ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಅನ್ನು ಬಲವಂತವಾಗಿ ಅನುಷ್ಠಾನ ಮಾಡಿ ಮರಾಠಿಯನ್ನು ದುರ್ಬಲಗೊಳಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಶನಿವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠಿ ಮತ್ತು ಇಂಗ್ಲಿಷ್-ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯನ್ನಾಗಿ ಮಾಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ವಿರುದ್ಧ ವಿರೋಧ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಹಿಂದಿ ದಿವಸ | ಭಾಷಾ ಹೇರಿಕೆ ವಿರುದ್ಧ ಇಂದು ಪ್ರತಿಭಟನೆ: ‘ಕರಾಳ ದಿನ’ ಆಚರಣೆಗೆ ಕರವೇ ಕರೆ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಾರಾಮತಿ ಸಂಸದೆ ಸುಪ್ರಿಯಾ, “ಮಹಾರಾಷ್ಟ್ರದಲ್ಲಿ ಸಿಬಿಎಸ್‌ಇ ಮಂಡಳಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಶಿಕ್ಷಣ ಸಚಿವರ ಹೇಳಿಕೆಯನ್ನು ನಾನು ಮೊದಲು ವಿರೋಧಿಸುತ್ತೇನೆ. ಅಸ್ತಿತ್ವದಲ್ಲಿರುವ ರಾಜ್ಯ ಮಂಡಳಿಯನ್ನು ಸಿಬಿಎಸ್‌ಇಗೆ ಬದಲಾಯಿಸುವ ಅಗತ್ಯವೇನು” ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, “ಭಾಷಾ ಸಮಸ್ಯೆಯನ್ನು ಚರ್ಚಿಸುವ ಮೊದಲು, ನಾವು ರಾಜ್ಯದ ಮೂಲಭೂತ ಶಿಕ್ಷಣ ಮೂಲಸೌಕರ್ಯದ ಬಗ್ಗೆ ಮಾತನಾಡಬೇಕು” ಎಂದು ಅಭಿಪ್ರಾಯಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಪ್ರಥಮ್ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆ ಬಿಡುಗಡೆ ಮಾಡಿದ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER)ಯನ್ನೂ ಸಂಸದೆ ಉಲ್ಲೇಖಿಸಿದ್ದಾರೆ. ಗಣಿತ, ವಿಜ್ಞಾನ ಮತ್ತು ಭಾಷೆಗಳನ್ನು ಅಧ್ಯಯನ ಮಾಡುವ ವಿಚಾರದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಈ ವೇಳೆಯೇ, “ಸರ್ಕಾರ ಎನ್‌ಇಪಿ ಅನ್ನು ಜಾರಿಗೆ ತರಲು ಆತುರಪಡಬಾರದು. ಎನ್‌ಇಪಿ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶಿಕ್ಷಕರೂ ಈ ಬದಲಾವಣೆಗೆ ಸಿದ್ಧರಾಗಿಲ್ಲ” ಎಂದು ವಿವರಿಸಿದರು.
“ಮಹಾರಾಷ್ಟ್ರದಲ್ಲಿ ಎನ್‌ಇಪಿ ಜಾರಿಯಿಂದಾಗಿ ಮರಾಠಿ ಭಾಷೆಗೆ ಯಾವುದೇ ನಷ್ಟ ಉಂಟಾದರೂ ಅದನ್ನು ಸಹಿಸಲಾಗುವುದಿಲ್ಲ. ಮರಾಠಿ ಆದ್ಯತೆಯಾಗಿರಬೇಕು. ಇತರ ಭಾಷೆಗಳನ್ನು ಪರಿಚಯಿಸುವುದಾದರೆ, ಯಾವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಪೋಷಕರಿಗೆ ಬಿಡಬೇಕು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹಿಂದಿ ಭಾಷಾ ಹೇರಿಕೆ ವಿವಾದದ ನಡುವೆ ಡೈರಿ ಮಿಲ್ಕ್ ಹೊಸ ಜಾಹೀರಾತು ವೈರಲ್
“ಯಾವುದೇ ಭಾಷೆಯನ್ನೂ ಕಡ್ಡಾಯಗೊಳಿಸುವುದು ಸರಿಯಲ್ಲ. ಮರಾಠಿ ರಾಜ್ಯದ ನಿವಾಸಿಗಳ ಮಾತೃಭಾಷೆ. ಮರಾಠಿ ಎಂದಿಗೂ ಮೊದಲ ಭಾಷೆಯಾಗಿಯೇ ಉಳಿಯಬೇಕು” ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇದರ ಮೂಲಕ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬುದು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಆರೋಪವಾಗಿದೆ. ಕೇಂದ್ರ ಸರ್ಕಾರವು ಇತರೆ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಕನ್ನಡ, ತಮಿಳು, ತೆಲುಗು, ಮರಾಠಿ ಭಾಷಿಕರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
