ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ ಪ್ರಕರಣ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು, ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹೇಳಿಕೆ ನೀಡಿದ್ದ ಕಾಲೇಜು ಆಡಳಿತ ಮಂಡಳಿ, “ವಿಡಿಯೋ ಮಾಡಲು ಮೊಬೈಲ್ ಇಟ್ಟಿದ್ದನ್ನು ವಿದ್ಯಾರ್ಥಿನಿಯರು ಒಪ್ಪಿಕೊಂಡಿದ್ದಾರೆ. ಆದರೆ, ಸಂತ್ರಸ್ತ ವಿದ್ಯಾರ್ಥಿನಿಯು ತಪ್ಪಿತಸ್ಥ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದೂರು ಕೊಡಲು ಒಪ್ಪಿಲ್ಲ” ಎಂದು ತಿಳಿಸಿದ್ದರು.
ಈ ಬೆಳವಣಿಗೆಯ ಬಳಿಕ ಬಿಜೆಪಿ ಮತ್ತು ಕೆಲವು ಸಂಘಟನೆಗಳು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಒತ್ತಡ ಹಾಕಿದ್ದರು. ಈ ನಡುವೆಯೇ ಮಲ್ಪೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿಯ ಕಾಲೇಜಿನಲ್ಲಿ ನಡೆದಿದ್ದೇನು? ಬಿಜೆಪಿ ನಾಯಕರು ಹೇಳುತ್ತಿರುವುದೇನು? ಇಲ್ಲಿದೆ ವಿವರ
ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರಾದ ಶಬನಾಝ್, ಅಲ್ಫೀಯಾ, ಅಲೀಮಾ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಮಾಡಿ ಡಿಲಿಟ್ ಆದ ಬಗ್ಗೆ ಮೂವರು ವಿದ್ಯಾರ್ಥಿನಿಯರು ಮತ್ತು ಕಾಲೇಜು ಆಡಳಿತ ಮಂಡಳಿಯವರ ವಿರುದ್ಧ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಐಪಿಸಿಯ ಕಲಂ 509,204,175,34 ಮತ್ತು 66(E) ಐಟಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ಘಟನೆಯು ರಾಜ್ಯಾದ್ಯಂತ ರಾಜಕೀಯ ಚರ್ಚೆಗೆ ವೇದಿಕೆಯೊದಗಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.