ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ ವಿವರ ಸಂಗ್ರಹಿಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಬುಧವಾರ ಉಡುಪಿ ನಗರಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೆಡಿಕಲ್ ಸ್ಪೂಡೆಂಟ್ಸ್ ಗೆ ಆದ ಸಮಸ್ಯೆ ವಿಚಾರಣೆಗೆ ಬಂದಿದ್ದೇನೆ. ನಾನು ಮೊದಲು ಪೊಲೀಸರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳುತ್ತೇನೆ. ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮಾತುಕತೆ ಮಾಡುತ್ತೇನೆ” ಎಂದು ಹೇಳಿದರು.
“ಪ್ರಕರಣವನ್ನು ಸಂಪೂರ್ಣವಾಗಿ ನಾನು ಮೊದಲು ಅರಿತುಕೊಳ್ಳಬೇಕಾಗಿದೆ. ಒಟ್ಟು ಎರಡು ದಿನ ನಾನು ಉಡುಪಿಯಲ್ಲಿ ಇರುತ್ತೇನೆ. ಕಾಲೇಜಿಗೆ ಭೇಟಿ ಕೊಡುತ್ತೇನೆ” ಎಂದು ತಿಳಿಸಿದರು.
ಬಳಿಕ ಉಡುಪಿ ಪ್ರವಾನಿ ಮಂದಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಜೊತೆ ಖುಷ್ಬೂ ಸುಂದರ್ ಮಹತ್ವದ ಸಭೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೆ ವಿದ್ಯಾ ಕುಮಾರಿ ಕೂಡ ಹಾಜರಿದ್ದಾರೆ.
ಕಾಲೇಜಿನಲ್ಲಿ ನಡೆದ ಅನುಚಿತ ಘಟನೆಯ ಮಹಿಳಾ ಆಯೋಗದ ಪರವಾಗಿ ಖುಷ್ಬೂ ಮಾಹಿತಿ ಪಡೆದಿದ್ದಾರೆ. ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ನ ವಿವರವನ್ನೂ ಪಡೆದಿದ್ದಾರೆ.
ಉಡುಪಿಗೆ ತೆರಳಿರುವ ಬಗ್ಗೆ ಟ್ವೀಟ್ ಮಾಡಿರುವ ಖುಷ್ಬೂ ಸುಂದರ್, “ಉಡುಪಿಯಲ್ಲಿ ತನಿಖೆ ನಡೆಯುತ್ತಿದೆ. ಪೊಲೀಸರನ್ನು ಭೇಟಿ ಮಾಡಿ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ವಿಭಿನ್ನ ಕಥೆಗಳು, ವಿಭಿನ್ನ ಸಿದ್ಧಾಂತಗಳು, ವಿಭಿನ್ನ ತೀರ್ಮಾನಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡುತ್ತಿವೆ. ನಕಲಿ ವಾಟ್ಸ್ಆ್ಯಪ್ ಫಾರ್ವರ್ಡ್‌ಗಳು ನಿಲ್ಲಬೇಕು. ನಾನು ದೆಹಲಿಯಿಂದ ಉಡುಪಿಗೆ ತೆರಳಿದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಥವರ ಡಿಎನ್ಎಯಲ್ಲಿ ಹತಾಶೆ ಕಾಣಿಸುತ್ತಿದೆ” ಎಂದು ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆರೋಪಿಗಳನ್ನು ಅಮಾಯಕರು ಎನ್ನುವ ಸ್ಥಿತಿಗೆ ಬಂದಿರುವುದು ಅಪಾಯಕಾರಿ ಬೆಳವಣಿಗೆ: ಸಿ ಟಿ ರವಿ
ಉಡುಪಿ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ; ಸಿದ್ದರಾಮಯ್ಯ
ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದೆ ಎಂದು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಕೆಲವರು ಏನೇನೋ ಹೇಳುತ್ತಾರೆ. ಮಹಿಳಾ ಆಯೋಗದವರು ಭೇಟಿ ನೀಡಿದ್ದಾರೆ. ಅವರು ಏನು ಹೇಳುತ್ತಾರೆ ನೋಡೋಣ ಎಂದು ಹೇಳಿದರು.