- ಶಿವಸೇನಾದ ಸಂಸ್ಥಾಪನಾ ದಿನಾಚರಣೆಯಲ್ಲಿ ಉದ್ಧವ್ ಠಾಕ್ರೆ ಮಾತು
- ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಮನವಿ
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯನ್ನು ಟೀಕಿಸಿದ್ದಾರೆ.
ಅಮೆರಿಕದಲ್ಲಿ ಪ್ರಧಾನಿ ಮೋದಿ ತನ್ನ ಹಿಂಬಾಲಕರಿಗೆ ಪ್ರವಚನ ನೀಡುವ ಬದಲಿಗೆ ಹಿಂಸಾಚಾರಕ್ಕೆ ಒಳಗಾಗಿರುವ ಮಣಿಪುರ ರಾಜ್ಯಕ್ಕೆ ಏಕೆ ಭೇಟಿ ನೀಡುತ್ತಿಲ್ಲ ಎಂದು ಉದ್ಧವ್ ಪ್ರಶ್ನಿಸಿದ್ದಾರೆ.
ಮುಂಬೈನ ಸನ್ಮುಕ್ತಾನಂದ ಸಭಾಂಗಣದಲ್ಲಿ ನಡೆದ ಶಿವಸೇನಾದ 57ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಮುನ್ನ ಉದ್ಧವ್ ಠಾಕ್ರೆ ಅವರು ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
“ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ, ನಮ್ಮ ಪ್ರಧಾನ ಮಂತ್ರಿಗಳು ಉಪನ್ಯಾಸ ನೀಡಲು ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದಾರೆ. ಅಮಿತ್ ಶಾ ಗೃಹ ಸಚಿವರಾಗಿಯೂ ವಿಫಲರಾಗಿದ್ದಾರೆ. ಅವರಿಗೆ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿ ಶಾಂತಿ ನೆಲೆಸಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಅಧಿಕಾರಿಗಳ ತಂಡವನ್ನಾದರೂ ಕಳುಹಿಸಲಿ” ಎಂದು ಉದ್ಧವ್ ಹೇಳಿದರು.
ಮಣಿಪುರದಲ್ಲಿ ಕಳೆದ ಒಂದು ತಿಂಗಳಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಮೇತೀ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.
“ರಷ್ಯಾ-ಉಕ್ರೇನ್ ಯುದ್ಧವನ್ನು ಪ್ರಧಾನಿ ಮೋದಿ ನಿಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ. ಹಾಗಿದ್ದರೆ ಮೋದಿ ಅವರು ಮಣಿಪುರದಲ್ಲಿ ಹಿಂಸಾಚಾರವನ್ನು ನಿಲ್ಲಿಸಬೇಕು, ಶಾಂತಿಯನ್ನು ಪುನಃಸ್ಥಾಪಿಸಬೇಕು. ಹಾಗೆ ಮಾಡಿದರೆ ರಷ್ಯಾ-ಉಕ್ರೇನ್ ಕುರಿತು ಹೇಳುತ್ತಿರುವ ಮಾತುಗಳನ್ನು ನಾವು ನಂಬುತ್ತೇವೆ” ಎಂದು ಉದ್ಧವ್ ವ್ಯಂಗ್ಯವಾಡಿದರು.
ಉದ್ಧವ್ ಠಾಕ್ರೆ ಅವರು ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಕಿಡಿಕಾರಿದರು.
ಜೂನ್ 20 ರಂದು ‘ವಿಶ್ವ ದ್ರೋಹಿಗಳ ದಿನ’ ಎಂದು ಆಚರಿಸಲಾಗುವುದು. ಅವರು ಮಾಡಿದ ದ್ರೋಹವನ್ನು ಎಂದಿಗೂ ಮರೆಯಲಾಗದು ಎಂದು ಹೇಳಿದರು.
“ಇಂದು ನನ್ನ ಜೊತೆ ನನ್ನ ಪಕ್ಷದ ಯೋಧರಿಲ್ಲ. ಅವರೆಲ್ಲರೂ ನಿಷ್ಠಾವಂತರು ಹಾಗೂ ಬದ್ಧತೆಯುಳ್ಳವರಾಗಿದ್ದರು. ದೇಶದ್ರೋಹಿಗಳಿರುವ ದೊಡ್ಡ ಸೈನ್ಯವನ್ನು ಇಟ್ಟುಕೊಳ್ಳುವುದಕ್ಕಿಂತ ನಿಷ್ಠಾವಂತ ಸೈನಿಕರನ್ನು ಮುನ್ನಡೆಸುವುದು ಉತ್ತಮ. ಯುದ್ಧವು ನಿಷ್ಠೆ ಮತ್ತು ಬದ್ಧತೆಯ ಆಧಾರದ ಮೇಲೆ ಹೋರಾಡಲ್ಪಡುತ್ತದೆ” ಎಂದು ಉದ್ಧವ್ ಠಾಕ್ರೆ ತಿಳಿಸಿದರು.
“ನಿಜವಾದ ಶಿವಸೇನೆ ನಮ್ಮದು. ನೀವು ಸಂಸದರು ಮತ್ತು ಶಾಸಕರನ್ನು ಕದ್ದಿರಬಹುದು. ಆದರೆ, ವಿಶ್ವಾಸಾರ್ಹ ಮತ್ತು ನಿಷ್ಠಾವಂತ ಬೆಂಬಲಿಗರನ್ನಲ್ಲ. ಶಿವಸೇನೆಯು ಆಡಳಿತವನ್ನು ಸಮರ್ಥವಾಗಿ ನಡೆಸಬಲ್ಲದು ಎಂದು ಜನರಿಗೆ ತೋರಿಸಿದೆ. ನಾನು ಮುಖ್ಯಮಂತ್ರಿ ಸ್ಥಾನವನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ” ಎಂದು ಹೇಳಿದರು.
ಉದ್ಧವ್ ಠಾಕ್ರೆ ಅವರು ಇದೇ ವೇಳೆ ಮೋದಿ ಎಂದರೆ ಭಾರತ ಎಂಬ ಶಿಂಧೆ ಅವರ ಹೇಳಿಕೆಯನ್ನು ಟೀಕಿಸಿದರು.
“ರಾಷ್ಟ್ರಕ್ಕಿಂತ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಬಿಜೆಪಿ ಹಿಟ್ಲರ್ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಕ್ರಾಂತಿಕಾರಿಗಳಿಂದ ಸ್ಫೂರ್ತಿ ಪಡೆಯುವುದು ಮಾತ್ರ ನಮ್ಮ ಕೆಲಸವಾಗಿದೆ” ಎಂದು ಹೇಳಿದರು.
ಏಕನಾಥ್ ಶಿಂಧೆ ಮತ್ತು 39 ಇತರ ಪಕ್ಷದ ಶಾಸಕರು ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಕಳೆದ ವರ್ಷ ಜೂನ್ನಲ್ಲಿ ಶಿವಸೇನೆ ವಿಭಜನೆಯಾಯಿತು. ಬಳಿಕ ನೂತನ ಸರ್ಕಾರ ರಚನೆಯಾಯಿತು.
‘ಹಿಂಸಾಚಾರ ನಿಲ್ಲಿಸದಿದ್ದರೆ ಕಠಿಣ ಕ್ರಮ’
ಮಣಿಪುರ ಹಿಂಸಾಚಾರ ಬಗ್ಗೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಮೇ 3 ರಿಂದ ಕುಕಿ ಹಾಗೂ ಮೇತೀ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಬಿರೇನ್ ಸಿಂಗ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
“ಕುಕಿ ಹಾಗೂ ಮೇತೀ ಸಮುದಾಯಗಳ ಜನರು ಹಿಂಸಾಚಾರವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ಯಾರ ಮೇಲೂ ದಾಳಿ ಮಾಡಬಾರದು. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ” ಎಂದು ಬಿರೇನ್ ಸಿಂಗ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಒಂದಾಗಿವೆ – ಅಧಿಕಾರಕ್ಕಾಗಿ ಅಲ್ಲ: ಡಿ ರಾಜಾ
ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಅಪರಿಚಿತರು ಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಸೇನಾ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಘಟನೆಯ ಸಂದರ್ಭದಲ್ಲಿ, ಚಿನ್ಮಾಂಗ್ ಗ್ರಾಮದಲ್ಲಿ ಗುಂಪೊಂದು ಮೂರು ಮನೆಗಳಿಗೆ ಬೆಂಕಿ ಹಚ್ಚಿದೆ. ಗಾಯಗೊಂಡ ಯೋಧನನ್ನು ಲೀಮಾಖೋಂಗ್ ನಲ್ಲಿರುವ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.