ಮಧ್ಯಪ್ರದೇಶದ ಅತ್ಯಂತ ವಿವಾದಾತ್ಮಕ ವ್ಯಾಪಂ ಹಗರಣ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಗರಣದಲ್ಲಿ ತಮ್ಮ ಹೆಸರು ಹೇಗೆ ಬಂತೆಂಬ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕಿ ಉಮಾ ಭಾರತಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ನಾಯಕಿ, “ಈ ಪ್ರಕರಣದಲ್ಲಿ ತನ್ನ ಪಾತ್ರ ಏನೇ ಇದ್ದರೂ ಹಗರಣದಲ್ಲಿ ನನ್ನ ಹೆಸರು ಹೇಗೆ ಬಂದಿದೆ ಎಂಬುದನ್ನು ನಿರ್ಧರಿಸಲು ಸಿಬಿಐ ತನಿಖೆಯಾಗಬೇಕು” ಎಂದು ಹೇಳಿದ್ದು ಮಧ್ಯಪ್ರದೇಶ ಅಪರಾಧ ವಿಭಾಗದ ಕಾರ್ಯನಿರ್ವಹಣೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಪಾರದರ್ಶಕತೆ ಅಗತ್ಯ ಎಂದರು.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಮಾಜಿ ಸಿಎಂ ಉಮಾ ಭಾರತಿ!
“ವ್ಯಾಪಂನಲ್ಲಿ ನನ್ನ ಹೆಸರು ಹೇಗೆ ಕಾಣಿಸಿಕೊಂಡಿತು ಎಂದು ನನಗೆ ಇನ್ನೂ ತಿಳಿದಿಲ್ಲ. ನಾನು ಶುಭಾಂಶು ಶುಕ್ಲಾ ಅವರ ಜಾಗಕ್ಕೆ ಬಂದಂತೆ ಭಾಸವಾಗುತ್ತಿದೆ. ನಾನು ಎಟಿಎಸ್ ಮತ್ತು ಸಿಬಿಐ ಅನ್ನು ನಂಬುತ್ತೇನೆ. ಆದರೆ ನನ್ನ ಹೆಸರು ಇದರಲ್ಲಿ ಸೇರಲು ಮಧ್ಯಪ್ರದೇಶ ಅಪರಾಧ ಶಾಖೆ ಏನು ಮಾಡಿದೆ? ಎಷ್ಟು ಜನ ಸತ್ತರು? ಎಷ್ಟು ಜೀವಗಳು ನಾಶವಾದವು? ನನ್ನ ಹೆಸರನ್ನು ಬಳಸಿಕೊಂಡು ಬೇರೆ ಯಾರನ್ನಾದರೂ ರಕ್ಷಿಸಲಾಗಿದೆಯೇ” ಎಂದು ಉಮಾ ಭಾರತಿ ಪ್ರಶ್ನಿಸಿದ್ದಾರೆ.
ಇನ್ನು ಈ ವೇಳೆ 1990 ಮತ್ತು 1992ರ ನಡುವೆ ತಮ್ಮ ಕುಟುಂಬ ಆಘಾತವನ್ನು ಎದುರಿಸಿದೆ ಎಂದೂ ಹೇಳಿದರು. “ನನ್ನ ಸಹೋದರರ ವಿರುದ್ಧ ನಕಲಿ ಡಕಾಯಿತಿ ಮತ್ತು ದರೋಡೆ ಪ್ರಕರಣಗಳನ್ನು ದಾಖಲಿಸಲಾಗಿದೆ. ದಿಗ್ವಿಜಯ ಸಿಂಗ್ ಸರ್ಕಾರದ ಅವಧಿಯಲ್ಲಿ ಕೊಲೆ ಪ್ರಕರಣವೂ ದಾಖಲಾಗಿತ್ತು” ಎಂದಿದ್ದಾರೆ.
“2013ರಲ್ಲಿ ವ್ಯಾಪಂ ಹಗರಣ ಭುಗಿಲೆದ್ದ ನಂತರವೂ ನನ್ನ ಮೇಲೆ ಕಿರುಕುಳ ಕೊನೆಗೊಂಡಿಲ್ಲ. ಇದರಿಂದಾಗಿ ತೀವ್ರ ಮಾನಸಿಕ ಯಾತನೆ ಉಂಟಾಗಿದೆ. ಆರುಷಿ ಕೊಲೆ ಪ್ರಕರಣದ ಸಮಯದಲ್ಲಿಯೂ ಸಹ, ಯುಪಿ ಪೊಲೀಸರು ಸಾಕ್ಷ್ಯಗಳನ್ನು ತಿರುಚಿದರು. ವ್ಯಾಪಂನಲ್ಲಿ ರಾಜ್ಯ ಪೊಲೀಸರ ಪಾತ್ರವೇನು? ಸತ್ಯ ಹೊರಬರಬೇಕು” ಎಂದು ಆಗ್ರಹಿಸಿದರು.
ಏನಿದು ವ್ಯಾಪಂ ಹಗರಣ?
ಮಧ್ಯಪ್ರದೇಶದ ವೃತ್ತಿಪರ ಶಿಕ್ಷಣ ಅಥವಾ ವ್ಯವಸಾಯಿಕ್ ಪರೀಕ್ಷಾ ಮಂಡಲ್(ವ್ಯಾಪಂ) ಮಧ್ಯಪ್ರದೇಶದ ಸ್ವಾಯತ್ತ ಸಂಸ್ಥೆಯಾಗಿದ್ದು 1970ರಲ್ಲಿ ಪ್ರಾರಂಭವಾಗಿದೆ. ಈ ಸಂಸ್ಥೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸುತ್ತದೆ. ಈ ಮಂಡಳಿಯು ವೃತ್ತಿ ಶಿಕ್ಷಣ ಪ್ರವೇಶ, ವೈದ್ಯರು, ಕಾನ್‌ಸ್ಟೆಬಲ್, ಶಿಕ್ಷಕರು ಮತ್ತಿತರ ಹುದ್ದೆಗಳ ನೇಮಕಾತಿಗೆ ಪ್ರವೇಶ ಪರೀಕ್ಷಗಳನ್ನು ನಡೆಯುತ್ತದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ರಾಹುಲ್ ಗಾಂಧಿ ವಿರುದ್ಧದ ಬಿಜೆಪಿ ಅಭ್ಯರ್ಥಿ ಮೇಲಿದೆ 242 ಪ್ರಕರಣಗಳು!
ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಾಗಿ ಇನ್ನೊಬ್ಬರು ಭಾಗಿಯಾಗಿ ಪರೀಕ್ಷೆ ಬರೆಯುತ್ತಿದ್ದರು. ವೈದ್ಯರಾದ ಡಾ. ಆನಂದ್ ರಾಯ್ ಅವರು ವ್ಯಾಪಂ ಹಗರಣವನ್ನು ಬಯಲು ಮಾಡಿದ್ದಾರೆ. ಅದಾದ ಬಳಿಕ ಹಲವು ನಿಗೂಢ ಮತ್ತು ಸರಣಿ ಸಾವುಗಳು ಸಂಭವಿಸಿದೆ. ಸುಮಾರು 40ಕ್ಕೂ ಅಧಿಕ ನಿಗೂಢ ಸಾವುಗಳು ವರದಿಯಾಗಿದೆ.
ಆರೋಪಿಗಳು, ಮಧ್ಯವರ್ತಿಗಳು, ಸಾಕ್ಷಿಗಳು, ವರದಿ ಮಾಡಲು ಹೋದ ಪತ್ರಕರ್ತರು- ಹೀಗೆ ಹಲವು ಮಂದಿ ಸಾವನ್ನಪ್ಪಿದ್ದಾರೆ. 2017ರ ಫೆಬ್ರವರಿ 13ರಂದು ಸುಪ್ರೀಂ ಕೋರ್ಟ್ ಸುಮಾರು 83 ಪುಟಗಳ ತೀರ್ಪನ್ನು ನೀಡಿದ್ದು ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯರಾಗಿದ್ದ 634 ಮಂದಿಯ ಪದವಿಯನ್ನು ರದ್ದು ಮಾಡಿದೆ.
