ಸಚಿವ ಡಾ.ಜಿ ಪರಮೇಶ್ವರ್ ಮಾಗಡಿ, ಕೆ ಎನ್ ರಾಜಣ್ಣ ಹಾಗೂ ಎಸ್ ಪಿ ಮುದ್ದಹನುಮೇಗೌಡ ಬೆಂಗಳೂರು ಗ್ರಾಮಾಂತರದಿಂದ ಬಂದವರು. ಇಂದಿರಾಗಾಂಧಿ ಚಿಕ್ಕಮಗಳೂರು, ಸೋನಿಯಾಗಾಂಧಿ ಬಳ್ಳಾರಿ ಹಾಗೂ ರಾಹುಲ್ ಗಾಂಧಿ ವಯನಾಡ್‌ನಲ್ಲಿ ಸ್ಪರ್ಧಿಸಿದ್ದರು. ಹಾಗಾದರೆ ಇವರೆಲ್ಲಾ ಒಳಗಿನವರಾ ಎಂದು ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪ್ರಶ್ನಿಸಿದ್ದಾರೆ.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ತುಮಕೂರು ಲೋಕಸಭಾ ಚುನಾವಣಾ ಪ್ರಯುಕ್ತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಠಕ್ಕರ್ ನೀಡಿದರು.
ಸ್ವಪಕ್ಷೀಯರು ಒಳಗೊಂಡಂತೆ ಕಾಂಗ್ರೆಸ್ ನಾಯಕರೂ ಸೋಮಣ್ಣ ವಲಸಿಗ ಎನ್ನುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಅಭ್ಯರ್ಥಿ ಮುದ್ದಹನುಮೇಗೌಡರನ್ನು ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರು ಕರೆ ನೀಡಿದ್ದರು. ಇದಕ್ಕೆ ಉತ್ತರಿಸಿರುವ ಸೋಮಣ್ಣ, “ನನ್ನನ್ನು ಹೊರಗಿನಿಂದ ಬಂದವನೆಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ತುಮಕೂರಿಗೂ ಸೋಮಣ್ಣನಿಗೂ ಅವಿನಾಭಾವ ಸಂಬಂಧವಿದೆ. ನಾನು ಪಕ್ಕದ ಜಿಲ್ಲೆಯವನಷ್ಟೇ” ಎಂದು ಹೇಳಿದರು.
“ನಾನು ರಾಜಕಾರಣ ಮಾಡಲು ಬಂದಿಲ್ಲ. ಇದೆಲ್ಲವೂ ಅನಿರೀಕ್ಷಿತ. ಈ ಜಿಲ್ಲೆಯಲ್ಲಿನ ಅಸ್ಥಿರತೆ ಹೋಗಲಾಡಿಸಿ ಸಹೃದಯತೆ ಬೆಸೆಯುವ ಪ್ರಯತ್ನ ಮಾಡುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ಕೆಲಸ ಮಾಡುತ್ತೇನೆ. ನನ್ನದು ಸಂಸ್ಕಾರಯುತ ಜೀವನ ಹಾಗೂ ಬದುಕು ತೆರೆದ ಪುಸ್ತಕ. ನಮ್ಮದೇ ಆದ ಅಭಿವೃದ್ಧಿ ದೃಷ್ಟಿಕೋನಗಳಿವೆ. ಈ ಚುನಾವಣೆಯಲ್ಲಿ ದೇಶದ ಸುಭದ್ರತೆ ಹಾಗೂ ಮೋದಿ ಮುಖ ನೋಡಿ ಮತ ಚಲಾಯಿಸಬೇಕು” ಎಂದರು.
“ನಾನು ಗೆದ್ದರೆ ಮಧುಗಿರಿ ಹಾಗೂ ಕೊರಟಗೆರೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ತುಮಕೂರು ರಾಯದುರ್ಗ ರೈಲ್ವೆ ಯೋಜನೆ ಪೂರ್ಣ, ವಸಂತ ನರಸಾಪುರಕ್ಕೆ ಬಸ್ ವ್ಯವಸ್ಥೆ ಮತ್ತು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಜತೆಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತೇನೆ” ಎಂದು ಭರವಸೆ ನೀಡಿದರು.
ಪತ್ರಕರ್ತರ ಪ್ರಶ್ನೆಗೆ ಸೋಮಣ್ಣನ ಉತ್ತರ
“ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದೆ. ಸಂವಿಧಾನವನ್ನು ಅಪಮಾನಿಸಿದರೆ ಅದಕ್ಕಿಂತ ಬೇರೆ ಪಾಪವಿಲ್ಲ. ಕಾಂಗ್ರೆಸ್ನವರು ಕೆಲವು ವಿಚಾರ ತಿರುಚುತ್ತಾರೆ. ಹೆಗಡೆ ಅವರು ಸಂವಿಧಾನ ಬದಲಾವಣೆ ಮಾಡುತ್ತೇನೆಂದು ಹೇಳಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದೂ ಗೊತ್ತಿಲ್ಲ” ಎಂದು ಸೋಮಣ್ಣ ಸಮರ್ಥಿಸಿಕೊಂಡರು.
ಮುಸ್ಲಿಂ ಸಮುದಾಯಕ್ಕೆ ಇದ್ದಂತಹ ಶೇ.4ರಷ್ಟು ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಹಂಚಿಕೆ ಮಾಡುವ ಮೂಲಕ ಮುಸ್ಲಿಮರನ್ನು ಮನುಷ್ಯರೇ ಅಲ್ಲ ಎನ್ನುವ ರೀತಿ ಬಿಜೆಪಿ ನಡೆದುಕೊಂಡಿದೆ. ಇದಕ್ಕೆ ನಿಮ್ಮ ಉತ್ತರವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಸಮರ್ಪಕವಾದ ಉತ್ತರ ನೀಡಲಿಲ್ಲ.
ಕೋವಿಡ್-19 ಸಂದರ್ಭದಲ್ಲಿ ಆಕ್ಸಿಜನ್ ಹಾಗೂ ಕೋವಿಡ್ ಲಸಿಕೆಗಳನ್ನು ಕೇಂದ್ರ ಸರ್ಕಾರ ಉಚಿತವಾಗಿ ಕೊಡಲಿಲ್ಲ. ಕೋರ್ಟ್ ಮೊರೆ ಹೋಗಿ ನ್ಯಾಯ ಪಡೆಯಬೇಕಾಯಿತು. ಚಾಮರಾಜನಗರದಲ್ಲಿ ನೀವು ಉಸ್ತುವಾರಿ ಸಚಿವರಾಗಿದ್ದಾಗಲೇ ಆಕ್ಸಿಜೆನ್ ಕೊರತೆಯಿಂದ 36 ಜನರು ಸಾವನ್ನಪ್ಪಿದ್ದರು. ಹೀಗಿರುವಾಗ ನೀವು ನರೇಂದ್ರ ಮೋದಿಯವರ ಮುಖ ತೋರಿಸಿ ಓಟು ಕೇಳುತ್ತಿದ್ದೀರಿ. ನಿಮ್ಮನ್ನು ಯಾಕಾಗಿ ಬೆಂಬಲಿಸಬೇಕು ಎಂಬ ಪ್ರಶ್ನೆಗೆ ಅದು ಅಧಿಕಾರಿಗಳಿಂದಾದ ತಪ್ಪು ಎನ್ನುವ ಮೂಲಕ ಉತ್ತರ ನೀಡದೆ ಪಲಾಯನ ಮಾಡಿದರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮಾ ತೋರಿಸಿ ಗೆಲುವು ಸಾಧಿಸಿದ್ದೀರಿ. ಈಗ ರಾಮನ ಹೆಸರಲ್ಲಿ ಚುನಾವಣೆಗೆ ಹೋಗುತ್ತಿದ್ದೀರಿ. ಹಾಲಿ ಸಂಸದರು ಕೆಲಸಗಳನ್ನು ಮಾಡಿಲ್ಲವೇ ಎಂಬ ಪ್ರಶ್ನೆಗೆ “ಸೋಮಣ್ಣನೇ ಬೇರೆ, ಅನ್ಯರೇ ಬೇರೆ. ನನಗೆ ಅವಕಾಶ ಕೊಟ್ಟು ನೋಡಿ” ಎಂದು ಹೇಳಿದರು. ಬಳಿಕ ಚುನಾವಣಾ ಬಾಂಡ್ ವಿಚಾರಗಳು ಸಂವಾದದಲ್ಲಿ ಪ್ರತಿಧ್ವನಿಸಿದವು.
ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ನೀಡುವಂತೆ ಹಿಂದಿನ ರಾಜ್ಯ ಬಿಜೆಪಿ ಹಾಗೂ ಇಂದಿನ ರಾಜ್ಯ ಕಾಂಗ್ರೆಸ್ ಪತ್ರ ಬರೆದಿದೆ. ಆದರೆ ಕೇಂದ್ರದಿಂದ ಯಾವ ಪ್ರತಿಕ್ರಿಯೆಯೂ ಇಲ್ಲ. ನೀವು ಸಂಸದರಾದರೆ ಶ್ರೀಗಳಿಗೆ ಭಾರತರತ್ನ ಕೊಡಿಸುತ್ತೀರಾ ಎನ್ನುವ ಪ್ರಶ್ನೆಗೆ ಸೋಮಣ್ಣ ಕೆಲಕಾಲ ಮೌನಕ್ಕೆ ಶರಣಾದರು. ನಂತರ ಅದು ನಮ್ಮ ಪಾಲಿನ ಸೌಭಾಗ್ಯ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹೆಗಡೆಗೆ ಟಿಕೆಟ್ ಕೈತಪ್ಪಲು ಸಂವಿಧಾನ ವಿರೋಧಿ ಹೇಳಿಕೆಯೇ ಕಾರಣ: ವಿ ಸೋಮಣ್ಣ
ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಚಿ ನಿ ಪುರುಷೋತ್ತಮ್ ಅವರು ಸಂವಿಧಾನ ಕೃತಿಯನ್ನು ವಿ ಸೋಮಣ್ಣ ಅವರಿಗೆ ನೀಡುವ ಮೂಲಕ ಸ್ವಾಗತಿಸಿದರು. ನಂತರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮುಖಂಡ ಸ್ಪೂರ್ತಿ ಚಿದಾನಂದ್ ಹಾಗೂ ಬಿ ಎಚ್ ಅನಿಲ್ ಕುಮಾರ್, ಎಸ್ ಶಿವಪ್ರಸಾದ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಇ ರಘುರಾಂ, ಡಿ ಎಂ ಸತೀಶ್, ಶಾಂತರಾಜು, ಬಿ ವಿ ಮಲ್ಲಿಕಾರ್ಜುನಯ್ಯ ಸೇರಿದಂತೆ ಎಲ್ಲ ಪತ್ರಕರ್ತರು ಇದ್ದರು.
