ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ, ಸಾಮಾಜಿಕ ನ್ಯಾಯವನ್ನು ಕೊನೆಗೊಳಿಸುವ ಯುಜಿಸಿ ನಿಯಮಾವಳಿಗಳ ತಿದ್ದುಪಡಿಯನ್ನು ವಿರೋಧಿಸಬೇಕಿದೆ, ಸಂಪೂರ್ಣವಾಗಿ ತಿರಸ್ಕರಿಸಬೇಕಿದೆ. ಇದಕ್ಕಾಗಿ ಪ್ರಜಾತಾಂತ್ರಿಕವಾದ ರಾಜಕೀಯ, ಸಾಮಾಜಿಕ ಜನಾಂದೋಲನ ಹಮ್ಮಿಕೊಳ್ಳಬೇಕಿದೆ.
ಜೂನ್ 2019ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಸ್ತೂರಿ ರಂಗನ್ ಸಮಿತಿಯ ಹೊಸ ಶಿಕ್ಷಣ ನೀತಿಯನ್ನು ಪ್ರಕಟಿಸಿತು. ಅಂದಿನಿಂದ ಶಿಕ್ಷಣ ತಜ್ಞರು ಎನ್‌ಇಪಿಯ ಉದ್ದೇಶವೇ ʼನಾಲ್ಕು ಸಿ ಒಂದು ಬಿʼ ಅಂತ ಆಗಿನಿಂದ ಹೇಳುತ್ತಲೇ ಬಂದಿದ್ದರು.
- ಕೇಂದ್ರೀಕರಣ(ಸೆಂಟ್ರಲೈಸೇಶನ್)
- ವ್ಯಾಪಾರೀಕರಣ(ಕಮರ್ಷಿಯಲೈಸೇಶನ್)
- ಕಾರ್ಪೋರೇಟೀಕರಣ(ಕ್ಯಾಪಿಟಲೈಸೇಶನ್)
- ಮತಧರ್ಮಾಂದೀಕರಣ(ಕಮ್ಯೂನಲೈಸೇಶನ್)
- ಬ್ರಾಹ್ಮಣೀಕರಣ
ಜೊತೆಗೆ
- ಸಾರ್ವಜನಿಕ ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಯಿಂದ ಹಿಂದೆ ಸರಿಯುವುದು
- ವೃತ್ತಿಪರ ಶಿಕ್ಷಣದ ಮೂಲಕ ಉದ್ಯೋಗ ಸೃಷ್ಟಿ ಎನ್ನುವ ಭ್ರಮೆಯ ಪ್ರಚಾರ
- ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಜಾರಿಯಲ್ಲಿರುವ ಲಿಬರಲ್ ಆರ್ಟ್ಸ್ ಪದ್ಧತಿಯ ಸಾರ್ವತ್ರೀಕರಣ
ಇದೇ ಸಂದರ್ಭದಲ್ಲಿ
- ಶಿಕ್ಷಣದ ಭಾಗೀದಾರರಾದ ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳ ಮೌನ
- ಸಾರ್ವಜನಿಕ ನೀತಿ ನಿರೂಪಣೆಯ ಸಂದರ್ಭದಲ್ಲಿ ಪಾಲ್ಗೊಳ್ಳದಿರುವುದು
ಇದರ ಫಲವಾಗಿ ಎನ್‌ಇಪಿ ಶಿಫಾರಸ್ಸುಗಳನ್ನು ಆಧರಿಸಿ 5 ಜನವರಿ 2025ರಂದು ಯುಜಿಸಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಅದರ ಕರಡು ಪ್ರತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. 5 ಫೆಬ್ರವರಿ 2025ರ ಒಳಗೆ ನಮ್ಮ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದ್ದಾರೆ.
ಈ ತಿದ್ದುಪಡಿಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ, ರಾಜ್ಯಗಳು ಅಧಿಕಾರದ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲುಗೊಳಿಸುತ್ತದೆ. ಸಂವಿಧಾನದ ಅನುಬಂಧ 7ರ ಅಡಿಯಲ್ಲಿ ಸಮವರ್ತಿ ಪಟ್ಟಿಯಲ್ಲಿ ಬರುವ ನಮೂದು 25ರ ಅನುಸಾರ ತಾಂತ್ರಿಕ, ವೈದ್ಯಕೀಯ ಶಿಕ್ಷಣ, ವಿಶ್ವವಿದ್ಯಾಲಯಗಳನ್ನು ಒಳಗೊಂಡ ಶಿಕ್ಷಣ. ನಮೂದು 26ರ ಅನುಸಾರ ಕಾನೂನು, ವೈದ್ಯಕೀಯ ಮತ್ತು ಇತರ ವೃತ್ತಿಗಳಲ್ಲಿ ರಾಜ್ಯಗಳಿಗೆ ಸಮಾನ ಹಕ್ಕು, ಅಧಿಕಾರವಿದೆ. ಆದರೆ ಯುಜಿಸಿ ರಾಜ್ಯಗಳೊಂದಿಗೆ, ಶಿಕ್ಷಣದ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತಿದ್ದುಪಡಿಗಳನ್ನು ಪ್ರಕಟಿಸುವುದು ಸಮವರ್ತಿ ಪಟ್ಟಿಯನ್ನು ಅಸಿಂಧುಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.
ಇದನ್ನು ಓದಿದ್ದೀರಾ?: ಹಿಂದಿ ಹೇರಿಕೆ | ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ: ಉದಯನಿಧಿ ಸ್ಟ್ಯಾಲಿನ್ ಘೋಷಣೆ
ಇದುವರೆಗೂ ಯುಜಿಸಿ ಕೇವಲ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ನೇರವಾಗಿ ನಿಯಂತ್ರಣಗಳನ್ನು(ರೆಗ್ಯುಲೇಶನ್ಸ್) ಪ್ರಕಟಿಸುತ್ತಿದೆ. ಇದು ಸಹ ಸಂವಿಧಾನ ವಿರೋಧಿ ನಡೆಯಾಗಿದೆ
ಈ ತಿದ್ದುಪಡಿಯ ಮುಖ್ಯ ಅಂಶಗಳು
1. ಯುಜಿಸಿ ಮಾನ್ಯತೆ ಇರುವ ಪ್ರತಿ ವಿಶ್ವವಿದ್ಯಾಲಯ, ಸಂಸ್ಥೆ ಕಾಲೇಜು, ಸಂಯೋಜಿತ ಕಾಲೇಜು, ಡೀಮ್ ವಿಶ್ವವಿದ್ಯಾಲಯಗಳಿಗೂ ಈ ನಿಯಮಾವಳಿ ಅನ್ವಯಿಸಲು ಉದ್ದೇಶಿಸಲಾಗಿದೆ. ಹೊಸ ನಿಯಮಾವಳಿ ಜಾರಿಗೆ ಬಂದರೆ ಎಂಜಿನಿಯರಿಂಗ್, ತಾಂತ್ರಿಕ ಶಿಕ್ಷಣ, ಆಡಳಿತ ನಿರ್ವಹಣೆಯ (ಬಿಬಿಎ, ಎಂಬಿಎ ಇತ್ಯಾದಿ) ವಿವಿ/ಕಾಲೇಜುಗಳಿಗೂ ಅನ್ವಯವಾಗಲಿದೆ.
2. ಕುಲಪತಿಗಳ ನೇಮಕಾತಿ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ತರಲು ಯುಜಿಸಿ ಉದ್ದೇಶಿಸಿದೆ.
3. ಬೋಧಕರ ನೇಮಕಾತಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕರಡುವಿನಲ್ಲಿ ಸಡಿಲಗೊಳಿಸಲಾಗಿದೆ
4. ರಾಜ್ಯಪಾಲರಿಗೆ ಸಂಪೂರ್ಣ ಅಧಿಕಾರ ಕೊಡಲಾಗಿದೆ
5. ರಾಜ್ಯಗಳ ಅಧೀನದಲ್ಲಿರುವ ವಿವಿಗಳಿಗೆ ಆಯಾ ರಾಜ್ಯಗಳ ರಾಜ್ಯಪಾಲರೇ ಕುಲಾಧಿಪತಿ ಆಗಿರುತ್ತಾರೆ.
ಪ್ರಸ್ತಾಪ: ಇದುವರೆಗಿನ ನಿಯಮದಂತೆ, ಯಾವುದೇ ವಿಶ್ವವಿದ್ಯಾಲಯದ ಉಪಕುಲಪತಿ ಆಗಬೇಕು ಎಂದರೆ ಅವರು ಮೊದಲು ಹತ್ತು ವರ್ಷಗಳ ಅವಧಿಯಲ್ಲಿ ಬೋಧಕರಾಗಿರಬೇಕು. ಅದನ್ನು ಕರಡು ನಿಯಮಾವಳಿಯಲ್ಲಿ ಬದಲಿಸಲಾಗಿದೆ.

ಇದರ ಪ್ರಕಾರ ಉಪಕುಲಪತಿಗಳ ನೇಮಕಾತಿಗೆ ಅಭ್ಯರ್ಥಿಗಳ ಅರ್ಹತೆಯು ಉನ್ನತ ಶಿಕ್ಷಣದಲ್ಲಿ ಬೋಧನೆ ಅನುಭವ ಇರುವ ಪ್ರಾಧ್ಯಾಪಕರು ಅಥವಾ ಮಾನ್ಯತೆ ಪಡೆದ ಹಿರಿಯ ಶ್ರೇಣಿಯ ಸಂಶೋಧಕರು ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧಿಸಿದ ಅನುಭವ ಅಥವಾ ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿಯ ಜತೆಗೆ ಶೈಕ್ಷಣಿಕ ಕ್ಷೇತ್ರದ ಹೊರಗಿನ ಹಲವು ವಲಯಗಳ ಪರಿಣತರಿಗೂ ಕುಲಪತಿ ಆಗಲು ಅವಕಾಶ ಕಲಿಸಲಾಗಿದೆ. ಇವರನ್ನು ಪ್ರೊಫೆಸರ್ ಆಫ್ ಪ್ರಾಕ್ಟಿಸ್ ಎಂದು ಕರೆಯಲಾಗಿದೆ. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಮತ್ತು ಇತರ ತಾಂತ್ರಿಕ ಉದ್ಯಮಗಳ ತಜ್ಞರು/ವೃತ್ತಿಪರರನ್ನು, ಸಾರ್ವಜನಿಕ ಆಡಳಿತದಲ್ಲಿ ಅನುಭವ ಇರುವ ಹಿರಿಯ ಶ್ರೇಣಿಯ ಸಿಬ್ಬಂದಿ ಉಪಕುಲಪತಿಗಳಾಗಿ ನೇಮಕ ಮಾಡಲು, ಬೋಧನೆ ಮತ್ತು ಸಂಶೋಧನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕರಡು ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಆದರೆ, ಇವರ ನಿಯೋಜನೆಯು ಮಂಜೂರಾದ ಹುದ್ದೆಗಳಿಗೆ ಹೊರತಾಗಿರುತ್ತದೆ. ಒಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಕಾಲದಲ್ಲಿ ಇವರ ಪ್ರಮಾಣವು ಶೇ.10ಕ್ಕಿಂತ ಹೆಚ್ಚಾಗಬಾರದು ಎಂದು ನಿಯಮ ಹೇಳುತ್ತದೆ. ಜೊತೆಗೆ ಶೋಧನಾ (ಆಯ್ಕೆ) ಸಮಿತಿಯು ಪ್ರತಿಭಾ ಶೋಧ ಅಥವಾ ನಾಮನಿರ್ದೇಶನದ ಮೂಲಕವೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು.
ಕರಡು ನಿಯಮಾವಳಿಯು ಕುಲಪತಿ ನೇಮಕಾತಿಯಲ್ಲಿ ರಾಜ್ಯ ಸರ್ಕಾರದಿಂದ ಕಸಿದುಕೊಡು ರಾಜ್ಯಪಾಲರಿಗೆ ಅಧಿಕಾರ ನೀಡುತ್ತದೆ.
ಇದುವರೆಗೆ, ರಾಜ್ಯ ಸರ್ಕಾರಗಳು ಕುಲಪತಿ ಆಯ್ಕೆಗಾಗಿ ಮೂವರಿಂದ ಐವರು ತಜ್ಞರನ್ನೊಳಗೊಂಡ ಶೋಧನಾ ಸಮಿತಿ ನೇಮಿಸುತ್ತಿತ್ತು. ಈಗ ಕರಡು ನಿಯಮಾವಳಿಯನ್ನು ಬದಲಿಸಲಾಗಿದ್ದು ಕುಲಾಧಿಪತಿ ನಾಮ ನಿರ್ದೇಶಿತ ಅಧ್ಯಕ್ಷ, ಯುಜಿಸಿ ನಾಮ ನಿರ್ದೇಶಿತ ಸದಸ್ಯ, ವಿವಿ ಸಿಂಡಿಕೇಟ್/ ಕಾರ್ಯನಿರ್ವಾಹಕ ಪರಿಷತ್ ನಾಮ ನಿರ್ದೇಶಿತ ಸದಸ್ಯ ಮೂವರನ್ನು ಒಳಗೊಂಡ ತಜ್ಞರ ಶೋಧನಾ ಸಮಿತಿ ನೇಮಿಸುವ ಅಧಿಕಾರವನ್ನು ಕುಲಾಧಿಪತಿಗೆ (ರಾಜ್ಯಪಾಲರಿಗೆ) ನೀಡಲಾಗಿದೆ.
ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರು ನೇಮಕ ಮಾಡುವ ಸಮಿತಿಗೆ ಕುಲಪತಿಯೇ ಅಧ್ಯಕ್ಷರಾಗಿರುತ್ತಾರೆ. ಅವರ ಜೊತೆಗೆ ಪ್ರಾಧ್ಯಾಪಕರ ಶ್ರೇಣಿಗೆ ಕಡಿಮೆ ಇಲ್ಲದಂಥ ಅಧ್ಯಾಪಕರನ್ನು ಕುಲಪತಿ ಆಯ್ಕೆ ಮಾಡುತ್ತಾರೆ. ಮೂವರು ಬಾಹ್ಯ ಪರಿಣಿತರನ್ನು ನೇಮಿಸುತ್ತಾರೆ.
ಬಾಧಕಗಳು:
ಕೇಂದ್ರದಿಂದ ನೇಮಕಗೊಂಡ ಶಿಕ್ಷಣ ತಜ್ಞರಲ್ಲದ ರಾಜ್ಯಪಾಲರ ಮೂಲಕ ಉನ್ನತ ಶಿಕ್ಷಣದಲ್ಲಿ ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸಿ ಸಂಪೂರ್ಣವಾಗಿ ಕೇಂದ್ರೀಕರಣಗೊಳಿಸುವ ಪಿತೂರಿ ಎನ್ನುವುದು ಸ್ಪಷ್ಟವಾಗುತ್ತದೆ. ಶಿಕ್ಷಣ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಕೇಂದ್ರ ಬಿಜೆಪಿ ಸರ್ಕಾರದ ಉದ್ದೇಶ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯ ಸರ್ಕಾರದ ಪ್ರತಿನಿಧಿ ಇಲ್ಲದ ಕಾರಣ ಅದರ ಎಲ್ಲಾ ಅಧಿಕಾರವನ್ನು ಕಡೆಗಣಿಸಲಾಗಿದೆ. ಬಿಜೆಪಿ ಆಡಳಿತದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಆರೆಸ್ಸೆಸ್ ಬೆಂಬಲಿತ ಶೋಧನಾ ಸಮಿತಿ ರಚಿಸಲಾಗುತ್ತದೆ ಮತ್ತು ಆ ಮೂಲಕ ಅವರ ಪರ ಅಭ್ಯರ್ಥಿಯನ್ನು ಉಪಕುಲಪತಿಗಳಾಗಿ ಆಯ್ಕೆ ಮಾಡಲಾಗುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ಕಡೆಗೂ ಒಕ್ಕೂಟ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ ಮತ್ತು ಆರೆಸ್ಸೆಸ್ ಸಿದ್ಧಾಂತದ ವೈಸ್ ಚಾನ್ಸಲರ್ ಆಯ್ಕೆಯಾಗುತ್ತಾರೆ.
ಇದನ್ನು ಓದಿದ್ದೀರಾ?: ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಸ್ವೀಕಾರ: ಯಾರು ಈ ಜ್ಞಾನೇಶ್ ಕುಮಾರ್?
ಎರಡನೆಯದಾಗಿ ಲ್ಯಾಟರಲ್ ಪ್ರವೇಶಕ್ಕೆ ಅನುಮತಿ ಕೊಡಲಾಗಿದೆ. ಪರಿಣಿತರ ನೆಪದಲ್ಲಿ ಅಕಾಡೆಮಿಕ್, ಸಂಶೋಧನೆ, ಬೋಧನೆ ಅನುಭವವಿಲ್ಲದ ಖಾಸಗಿ ಕ್ಷೇತ್ರದಲ್ಲಿರುವ ವ್ಯಕ್ತಿಗಳನ್ನು, ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ವ್ಯಕ್ತಿಗಳನ್ನು, ಬಂಡವಾಳಶಾಹಿಗಳನ್ನು ಉಪಕುಲಪತಿಗಳಾಗಿ ಆಯ್ಕೆ ಮಾಡುವುದು ಮೀಸಲಾತಿ ನೀತಿಯನ್ನು ಉಲ್ಲಂಘಿಸಲಾಗುತ್ತದೆ. ಇದು ಸಾಮಾಜಿಕ ನ್ಯಾಯದ ಮೇಲೆ ದೀರ್ಘಕಾಲದಲ್ಲಿ ದುಷ್ಪರಿಣಾಮ ಬೀರುತ್ತದೆ. ವಂಚಿತ ಸಮುದಾಯಗಳ, ಬಡ ಕುಟುಂಬಗಳ ವಿದ್ಯಾರ್ಥಿಗಳ ಒಳಗೊಳ್ಳುವಿಕೆ ಆಶಯಕ್ಕೆ ಹಿನ್ನಡೆಯಾಗುತ್ತದೆ.
ಹಾಗಾದರೆ, ಶೈಕ್ಷಣಿಕ ಹಿನ್ನಲೆ ಇಲ್ಲದ, ಸಂಶೋಧನೆ, ಬೋಧನೆಯ ಅನುಭವ ಇಲ್ಲದವರು ಹೇಗೆ ವಿವಿಯನ್ನು ಮುನ್ನಡೆಸಬಲ್ಲರು?
ಪ್ರಸ್ತಾಪ: ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ರಾಷ್ಟ್ರೀಯ ಮಟ್ಟದಲ್ಲಿ ಜಾಹೀರಾತು ಪ್ರಕಟಿಸಬೇಕು, ರಾಜ್ಯಪಾಲರು ನೇಮಿಸಿದ ಶೋಧನಾ ಸಮಿತಿ ಮೂಲಕ ಆಯ್ಕೆ ಮಾಡಬೇಕು.
ಬಾಧಕ: ಇದು ಸ್ಥಳೀಯ ಆಯ್ಕೆ ಪ್ರಕ್ರಿಯೆಯನ್ನು ಕೊನೆಗೊಳಿಸುತ್ತದೆ. ರಾಜ್ಯದೊಳಗಿನ ಅಭ್ಯರ್ಥಿಗಳ ಅವಕಾಶವನ್ನು ಕಸಿದುಕೊಂಡು ಹೊರಗಿನ ಅಭ್ಯರ್ಥಿಗಳ ಆಯ್ಕೆಗೆ ಮುಕ್ತಗೊಳಿಸಲಾಗುತ್ತದೆ. ಸಾಮಾಜಿಕ ನ್ಯಾಯವನ್ನು ಪಾಲಿಸದೆ ಅದರ ಆಶಯವನ್ನು ಭಗ್ನಗೊಳಿಸಲಾಗುತ್ತದೆ.
ಹೀಗಾಗಿ ರಾಜ್ಯದೊಳಗಿನ ಶಿಕ್ಷಣ ಸಂಸ್ಥೆಗಳಿಗೆ ಆಯಾ ರಾಜ್ಯಗಳ ವಿವಿ, ಕಾಲೇಜು, ಪತ್ರಿಕೆಗಳಲ್ಲಿ ಮಾತ್ರ ಜಾಹೀರಾತು ಪ್ರಕಟಿಸಬೇಕು, ಮೀಸಲಾತಿ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಆಯ್ಕೆ ಸಮಿತಿಯನ್ನು ಕೇಂದ್ರ ಶಿಕ್ಷಣ ಇಲಾಖೆ, ಯುಜಿಸಿ, ರಾಜ್ಯಪಾಲರು ರಚಿಸುವಂತಿಲ್ಲ, ಆಯಾ ರಾಜ್ಯ ಸರ್ಕಾರಗಳ ಹೊಣೆಗಾರಿಕೆಯಾಗಿರುತ್ತದೆ.
ಪ್ರಸ್ತಾಪ: ಸಹಾಯಕ, ಸಹ ಪ್ರಾಧ್ಯಾಪಕರ ನೇಮಕಾತಿಗೆ ಪದವಿ ಶಿಕ್ಷಣ(ಶೇ.75ರಷ್ಟು ಅಂಕಗಳು) (NCrF Level 6) ಹಾಗೂ ಸ್ನಾತಕೋತ್ತರ ಶಿಕ್ಷಣ(ಶೇ.55ರಷ್ಟು ಅಂಕಗಳು) (NCrF Level 6.5) ವಿಷಯಗಳು ಮತ್ತು ಪಿಎಚ್.ಡಿ (NCrF Level 8) ವಿಷಯಗಳು ಬೇರೆಯಾಗಿದ್ದರೆ ಪಿಎಚ್.ಡಿ ವಿಷಯವನ್ನು ಪರಿಗಣಿಸಬೇಕು. ಪದವಿ ಮತ್ತು ಸ್ನಾತಕೋತ್ತರ ವಿಷಯಗಳು ಮತ್ತು ನೆಟ್/ಸೆಟ್ ವಿಷಯಗಳು ಬೇರೆಯಾಗಿದ್ದರೆ ನೆಟ್/ಸೆಟ್ ವಿಷಯವನ್ನು ಪರಿಗಣಿಸಬೇಕು.
ಬಾಧಕ: ಈ ತಿದ್ದುಪಡಿಯು ಸ್ನಾತಕೋತ್ತರ ವ್ಯಾಸಂಗವನ್ನು ಅಪ್ರಸ್ತುತಗೊಳಿಸುತ್ತದೆ. ಕೇವಲ ಪಿಎಚ್.ಡಿ ಅಥವಾ ನೆಟ್/ಸೆಟ್ ಪದ್ಧತಿಯನ್ನು ಮಾತ್ರ ಉತ್ತೇಜಿಸುತ್ತದೆ. ಇದರಿಂದ ಸ್ನಾತಕೋತ್ತರ ಕಲಿಕೆಯ ಮಹತ್ವವೇ ಕೊನೆಗೊಳ್ಳುವುದು ಆಪೇಕ್ಷಣೀಯವಲ್ಲ. ಉದಾಹರಣೆಗೆ ಸ್ನಾತಕೋತ್ತರ ಪದವಿಯಲ್ಲಿ ಭಾಷೆ/ಸಮಾಜ ಶಾಸ್ತ್ರ ಕಲಿತ ವಿದ್ಯಾರ್ಥಿಗಳು ನೆಟ್/ಸೆಟ್‌ನಲ್ಲಿ ವಿಜ್ಞಾನವನ್ನು ಆಯ್ದುಕೊಂಡರೆ ಸ್ನಾತಕೋತ್ತರ ಪದವಿ ಅಪ್ರಸ್ತುತಗೊಳ್ಳುತ್ತದೆ. ಭಾಷೆ/ಸಮಾಜ ಶಾಸ್ತ್ರದಲ್ಲಿ ಪದವಿ, ಸ್ನಾತಕೋತ್ತರ ಮಾಡಿದ ವಿದ್ಯಾರ್ಥಿಗಳು ತಾವು ಪರಿಣಿತರಲ್ಲದ ವಿಜ್ಞಾನವನ್ನು ಬೋಧಿಸಬೇಕಾಗುತ್ತದೆ. ಇದರಿಂದ ಬೋಧನಾ ಮತ್ತು ಕಲಿಕಾ ಕ್ರಮಕ್ಕೆ ತೀವ್ರವಾಗಿ ಹಿನ್ನಡೆಯಾಗುತ್ತದೆ. ಬದಲಿಗೆ 2018ರ ನೀತಿಯಂತೆ ಸ್ನಾತಕೋತ್ತರ ಪದವಿ ಜೊತೆಗೆ ಪಿಎಚ್‌ಡಿ(ಕಡ್ಡಾಯವಲ್ಲ) ಪದ್ಧತಿಯನ್ನು ಉಳಿಸಿಕೊಳ್ಳಬೇಕು.
ಎನ್‌ಇಪಿ 2020 ಅಳವಡಿಸಿಕೊಳ್ಳದ ರಾಜ್ಯಗಳಾದ(ಸಧ್ಯದ ಸಂದರ್ಭದಲ್ಲಿ) ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳಿಗೆ NCrF Level 6,6.5,8 ಅನ್ವಯಿಸುವುದಿಲ್ಲ. ಇಲ್ಲಿನ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಲ್ಲಿ ಸೆಮಿಸ್ಟರ್, ಸಿಬಿಸಿಎಸ್, ಎಸ್‌ಇಪಿ ಪದ್ಧತಿಯಲ್ಲಿ ಓದಿದ Semester / CBCS / SEP ಪದವಿ, ಸ್ನಾತಕ್ಕೋತ್ತರ ವಿದ್ಯಾರ್ಥಿಗಳನ್ನು NCrF Levelನಲ್ಲಿ ಸಾಧ್ಯವಿಲ್ಲ. ಮೂರು ವರ್ಷ ಪದವಿ, ಎರಡು ವರ್ಷ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಅನರ್ಹರಾಗುತ್ತಾರೆ. ಇದಕ್ಕೆ ಪರಿಹಾರವೇನು? ವಿದ್ಯಾರ್ಥಿಗಳ ಭವಿಷ್ಯವೇನು?
ಇದನ್ನು ಓದಿದ್ದೀರಾ?: ಅಲ್ಪಸಂಖ್ಯಾತರ ಶೈಕ್ಷಣಿಕ-ಸಾಮಾಜಿಕ-ಆರ್ಥಿಕ ಪ್ರಗತಿಗಾಗಿ ಸರ್ಕಾರದ ಕಾರ್ಯಕ್ರಮಗಳೇನು?
ಇದು ಕಡ್ಡಾಯಗೊಂಡರೆ ಈ ರಾಜ್ಯಗಳ ವಿದ್ಯಾರ್ಥಿಗಳು ಸಹಾಯಕ, ಸಹ ಪ್ರಾಧ್ಯಾಪಕರಾಗಲು ಅನರ್ಹರಾಗುತ್ತಾರೆ. ಇದು ಅಪಾಯಕಾರಿಯಾಗಿದೆ. ವಂಚಿತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವೇ ಮೊಟಕುಗೊಳ್ಳುತ್ತದೆ.
ಪ್ರಸ್ತಾಪ: ನೇಮಕಾತಿ, ಭಡ್ತಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಟಿಸಿದ, ಸಂಶೋಧನೆ ಪ್ರಬಂಧಗಳು, ಒಳಗೊಂಡಂತೆ ಅನೇಕ ಅರ್ಹತೆಗಳನ್ನು ಹೇಳಿದ್ದಾರೆ. ಇದರಲ್ಲಿ ”ಭಾರತೀಯ ಭಾಷೆಗಳಲ್ಲಿ ಬೋಧಿಸಿರುವುದು” ಎಂಬುದೂ ಸಹ ಒಂದು ಅರ್ಹತೆಯಾಗಿದೆ.
ಬಾಧಕ: ಕೇವಲ ಭಾರತೀಯ ಭಾಷೆ ಎಂದಿರುವುದು ಇಂಗ್ಲಿಷ್ ಭಾಷೆಯನ್ನು ಈ ಪಟ್ಟಿಯಿಂದ ಹೊರಗಿಡುತ್ತದೆ, ಇದು ಅಪೇಕ್ಷಣೇಯವಲ್ಲ. ಮತ್ತು ಭಾರತೀಯ ಭಾಷೆಯ ನೆಪದಲ್ಲಿ ಹಿಂದಿ, ಸಂಸ್ಕೃತವನ್ನು ಪ್ರಚಾರ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ‘ಜಾಗತಿಕ ಭಾಷೆಗಳನ್ನು ಒಳಗೊಂಡಂತೆ ಎಲ್ಲಾ ಭಾಷೆಗಳು’ ಎಂದು ಬದಲಿಸಬೇಕು.
ಮತ್ತು ಈ ಅರ್ಹತೆಗಳನ್ನು ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಭಡ್ತಿಗೆ ಮಾತ್ರ ಅನ್ವಯಿಸಬೇಕು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅನ್ವಯಿಸಬಾರದು. ಮತ್ತು ಆರಂಭದ ನೇಮಕಾತಿಗೆ ಪಿಎಚ್.ಡಿಯನ್ನು ಕಡ್ಡಾಯಗೊಳಿಸಬಾರದು.
ಪ್ರಸ್ತಾಪ: ಅ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 8 ವರ್ಷಗಳ ಕನಿಷ್ಠ ಅನುಭವ ಮತ್ತು ಬೋಧನೆ ಮತ್ತು/ಅಥವಾ ಸಂಶೋಧನೆಯ ಅನುಭವ ಬೇಕು ಎಂದು ಹೇಳಿದ್ದಾರೆ.
ಬಾಧಕ: ಇಲ್ಲಿ ಬೋಧನೆಯ ಅನುಭವವನ್ನು ಕಡ್ಡಾಯಗೊಳಿಸಬೇಕು. ಬೋಧನೆ ಅಥವಾ ಸಂಶೋಧನೆ ಎನ್ನುವುದನ್ನು ತೆಗೆಯಬೇಕು.
ಪ್ರಸ್ತಾಪ: ಪ್ರಾಂಶುಪಾಲರ ನೇಮಕಾತಿಗೆ ರಾಷ್ಟ್ರೀಯ ಮಟ್ಟದಲ್ಲಿ ಜಾಹೀರಾತು ಪ್ರಕಟಿಸಬೇಕು.
ಬಾಧಕ: ಇದು ಸ್ಥಳೀಯ ಆಯ್ಕೆ ಪ್ರಕ್ರಿಯೆಯನ್ನು ಕೊನೆಗೊಳಿಸುತ್ತದೆ. ಹೀಗಾಗಿ ರಾಜ್ಯದೊಳಗಿನ ಶಿಕ್ಷಣ ಸಂಸ್ಥೆಗಳಿಗೆ ಆಯಾ ರಾಜ್ಯಗಳ ವಿವಿ, ಕಾಲೇಜು, ಪತ್ರಿಕೆಗಳಲ್ಲಿ ಮಾತ್ರ ಜಾಹೀರಾತು ಪ್ರಕಟಿಸಬೇಕು, ಮೀಸಲಾತಿ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು.
ಆಯ್ಕೆ ಸಮಿತಿಯನ್ನು ಕೇಂದ್ರ ಶಿಕ್ಷಣ ಇಲಾಖೆ, ಯುಜಿಸಿ, ರಾಜ್ಯಪಾಲರು ರಚಿಸುವಂತಿಲ್ಲ, ಆಯಾ ರಾಜ್ಯ ಸರ್ಕಾರಗಳ ಹೊಣೆಗಾರಿಕೆಯಾಗಿರುತ್ತದೆ.
ಮುಖ್ಯವಾಗಿ ಈ ತಿದ್ದುಪಡಿಗಳಲ್ಲಿ ಮೀಸಲಾತಿ ನೀತಿ ಮತ್ತು ಒಳಗೊಳ್ಳುವಿಕೆಯ ಕುರಿತು ಯಾವುದೇ ಬಗೆಯ ಪ್ರಸ್ತಾಪವಿಲ್ಲ.
ಪ್ರಸ್ತಾಪ: ಯುಜಿಸಿ ನಿಯಮಾವಳಿ ತಿದ್ದುಪಡಿಗಳನ್ನು ಪಾಲಿಸದಿದ್ದರೆ, ಉಲ್ಲಂಘಿಸಿದರೆ, ಯುಜಿಸಿ ಯೋಜನೆಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸುವುದು, ಪದವಿ ಪ್ರೋಗ್ರಾಮ್‌ಗಳನ್ನು ನಿಷೇಧಿಸುವುದು, ಯುಜಿಸಿ/ ಉನ್ನತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಪಡೆದ ಪಟ್ಟಿಯಿಂದ ತೆಗೆದು ಹಾಕಲಾಗುವುದು(ಡಿಬಾರ್), ಆನ್‌ಲೈನ್ ದೂರ ಸಂಪರ್ಕ ಶಿಕ್ಷಣ, ಆನ್‌ಲೈನ್ ಪ್ರೋಗ್ರಾಂಗಳ ಅನುಮತಿಯನ್ನು ನಿಷೇಧಿಸಲಾಗುವುದು.
ಮೇಲಿನ ಶಿಕ್ಷೆ ಕ್ರಮಗಳು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ, ಸರ್ವಾಧಿಕಾರಿ ಧೋರಣೆಯಾಗಿದೆ.

ಇದರ ಜೊತೆಗೆ ಮುಂಬರಲಿರುವ ನೀತಿಗಳು
ಈಗಾಗಲೇ ಕೇಂದ್ರೀಯ ವಿವಿಗಳ ಪ್ರವೇಶಾತಿಗೆ ಎನ್‌ಟಿಎ ಮೂಲಕ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯ ವಿವಿಗಳಿಗೂ ಅನ್ವಯಿಸಲಾಗುತ್ತದೆ. ಇದರಿಂದ ಮಾನವಿಕ ವಿಷಯಗಳ ಪದವಿ, ಸ್ನಾತಕೋತ್ತರ ವ್ಯಾಸಂಗಕ್ಕೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ನೀತಿ ಜಾರಿಗೊಳಿಸುತ್ತಾರೆ. ಇದು ವಂಚಿತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣವನ್ನೇ ಮೊಟಕುಗೊಳಿಸುತ್ತದೆ. ಕೋಚಿಂಗ್ ಮಾಫಿಯಾವನ್ನು ಉತ್ತೇಜಿಸುತ್ತದೆ.
ಹಾಗೆಯೇ ಪದವಿ ಕಾಲೇಜುಗಳ ಅಫಿಲಿಯೇಶನ್ ರದ್ದುಗೊಳಿಸಿ ಸ್ವಾಯತ್ತತೆ ನೀತಿ ಜಾರಿಗೊಳಿಸಲು ಮುಂದಾಗಿದ್ದಾರೆ. ಆಗ ಪ್ರತಿಯೊಂದು ಕಾಲೇಜು ತನ್ನ ಹಣಕಾಸಿನ ನಿರ್ವಹಣೆಯನ್ನು ತಾನೇ ಹೊರಬೇಕು. ಇದು ಸರ್ಕಾರಿ ಕಾಲೇಜುಗಳಿಗೆ ಮಾರಕವಾಗುತ್ತದೆ.
43,000 ಕಾಲೇಜುಗಳನ್ನು ರೆಗ್ಯಲರೈಸ್ ಮಾಡಿ 2030ರ ವೇಳೆಗೆ 15,000 ಕಾಲೇಜುಗಳು ಪೆಡಗಾಜಿಯನ್ನು ರೂಪಿಸುವ ಹಕ್ಕನ್ನು ರಾಜ್ಯಗಳಿಂದ ಕಸಿದುಕೊಳ್ಳಲಾಗುವುದು.
ಮೇಲಿನ ಎಲ್ಲಾ ತಿದ್ದುಪಡಿಗಳು ಎನ್ಇಪಿ 2020 ಶಿಫಾರಸ್ಸುಗಳನ್ನು ಆಧರಿಸಿದೆ. ನಾವು ಈ ನೀತಿಯನ್ನು ವಿರೋಧಿಸದೆ ಮೌನವಾಗಿರುವ ಕಾರಣಕ್ಕೆ ಇಂದು ಅದರ ಪ್ರತಿಗಾಮಿ ನೀತಿಗಳು ಜಾರಿಗೊಳ್ಳುವ ಹಂತದಲ್ಲಿದೆ.
ಕಾನೂನು ಮಾರ್ಗ
ಯುಜಿಸಿ ಕಾಯ್ದೆ 1956ರ ಪ್ರಕಾರ ‘ವಿಶ್ವವಿದ್ಯಾಲಯಗಳ ಸ್ಟಾಂಡರ್ಡ್‌ಗಳ ಸಮನ್ವಯ, ನಿರ್ಣಯದ ಉದ್ದೇಶ’ ಎಂದು ಹೇಳಿದ್ದಾರೆ.
ವಿವಿಗಳಲ್ಲಿನ ಗುಣಮಟ್ಟದ ಕಲಿಕೆ, ಅಧ್ಯಯನ, ಸಂಶೋಧನೆಯ ಮೇಲ್ವಿಚಾರಣೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜೊತೆ ಸಮಾಲೋಚನೆ, ಸಲಹೆ: ಯುಜಿಸಿಯ ಹೊಣೆಗಾರಿಕೆ.
ಈ ಉದ್ದೇಶಗಳಿಗಾಗಿ ಅನುದಾನ ಹಂಚಿಕೆ
ಸೆಕ್ಷನ್ 26: ಕಾಯ್ದೆಯ ಆದೇಶಗಳನ್ನು ಜಾರಿಗೊಳಿಸಲು, ಪಾಲಿಸಲು ನಿಯಂತ್ರಣಗಳು ಮತ್ತು ನಿಯಮಗಳನ್ನು ರೂಪಿಸುವ ಅಧಿಕಾರ ಯುಜಿಸಿಗೆ. ಈ ನಿಯಂತ್ರಣ ಮತ್ತು ನಿಯಮಗಳಲ್ಲಿ ಬೋಧಕ ಹುದ್ದೆಯಲ್ಲಿ ನೇಮಕ ಮಾಡಿಕೊಳ್ಳುವಾಗ ಪಾಲಿಸಬೇಕಾದ ಮಾರ್ಗಸೂಚಿಗಳು ಮುಖ್ಯವಾಗಿದೆ. ಇದು ವಿವಿಯ ಸಮಗ್ರ ಶೈಕ್ಷಣಿಕ ಗುಣಮಟ್ಟವನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ.
ಇದರ ಪ್ರಕಾರ ಉಪಕುಲಪತಿಗಳ ನೇಮಕಾತಿಯಲ್ಲಿನ ನೀತಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಯುಜಿಸಿಗೆ ಇರುವುದಿಲ್ಲ. ಯಾವುದೇ ತಿದ್ದುಪಡಿಯಲ್ಲಿ ರಾಜ್ಯ ಮತ್ತು ಕೇಂದ್ರ ವಿವಿಗಳ ನೇಮಕಾತಿಯನ್ನು ಆಯಾ ಶಾಸಕಾಂಗದ ಶಾಸನವನ್ನು ಆಧರಿಸಿರುತ್ತದೆ. ಯುಜಿಸಿ ಇದಕ್ಕೆ ಬದ್ಧವಾಗಿರಬೇಕಾಗುತ್ತದೆ.
ಸುರೇಶ್ ಪಾಟೀಲ್‌ಖೇಡೆ ವರ್ಸಸ್ ಮಹಾರಾಷ್ಟ್ರ ವಿವಿಗಳ ಕುಲಾಧಿಪತಿಗಳು ಮತ್ತು ಇತರರು(2011) ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ‘ಪ್ರೊ ಕುಲಪತಿ ಮತ್ತು ಉಪಕುಲಪತಿಗಳ ನೇಮಕಾತಿಗೆ ಅಗತ್ಯವಿರುವ ಅರ್ಹತೆ, ವಿಧಾನಗಳು ಶಿಕ್ಷಣದ ಸ್ಟಾಂಡರ್ಡ್ಸ್‌ಗಳನ್ನು ಈಡೇರಿಸುತ್ತದೆಯೆಂದು ಪರಿಗಣಿಸಬೇಕಾಗಿಲ್ಲ’ ಎಂದು ಹೇಳುತ್ತಾರೆ. ಅಂದರೆ ಉಪಕುಲಪತಿಗಳ ಆಯ್ಕೆಯಲ್ಲಿ ಯುಜಿಸಿಗೆ ಯಾವುದೇ ನಿಯಂತ್ರಣ ಮತ್ತು ನಿಯಮ ರೂಪಿಸಬೇಕೆನ್ನುವ ಆದೇಶವಿಲ್ಲ.
ಇನ್ನು ವಿಧಾನಮಂಡಲದ ಶಾಸನವನ್ನು ಮೀರಿ ಯುಜಿಸಿ ತಿದ್ದುಪಡಿಗಳನ್ನು ಮಾಡಬಹುದೇ? ಇದಕ್ಕೆ ಮಿಶ್ರ ತೀರ್ಪುಗಳು ಬಂದಿವೆ.
ವಿಧಿ 254ರ ಪ್ರಕಾರ ‘ರಾಜ್ಯದ ಕಾನೂನುಗಳು ಕೇಂದ್ರದ ಕಾನೂನುಗಳಿಗೆ ಪ್ರತಿಕೂಲವಾಗಿದ್ದರೆ ಅಷ್ಟರಮಟ್ಟಿಗೆ ರಾಜ್ಯಗಳ ಕಾನೂನು ಅಸಿಂಧು’ ಎಂದು ಹೇಳಲಾಗಿದೆ.
ಇಲ್ಲಿ ‘ಕಾನೂನು’ ಎಂದರೆ ರಾಜ್ಯ ವಿಧಾನಮಂಡಲಗಳಲ್ಲಿ ಅನುಮೋದಿಸಲ್ಪಟ್ಟು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸುವ ಮಸೂದೆಗಳು ಎಂದು ಪರಿಗಣಿಸಬೇಕಾಗುತ್ತದೆ. ಇಲ್ಲಿ ಕಾಯ್ದೆಗಳು ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ.
ಒಟ್ಟಾರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ, ಸಾಮಾಜಿಕ ನ್ಯಾಯವನ್ನು ಕೊನೆಗೊಳಿಸುವ ಯುಜಿಸಿ ನಿಯಮಾವಳಿಗಳ ತಿದ್ದುಪಡಿಯನ್ನು ವಿರೋಧಿಸಬೇಕಿದೆ, ಸಂಪೂರ್ಣವಾಗಿ ತಿರಸ್ಕರಿಸಬೇಕಿದೆ. ಇದಕ್ಕಾಗಿ ಪ್ರಜಾತಾಂತ್ರಿಕವಾದ ರಾಜಕೀಯ, ಸಾಮಾಜಿಕ ಜನಾಂದೋಲನ ಹಮ್ಮಿಕೊಳ್ಳಬೇಕಿದೆ.

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ