಾಜ್ ಮೌರ್ಯ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಕುರುಬ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ತಮಕೂರಿನಲ್ಲಿ ಕುರುಬ ಸಮಾವೇಶ ನಡಸಲು ಮುಂದಾಗಿದ್ದಾರೆ.
ತುಮಕೂರಿನಲ್ಲಿ ಶನಿವಾರ ಕುರುಬ ಸಮುದಾಯದ ಮುಖಂಡರು ಸಭೆ ನಡೆಸಿದ್ದಾರೆ. “ತುಮಕೂರು ಕ್ಷೇತ್ರದಿಂದ ಸಮುದಾಯ ಬಾಸ್ಕರಪ್ಪ ಸ್ಪರ್ಧಿಸಿ ಗೆದ್ದಿದ್ದರು. ಈಗ ಸಮುದಾಯದವರೇ ಆಗಿರುವ ನಿಕೇತ್‌ರಾಜ್ ಮೌರ್ಯ ಅವರು ಎಲ್ಲ ವರ್ಗ, ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು” ಎಂದು ಮುಖಂಡರು ಒತ್ತಾಯಿಸಿದ್ದಾರೆ.
“ಸಿದ್ದರಾಮಯ್ಯನವರ ದೂರದೃಷ್ಟಿಯ ಜನಪರ ಚಿಂತನೆಗಳು ನಿಕೇತ್‌ರಾಜ್ ಅವರಲ್ಲಿವೆ. ವಿದ್ಯಾವಂತ ಒಬ್ಬ ಲೋಕಸಭೆ ಪ್ರವೇಶಿಸಿದರೆ, ಬಡವರ ಪರವಾದ ದನಿಯಾಗಲು ಸಾಧ್ಯ. ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾನತೆ ಆಶಯ ಈಡೇರಿಸಲು ನಿಕೇತ್‌ರಾಜ್ ಶ್ರಮಿಸುತ್ತಾರೆ ಎಂಬ ನಂಬಿಕೆ ಇದೆ. ಕುರುಬ ಸಮಾವೇಶ ಮಾಡಿ ಟಿಕೆಟ್ ಕೇಳಲಿದ್ದೇವೆ” ಎಂದು ಹೇಳಿದ್ದಾರೆ.
“ನಿಕೇತ್‌ರಾಜ್ ಬಗ್ಗೆ ಜಿಲ್ಲೆಯ ಮತದಾರರಲ್ಲೂ ಒಲವಿದೆ. ಅವರು ಕುರುಬ ಸಮುದಾಯಕ್ಕಷ್ಟೇ ಸೀಮಿತವಾಗಿರದೆ ಸರ್ವರ ಹಿತವನ್ನು ಬಯಸುವವರಾಗಿದ್ದಾರೆ. ಅವರು ರಾಜಕಾರಣಕ್ಕೆ ಬಂದರೆ ಅಮೂಲಾಗ್ರ ಬದಲಾವಣೆಯಾಗಲಿದೆ. ಹಿಂದುಳಿದ ಸಮುದಾಯದವನೊಬ್ಬ ಪಾರ್ಲಿಮೆಂಟ್‌ಗೆ ಹೋಗುವುದಾದರೆ ಎಲ್ಲರೂ ಬೆಂಬಲಿಸಲು ಸಿದ್ಧರಿದ್ದೇವೆ” ಎಂದಿದ್ದಾರೆ.
ಸಭೆಯಲ್ಲಿ ರತೇವಣಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್, ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಕರ್ನಾಟಕ ಯುವ ಪ್ರದೇಶ ಕುರುಬರ ಸಂಘದ ಮಹಾಲಿಂಗಯ್ಯ, ಕಾರ್ಪೊರೇಟರ್ ಆದ ಮಹೇಶ್, ಶಫರ್ಡ್ಸ್ ಇಂಡಿಯಾ ಸಂಘಟನೆಯ ರವೀಶ್, ಮುಖಂಡರಾದ ನರಸಿಂಹರಾಜು, ಚಿ.ನಾ.ಹಳ್ಳಿ ಸಿದ್ದರಾಮಯ್ಯ, ಸಂಘದ ಕಾರ್ಯಾಧ್ಯಕ್ಷ ಆರ್‌ಎಂಸಿ ರಾಜು, ವಕೀಲ ಮಲ್ಲಿಕಾರ್ಜುನ್ ಮತ್ತು ಸಮಾಜದ ಎಲ್ಲಾ ಹಿರಿಯ ನೂರಾರು ಮುಖಂಡರು ಹಾಜರಿದ್ದರು.