ಉಡುಪಿಯ ಮಲ್ಪೆ ಬಂದರನ್ನು ಸಂಪರ್ಕಿಸುವ ಪ್ರಮುಖ ಕರಾವಳಿ ಬೈಪಾಸ್- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮೀನುಗಾರ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಮೀನುಗಾರ ಮುಖಂಡ ಕಿಶೋರ್ ಡಿ.ಸುವರ್ಣ, “ಕೋಟ್ಯಂತರ ರೂ. ಆದಾಯ ಬರುವ ಮತ್ತು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಕೇಂದ್ರವಾಗಿರುವ ಮಲ್ಪೆ ಬಂದರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸರ್ವೆ, ಅಗಲ, ಉದ್ದ ಮತ್ತು ಪರಿಹಾರದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರ ವಿರುದ್ಧ ಹಲವು ಮಂದಿ ಕೋರ್ಟ್‌ಗೆ ಹೋಗಿದ್ದಾರೆ” ಎಂದರು.
ನೀವು ಕಳೆದ 10 ವರ್ಷಗಳಲ್ಲಿ ಏನು ಮಾಡಿದ್ದೀರಾ? ನಿಮಗೆ ಮತ ಹಾಕಿದ್ದೀವಲ್ವಾ? ನಿಮ್ಮ ಸಾಧನೆ ಏನು?
ಕರಾವಳಿ ಬೈಪಾಸ್ – ಮಲ್ಪೆ ರಾ.ಹೆ. ಕಾಮಗಾರಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮೀನುಗಾರ ಮುಖಂಡರು@ShobhaBJP @BJP4Karnataka @INCKarnataka @JanataDal_S @siddaramaiah @CMofKarnataka pic.twitter.com/mg182iXcub
— eedina.com (@eedinanews) February 16, 2024
“ಇಲ್ಲಿ ಪರಿಹಾರ ಕಾರ್ಯ ಕೂಡ ವೈಜ್ಞಾನಿಕ ನಡೆದಿಲ್ಲ. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ ಕೋಟ್ಯಂತ ರೂ. ಆದಾಯ ಇರುವ ಈ ರಸ್ತೆಗೆ ಸಂಬಂಧಿಸಿ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಹಾಕುವುದರಲ್ಲಿ ಅರ್ಥ ಇದೆಯೇ?” ಎಂದು ಅವರು ಸಂಸದೆ ವಿರುದ್ಧ ಕಿಡಿಕಾರಿದರು.
“ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ, ಗೆಲ್ಲಿಸಿದ್ದೇವೆ. ಆದರೆ ನೀವು ನಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ. ರಸ್ತೆಯಲ್ಲಿ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಸಂಸದರಾಗಿ ನೀವು ಕರೆದಿಲ್ಲ. ನೀವು ನಮ್ಮ ಜನಪ್ರತಿನಿಧಿ ಅಲ್ಲವೇ? ನಿಮಗೆ ಕರ್ತವ್ಯ ಇಲ್ಲವೇ? ಜನರನ್ನು ಯಾಕೆ ನೀವು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ” ಎಂದು ಅವರು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ, “ನೀವು Too Much ಮಾತನಾಡಬೇಡಿ, ವೈಯಕ್ತಿಕ ಸಮಸ್ಯೆ ಹೇಳಬೇಡಿ” ಎಂದರು. ಇದರಿಂದ ಮತ್ತಷ್ಟು ಕೆರಳಿದ ಕಿಶೋರ್ ಅವರು, “ನಾನು ಜನರಿಗಾಗಿರುವ ಸಮಸ್ಯೆ ಹೇಳಿದರೆ, ಅದರಲ್ಲಿ ವೈಯಕ್ತಿಕ ಏನು? ಇಲ್ಲಿ ಕುಳಿತಿರುವವರು ಎಲ್ಲರೂ ಸಾಕ್ಷಿ ಇದ್ದಾರೆ” ಎಂದರು. ಈ ನಡುವೆ ವಾಗ್ವಾದ ಜೋರಾಗಿದ್ದರಿಂದ ಮೀನುಗಾರ ಮುಖಂಡನನ್ನು ಪೊಲೀಸರು ಸಮಾಧಾನಿಸುತ್ತಿರುವುದು ಕಂಡು ಬಂತು. ಈ ಎಲ್ಲ ಬೆಳವಣಿಗೆ ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲಾಗಿದೆ.
ಕೇಂದ್ರ ಸಚಿವೆ ಹಾಗೂ ಮೀನುಗಾರ ಮುಖಂಡರ ನಡುವೆ ವಾಗ್ವಾದ ನಡೆಯುತ್ತಿರುವಾಗ ಉಡುಪಿಯ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಕೂಡ ಸಭೆಯಲ್ಲಿದ್ದರು. ಅವರು ಕೂಡ ಕಕ್ಕಾಬಿಕ್ಕಿಯಾಗಿ, ಸುಮ್ಮನೆ ಕುಳಿತಿದ್ದರು. ಈ ನಡುವೆ ಮೀನುಗಾರ ಮುಖಂಡ ಕಿಶೋರ್ ಅವರ ಹೆಸರೆತ್ತಿ, ಕುಳಿತಲ್ಲಿಂದಲೇ ಸಮಾಧಾನಿಸಲು ಕೂಡ ಯತ್ನಿಸಿದರು. ಮಾತಿನ ಮಧ್ಯೆ ಕೆಲವೊಂದು ತಾಂತ್ರಿಕ ಕಾರಣಗಳಿರುವುದಾಗಿಯೂ ಶಾಸಕ ಯಶ್ಪಾಲ್ ಸುವರ್ಣ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.