2020ರಲ್ಲಿ ನಟಿ ಕಂಗನಾ ರಣಾವತ್ ಅವರನ್ನು ರಕ್ಷಿಸಿದಂತೆ ಈಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಬಗ್ಗೆ ಟೀಕೆ ಮಾಡಿರುವ ಸ್ಟಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಅವರಿಗೆ ಕೇಂದ್ರ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಶನಿವಾರ ಆಗ್ರಹಿಸಿದ್ದಾರೆ.
ಹಾಸ್ಯ ಕಾರ್ಯಕ್ರಮವೊಂದರಲ್ಲಿ ಸ್ಟಾಂಡಪ್ ಕಾಮೆಡಿ ಮಾಡಿದ್ದ ಕುನಾಲ್ ಕಾಮ್ರಾ, ಶಿಂದೆ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು. ತನ್ನದೇ ಪಕ್ಷವನ್ನು ಇಬ್ಭಾಗ ಮಾಡಿದ ದ್ರೋಹಿ ಎಂದು ಕರೆದಿದ್ದರು. ಆದರೆ ಎಲ್ಲಿಯೂ ಶಿಂದೆ ಹೆಸರನ್ನು ಉಲ್ಲೇಖಿಸದೆ ಥಾಣೆಯ ನಾಯಕ ಎಂದಿದ್ದರು.
ಇದನ್ನು ಓದಿದ್ದೀರಾ? ಶಿವಸೇನೆ ಕಾರ್ಯಕರ್ತರನ್ನು ಕುಟುಕಿದ ಕುನಾಲ್ ಕಾಮ್ರಾ ಹೊಸ ಹಾಡು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಶಿಂದೆ ಕಾರ್ಯಕರ್ತರು ಹಾಸ್ಯ ಕಾರ್ಯಕ್ರಮ ನಡೆದ ಸ್ಟುಡಿಯೋವನ್ನು ಧ್ವಂಸ ಮಾಡಿದ್ದರು. ಹೊಟೇಲ್‌ನಲ್ಲಿ ದಾಂಧಲೆ ಮಾಡಿದ್ದರು. ಹಾಗೆಯೇ ಕುನಾಲ್‌ಗೆ ಜೀವ ಬೆದರಿಕೆ ಕೂಡಾ ಹಾಕಿದ್ದರು. ಕುನಾಲ್ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಶನಿವಾರ ಮತ್ತೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ನಡುವೆ ಶಿವಸೇನೆ ನಾಯಕರು, ಕಾರ್ಯಕರ್ತರಿಂದ ಜೀವ ಬೆದರಿಕೆಯನ್ನು ಎದುರಿಸುತ್ತಿರುವ ಕುನಾಲ್ ಕಾಮ್ರಾ ಅವರಿಗೆ ರಕ್ಷಣೆ ಒದಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ಸಂದರ್ಭದಲ್ಲೇ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯನ್ನು ಪ್ರತಿಪಾದಿಸುವ ಕವಿತೆಯ ವಿಡಿಯೋವನ್ನು ಪೋಸ್ಟ್ ಮಾಡಿರುವ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗರ್ಹಿ ವಿರುದ್ಧ ದಾಖಲಾಗಿದ್ದು ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಆದೇಶವನ್ನೂ ರಾವತ್ ಸ್ವಾಗತಿಸಿದರು. ಪ್ರತಾಪ್‌ಗರ್ಹಿಯಂತೆ ಕಾಮ್ರಾ ಕೂಡಾ ಓರ್ವ ಕಲಾವಿದ, ಕವಿ, ವಿಡಂಬನಕಾರ ಎಂದು ಸಂಸದರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕುನಾಲ್ ಕಾಮ್ರಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಲು ಒಪ್ಪಿಗೆ ನೀಡಿದ ಮಹಾರಾಷ್ಟ್ರ ವಿಧಾನ ಪರಿಷತ್
“ಕಾಮ್ರಾ ಮುಂಬೈಗೆ ಬಂದು ತನ್ನ ವಾದವನ್ನು ಪೊಲೀಸರ ಮುಂದೆ ಇರಿಸಬೇಕು. ಕಂಗನಾ ರಣಾವತ್ ಅವರನ್ನು ನಾವು ಅವರ ಮೇಲೆ ದಾಳಿ ಮಾಡುತ್ತೇವೆ ಎಂಬ ಭಯದಿಂದ ಕೇಂದ್ರ ಸರ್ಕಾರ ರಕ್ಷಿಸಿತ್ತು. ಕುನಾಲ್ ಕಾಮ್ರಾ ಅವರಿಗೂ ವಿಶೇಷ ರಕ್ಷಣೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಆಗ್ರಹಿಸಿದರು.
2020ರಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಾಂದ್ರಾದಲ್ಲಿರುವ ಕಂಗನಾ ರಣಾವತ್ ಅವರ ಬಂಗಲೆಯ ಒಂದು ಭಾಗವನ್ನು ಅಕ್ರಮವೆಂದು ಹೇಳಿ ಕೆಡವಲಾಗಿತ್ತು. ಇದರಿಂದಾಗಿ ನಟಿ ಮತ್ತು ಶಿವಸೇನೆ ನಾಯಕರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅದಾದ ಬಳಿಕ ಪ್ರಸ್ತುತ ಹಿಮಾಚಲ ಪ್ರದೇಶದ ಬಿಜೆಪಿ ಸಂಸದೆಯಾಗಿರುವ ರಣಾವತ್ ಅವರಿಗೆ ಕೇಂದ್ರ ಸರ್ಕಾರವು ರಕ್ಷಣೆ ನೀಡಿತ್ತು.
