ಉಡುಪಿ ಜಿಲ್ಲೆಯ ನೇಜಾರಿನಲ್ಲಿ ಕಳೆದ ಭಾನುವಾರ(ನ.12)ರಂದು ತಾಯಿ, ಮಗಳು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು.
ಮೃತ ಹಸೀನಾ ಪತಿ ನೂರ್ ಮೊಹಮ್ಮದ್ ಹಾಗೂ ಅವರ ಮಗ ಅಸಾದ್ ಹಾಗೂ ಕುಟುಂಬದ ಇತರ ಸದಸ್ಯರನ್ನು ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿ, ಸಾಂತ್ವನ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ, ಆರೋಪಿ ಪ್ರವೀಣ್ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. ಕುಟುಂಬದ ನಾಲ್ಕು ಸದಸ್ಯರನ್ನು ಅಮಾನುಷವಾಗಿ ಕೊಂದ ವ್ಯಕ್ತಿ ರಾಕ್ಷಸ ಕೃತ್ಯ ಎಸಗಿದ್ದಾನೆ. ಮೃತರ ಕುಟುಂಬದ ಜೊತೆ ಸರ್ಕಾರವಿದ್ದು, ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ ಎಂದು ತಿಳಿಸಿದರು.
ಉಡುಪಿಯ ನೇಜಾರುವಿನಲ್ಲಿ ಮೊನ್ನೆ ನಡೆದ ತಾಯಿ ಮತ್ತು ಮೂವರು ಮಕ್ಕಳ ಅಮಾನುಷ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇವತ್ತು ಮೃತ ಹಸೀನಾ ಅವರ ಪತಿ ನೂರ್ ಮೊಹಮ್ಮದ್ ಹಾಗೂ ಮಗನಿಗೆ ಧೈರ್ಯವನ್ನು ತುಂಬಿ ಸಾಂತ್ವನ ವ್ಯಕ್ತಪಡಿಸಿದೆ.
ಈ ಸಮಯದಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ, ಜಿಲ್ಲಾ ಪಂಚಾಯತ್ ಸಿಇಒ… pic.twitter.com/R11SbyL0Pf
— Laxmi Hebbalkar (@laxmi_hebbalkar) November 17, 2023
ಆರೋಪಿಯನ್ನು ತ್ವರಿತವಾಗಿ ಬಂಧಿಸುವ ಮೂಲಕ ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದ್ದು, ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನ ಮಾಡುತ್ತೇವೆ. ಉಡುಪಿ ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆ, ಇಂತಹ ಜಿಲ್ಲೆಯಲ್ಲಿ ಹೀಗಾಗಬಾರದಿತ್ತು. ಮುಂಜಾಗ್ರತಾ ಕ್ರಮ ಕೈಗೊಳ್ಖುತ್ತೇವೆ, ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಆರೋಪಿ ಪ್ರವೀಣ್ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. 20 ನಿಮಿಷದಲ್ಲಿ ಕೃತ್ಯವೆಸಗಿದ ಆತನ ಮೆಂಟಲ್ ಸ್ಟೇಟಸ್ ಯಾವ ರೀತಿ ಇರಬಹುದು? ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಲಾಗುವುದು ಎಂದರು.
ನೀವು ಲೇಟಾಗಿ ಬರಲು ಕಾರಣ ಏನು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಉಸ್ತುವಾರಿ ಸಚಿವೆ, ನಾನು ಬೆಳಗಾವಿಯಲ್ಲಿದ್ದೆ. ಉಡುಪಿಗೆ ಬರಲು ನೇರವಾಗಿ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲಿ ಇದ್ದರೂ ಕೂಡ ಸಂತ್ರಸ್ತ ಕುಟುಂಬದ ಜೊತೆಗೆ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಮೃತ ಮಹಿಳೆಯ ಸಹೋದರರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೆ. ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಇಲ್ಲಿರಬಹುದು ಅಥವಾ ಅಲ್ಲಿಂದ ಇರಬಹುದು ನಿರ್ವಹಿಸಿದ್ದೇವೆ. ಅನ್ಯಥಾ ಭಾವಿಸಬಾರದು’ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.